ADVERTISEMENT

BIFF:ಜಾತಿ ತಾರತಮ್ಯ ಕುರಿತ ಸಿನಿಮಾದಿಂದ ಜನರು ಇಬ್ಭಾಗ– ನಿರ್ದೇಶಕ ಗೌತಮ್‌ ಮೆನನ್‌

ತಮಿಳಿನ ಖ್ಯಾತ ನಿರ್ದೇಶಕ ಗೌತಮ್‌ ವಾಸುದೇವ್‌ ಮೆನನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 20:36 IST
Last Updated 5 ಮಾರ್ಚ್ 2025, 20:36 IST
ಗೌತಮ್‌ ವಾಸುದೇವ್‌ ಮೆನನ್‌ 
ಗೌತಮ್‌ ವಾಸುದೇವ್‌ ಮೆನನ್‌    

ಬೆಂಗಳೂರು: ‘ಜಾತಿಗಳ ನಡುವೆ ಇರುವ ಬಿರುಕನ್ನು ಮತ್ತೆ ಮತ್ತೆ ಬೊಟ್ಟು ಮಾಡುತ್ತಿದ್ದರೆ ಇದು ಜನರನ್ನು ಇಬ್ಭಾಗಗೊಳಿಸುತ್ತದೆ. ಈ ಬಿರುಕು ಹೆಚ್ಚುತ್ತಲೇ ಹೋಗುತ್ತದೆ’ ಎಂದು ತಮಿಳಿನ ನಿರ್ದೇಶಕ, ನಟ ಗೌತಮ್‌ ವಾಸುದೇವ್‌ ಮೆನನ್‌ ಹೇಳಿದರು. 

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ದಿ ಆರ್ಟ್‌ ಆಫ್‌ ಸಿನಿಮಾ’ ಎಂಬ ವಿಷಯದ ಕುರಿತ ಮಾಸ್ಟರ್‌ ಕ್ಲಾಸ್‌ನಲ್ಲಿ ಗೌತಮ್‌ ಭಾಗವಹಿಸಿ ಮಾತನಾಡಿದರು. 

‘80–90ರ ದಶಕದಲ್ಲಿನ ಜಾತಿ ತಾರತಮ್ಯದ ವಿಷಯಗಳನ್ನು ಕಥೆಯಾಗಿರಿಸಿಕೊಂಡು ಸಿನಿಮಾಗಳು ಬರುತ್ತಿದ್ದು, ಇನ್ನುಮುಂದೆ ಈ ರೀತಿಯ ಕಥೆಗಳ ಅಗತ್ಯವಿಲ್ಲ’ ಎಂದು ಇತ್ತೀಚೆಗೆ ಗೌತಮ್‌ ಸಂದರ್ಶನವೊಂದರಲ್ಲಿ ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಅವರು ‘ಮಾಸ್ಟರ್‌ ಕ್ಲಾಸ್‌’ನಲ್ಲಿ ಪ್ರತಿಕ್ರಿಯಾತ್ಮಕವಾಗಿ ಮಾತನಾಡಿದರು. 

ADVERTISEMENT

ಗೌತಮ್‌ ಹೇಳಿಕೆಯನ್ನು ಸಮನ್ವಯಕಾರರಾದ ಚಿತ್ರವಿಮರ್ಶಕಿ ಶುಭ್ರ ಗುಪ್ತ ಪ್ರಸ್ತಾವ ಮಾಡಿದಾಗ, ‘ಇತ್ತೀಚೆಗೆ ಜಾತಿ ತಾರತಮ್ಯದ ವಿಷಯವುಳ್ಳ ಸಿನಿಮಾಗಳು ಹೆಚ್ಚು ಬರುತ್ತಿವೆ. ಬೇರೆ ಬೇರೆ ಕಥೆಯುಳ್ಳ ಸಿನಿಮಾಗಳೂ ಬೇಕು ಎಂದು ನಾನು ಹೇಳಿದ್ದೆ. ಜಾತಿ ಹಾಗೂ ಅದರಿಂದ ಉದ್ಭವಿಸುವ ಸಮಸ್ಯೆ, ತಾರತಮ್ಯ ಸಮಾಜದಲ್ಲಿ ಇಲ್ಲ ಎಂದಿಲ್ಲ. ನನ್ನ ತಲೆಯಲ್ಲಿ ಇದಕ್ಕೆ ಜಾಗವಿಲ್ಲ. ಜಾತಿಯನ್ನು ನಾನು ನಂಬುವುದಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. 80–90ರ ಕಾಲಘಟ್ಟವನ್ನು ಇಟ್ಟುಕೊಂಡು ಜಾತಿ ತಾರತಮ್ಯದ ಕಥೆಯನ್ನು ಹೊತ್ತ ಸಿನಿಮಾಗಳು ಬರುತ್ತಿವೆ. ಇವತ್ತಿನ ಕಥೆಗಳನ್ನು ಹೇಳಿ, ಅಂತಹ ಸಿನಿಮಾಗಳನ್ನು ನಾನು ಇಷ್ಟಪಡುತ್ತೇನೆ’ ಎಂದು ಗೌತಮ್‌ ಸ್ಪಷ್ಟನೆ ನೀಡಿದರು. 

ನಾವೇ ಕೊಲ್ಲುತ್ತಿದ್ದೇವೆ: ‘ಒಟಿಟಿಯವರು ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸುತ್ತಾರೆ. ಹೀಗಾಗಿ ಉಳಿದ ಸಣ್ಣ ಸಿನಿಮಾಗಳನ್ನು ಖರೀದಿಸಲು ಅವರ ಬಳಿ ಹಣವಿಲ್ಲ. ಚಿತ್ರಮಂದಿರಗಳನ್ನು ನಾವೇ ಕೊಲ್ಲುತ್ತಿದ್ದೇವೆ ಎನ್ನಬಹುದು. ನಮಗೆ ಸಿನಿಮಾಗಳ ಡಿಜಿಟಲ್‌ ಮಾರಾಟ ಮೊದಲೇ ಆಗಬೇಕು. ಆ ಹಣದಿಂದಲೇ ಸಿನಿಮಾದ ಉಳಿದ ಚಿತ್ರೀಕರಣದ ಖರ್ಚು ಸಾಗುತ್ತದೆ. ಚಿತ್ರಮಂದಿರಗಳಲ್ಲಿ ಸಿಗುವ ಹಣವನ್ನು ಬೋನಸ್‌ ಎಂದು ಎಲ್ಲ ನಿರ್ಮಾಪಕರು ಅಂದುಕೊಂಡಿದ್ದಾರೆ. ಈ ಮೂಲಕ ತಮ್ಮ ಸಿನಿಮಾಗಳನ್ನು, ವಹಿವಾಟನ್ನು ಕೊಲ್ಲುತ್ತಿದ್ದಾರೆ. ಆರಂಭದಲ್ಲಿ ಒಟಿಟಿ ಎನ್ನುವುದು ಸಿನಿಮಾಗಳಿಗೆ ಅತ್ಯುತ್ತಮ ವೇದಿಕೆ ಎಂದುಕೊಂಡಿದ್ದೆ. ಡಿಜಿಟಲ್‌ ಐಡಿಯಾ ಎನ್ನುವುದು ಕ್ರಮೇಣ ಕ್ಷೀಣಿಸಿ, ಮತ್ತೆ ಚಿತ್ರಮಂದಿರಗಳ ವೈಭವ ಮರುಕಳಿಸಲಿದೆ’ ಎಂದು ಗೌತಮ್‌ ವಿಶ್ವಾಸ ವ್ಯಕ್ತಪಡಿಸಿದರು.  

‘ನಾವು ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಿದ್ದ ಕಾರಣ ಸಿನಿಮಾ ಮೇಲೆ ಪ್ರೀತಿ ಮೂಡಿತು. ಈಗ ಚಿತ್ರಮಂದಿರಗಳಿಗೆ ಬನ್ನಿ ಎಂದು ಪ್ರೇಕ್ಷಕರಲ್ಲಿ ಬೇಡುವ ಸ್ಥಿತಿ ಬಂದಿದೆ. ಅತ್ಯುತ್ತಮ ಕಥೆಗಳನ್ನು ಬರೆಯುವ, ಪರದೆ ಮೇಲೆ ಉತ್ಕೃಷ್ಟವಾದ ಅನುಭವ ನೀಡುವ ಅವಶ್ಯಕತೆ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನನ್ನದೇ ಒಂದು ಸಿನಿಮಾ ಹೌಸ್‌ಫುಲ್‌ ಆಗಿರುವುದನ್ನು, ಮತ್ತೊಂದು ಸಿನಿಮಾವನ್ನು ಐದಾರು ಪ್ರೇಕ್ಷಕರಷ್ಟೇ ನೋಡುತ್ತಿರುವುದನ್ನು ಕಂಡಿದ್ದೇನೆ. ಜನರಿಗೆ ಯಾವ ಕಥೆ ಇಷ್ಟವಾಗುತ್ತದೆ ಎಂದು ಊಹಿಸುವುದೂ ಕಷ್ಟ. ಇದುವೇ ಮತ್ತಷ್ಟು ಸಿನಿಮಾಗಳನ್ನು ಮಾಡಲು ಸ್ಫೂರ್ತಿ’ ಎಂದರು.

ಸಂವಾದದಲ್ಲಿ  ವಿದ್ಯಾರ್ಥಿಗಳು, ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹೀರೊಗಳಿಗೆ ಪ್ರೇಮಕಥೆ ಬೇಡ!

‘ಇತ್ತೀಚಿನ ದಿನಗಳಲ್ಲಿ ಪ್ರೇಮಕಥೆಯುಳ್ಳ ಸಿನಿಮಾಗಳನ್ನು ಮಾಡುವ ಸ್ಟಾರ್‌ ನಟರಿಲ್ಲ. ಇದೊಂದು ಪ್ರೇಮಕಥೆಯೆಂದರೆ ನಟರು ಕಥೆಯನ್ನೇ ಕೇಳುವುದಿಲ್ಲ. ಹಿಂದಿ ತೆಲುಗು ಕನ್ನಡ ಚಿತ್ರರಂಗದ ಖ್ಯಾತ ನಟರನ್ನು ಕೇಳಿದ್ದೇನೆ ಯಾರೂ ನನ್ನ ಪ್ರೇಮಕಥೆಯೊಂದನ್ನು ಒಪ್ಪಿಕೊಂಡಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವ ಸಾಮರ್ಥ್ಯ ಹೊಂದಿರುವ ಬಿಗ್‌ ಸ್ಟಾರ್‌ ಒಬ್ಬರಿಗೆ ಈ ಸಿನಿಮಾ ಮಾಡಿದರೆ ಪ್ರೇಕ್ಷಕರಿಗೆ ನನ್ನ ಪ್ರೇಮಕಥೆಯನ್ನು ತಲುಪಿಸುವುದು ಸುಲಭ ಎಂದುಕೊಂಡಿದ್ದೆ. ಇದೊಂದು ಸೂಪರ್‌ ಸ್ಟಾರ್‌ ನಟನ ಪ್ರೇಮಕಥೆಯಾಗಿತ್ತು. ಇತ್ತೀಚೆಗೆ ಯಾವುದೇ ಪ್ರೇಮಕಥೆಗಳು ಬರುತ್ತಿಲ್ಲ. ನಟರಿಗೂ ಪ್ರೇಮಕಥೆಗಳು ಬೇಕಿಲ್ಲ. ಯಾರಾದರೂ ಒಬ್ಬರು ಸಿಕ್ಕೇ ಸಿಗುತ್ತಾರೆ. ಸ್ಟಾರ್‌ ಅಲ್ಲದ ನಟನೊಬ್ಬನನ್ನು ಹಾಕಿಕೊಂಡು ಈ ಸಿನಿಮಾ ಮಾಡುವ ಯೋಚನೆಯಲ್ಲಿದ್ದೇನೆ. ಮಣಿರತ್ನಂ ಅವರು ‘ಅಲೈಪಾಯುದೆ’ ಮಾಡುವಾಗ ಮಾಧವನ್‌ ಸ್ಟಾರ್‌ ನಟ ಆಗಿರಲಿಲ್ಲ. ಮಣಿರತ್ನಂ ಅವರೇ ನನಗೆ ಸ್ಫೂರ್ತಿ’ ಎಂದರು ಗೌತಮ್‌.      

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.