ADVERTISEMENT

ಚಲನಚಿತ್ರೋತ್ಸವ- ಒಟಿಟಿ; ಕಥೆ ಹೇಳುವವರ ಮುಕ್ತ ಮಾಧ್ಯಮ

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 20:12 IST
Last Updated 6 ಮಾರ್ಚ್ 2022, 20:12 IST
13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ‘ಒರಿಜಿನಲ್‌ ಕಂಟೆಂಟ್‌ ಕ್ರಿಯೇಷನ್‌ ಆ್ಯಂಡ್‌ ಅಕ್ವಿಸಿಷನ್‌ ಇನ್‌ ಒಟಿಟಿಸ್‌’ ವಿಷಯದ ಮೇಲಿನ ಗೋಷ್ಠಿಯಲ್ಲಿ ಜೀ 5 ಹಿಂದಿ ಸರಣಿಗಳ ವಿಭಾಗದ ಉಪಾಧ್ಯಕ್ಷೆ ಪ್ರಗತಿ ದೇಶ್‌ಮುಖ್‌ ಮಾತನಾಡಿದರು. (ಎಡದಿಂದ) ಕಲರ್ಸ್‌ ಕನ್ನಡ ವಾಹಿನಿಯ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ಜೀ 5ನ ಕನ್ನಡ ಸರಣಿಗಳ ಮುಖ್ಯಸ್ಥ ಪ್ರದೀಪ್‌ ಕುಮಾರ್‌, ‘ಮುಬಿ’ಯ ಏಷ್ಯಾ ವಿಭಾಗದ ಕಾರ್ಯಕ್ರಮ ನಿರ್ದೇಶಕಿ ಸ್ವೆಟ್ಲಾನಾ ನೌಡಿಯಾಳ್‌ ಮತ್ತು ಅಮೆಝಾನ್‌ ಪ್ರೈಮ್‌ ವಿಡಿಯೋದ ಕಂಟೆಂಟ್‌ ಲೈಸೆನ್ಸಿಂಗ್‌ ವಿಭಾಗದ ಮುಖ್ಯಸ್ಥ ಮನೀಷ್‌ ಮೆಂಘಾನಿ ಇದ್ದರು. - ಪ್ರಜಾವಾಣಿ ಚಿತ್ರ
13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ‘ಒರಿಜಿನಲ್‌ ಕಂಟೆಂಟ್‌ ಕ್ರಿಯೇಷನ್‌ ಆ್ಯಂಡ್‌ ಅಕ್ವಿಸಿಷನ್‌ ಇನ್‌ ಒಟಿಟಿಸ್‌’ ವಿಷಯದ ಮೇಲಿನ ಗೋಷ್ಠಿಯಲ್ಲಿ ಜೀ 5 ಹಿಂದಿ ಸರಣಿಗಳ ವಿಭಾಗದ ಉಪಾಧ್ಯಕ್ಷೆ ಪ್ರಗತಿ ದೇಶ್‌ಮುಖ್‌ ಮಾತನಾಡಿದರು. (ಎಡದಿಂದ) ಕಲರ್ಸ್‌ ಕನ್ನಡ ವಾಹಿನಿಯ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌, ಜೀ 5ನ ಕನ್ನಡ ಸರಣಿಗಳ ಮುಖ್ಯಸ್ಥ ಪ್ರದೀಪ್‌ ಕುಮಾರ್‌, ‘ಮುಬಿ’ಯ ಏಷ್ಯಾ ವಿಭಾಗದ ಕಾರ್ಯಕ್ರಮ ನಿರ್ದೇಶಕಿ ಸ್ವೆಟ್ಲಾನಾ ನೌಡಿಯಾಳ್‌ ಮತ್ತು ಅಮೆಝಾನ್‌ ಪ್ರೈಮ್‌ ವಿಡಿಯೋದ ಕಂಟೆಂಟ್‌ ಲೈಸೆನ್ಸಿಂಗ್‌ ವಿಭಾಗದ ಮುಖ್ಯಸ್ಥ ಮನೀಷ್‌ ಮೆಂಘಾನಿ ಇದ್ದರು. - ಪ್ರಜಾವಾಣಿ ಚಿತ್ರ   

ಬೆಂಗಳೂರು: ಓವರ್‌ ದಿ ಟಾಪ್‌ ವೇದಿಕೆಗಳು ಕಥೆ ಹೇಳುವವರ ಮತ್ತು ಬರಹಗಾರರ ಮಾಧ್ಯಮ...

ಇದು 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾನುವಾರ ‘ಒರಿಜಿನಲ್‌ ಕಂಟೆಂಟ್‌ ಕ್ರಿಯೇಷನ್‌ ಆ್ಯಂಡ್‌ ಅಕ್ವಿಸಿಷನ್‌ ಇನ್‌ ಒಟಿಟಿಸ್‌’ ವಿಷಯದ ಮೇಲಿನ ಗೋಷ್ಠಿಯಲ್ಲಿ ಆ ಕ್ಷೇತ್ರದ ವಿಷಯ ಪರಿಣತರ ಒಕ್ಕೊರಲ ಮಾತು.

‘ಒಟ್ಟಾರೆ ಸಿನಿಮಾ ಅಥವಾ ಟೆಲಿವಿಷನ್‌ ಕಾರ್ಯಕ್ರಮ ನಿರ್ಮಾಣಗಳಲ್ಲಿ ಒಂದೆಡೆ ವಿಜ್ಞಾನ ಮತ್ತೊಂದೆಡೆ ವ್ಯವಹಾರ ಇದೆ. ಕೊನೆಗೂ ಅದು ಮಾರುಕಟ್ಟೆಯಾಗಿ ವೀಕ್ಷಕನನ್ನು ತಲುಪಲೇಬೇಕು. ಅದಕ್ಕಾಗಿ ಒಟಿಟಿಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದೇವೆ. ಇಲ್ಲಿ ಕಥೆ ಹೇಳುವವರಿಗೆ ಸ್ವಾತಂತ್ರ್ಯವಿದೆ’ ಎಂದುಜೀ 5ನ ಕನ್ನಡ ಸರಣಿಗಳ ಮುಖ್ಯಸ್ಥ ಪ್ರದೀಪ್‌ ಕುಮಾರ್‌ ವಿಶ್ಲೇಷಿಸಿದರು.

ADVERTISEMENT

‘ವಿಷಯ (ಕಂಟೆಂಟ್‌) ನಿರ್ಮಾಪಕರು ಪ್ರೇಕ್ಷಕನನ್ನು ತಲುಪಲು ಮುಕ್ತ ವೇದಿಕೆ. ಏಕೆಂದರೆ ಇಲ್ಲಿ ಸಿನಿಮಾದ ವಿತರಣೆ, ಪ್ರದರ್ಶನಗಳ ಸಮಸ್ಯೆ, ಚಿತ್ರಮಂದಿರಗಳ ಲಭ್ಯತೆ ಇತ್ಯಾದಿ ತಲೆನೋವುಗಳು ಕಡಿಮೆ. ಯಶಸ್ಸು ಅಥವಾ ಸೋಲಿನ ಆತಂಕ ಇಲ್ಲಿಯೂ ಇದೆ. ಚಿತ್ರಮಂದಿರಗಳಲ್ಲಿ ಎರಡು ಗಂಟೆಗಳಲ್ಲಿ ಹೇಳಲಾಗದ್ದನ್ನು ಇಲ್ಲಿ ಸರಣಿಯ ರೂಪದಲ್ಲಿ ಹೇಳಬಹುದು’ ಎಂದರುಅಮೆಝಾನ್‌ ಪ್ರೈಮ್‌ ವಿಡಿಯೋದ ಕಂಟೆಂಟ್‌ ಲೈಸೆನ್ಸಿಂಗ್‌ ವಿಭಾಗದ ಮುಖ್ಯಸ್ಥ ಮನೀಷ್‌ ಮೆಂಘಾನಿ.

‘ಹಣದ ಹಿಂದೆ ಹೋದ ಕೆಲವು ನಿರ್ಮಾಪಕರು ಸಿನಿಮಾ ಕಂಟೆಂಟನ್ನು ಭ್ರಷ್ಟಗೊಳಿಸಿದ್ದಾರೆ. ಬೇರೆಡೆಗೆ ಹೋಲಿಸಿದರೆ ನಮ್ಮಲ್ಲಿ ಒಳ್ಳೆಯ ಬರಹಗಾರರಿದ್ದಾರೆ. ಒಟಿಟಿ ಒರಿಜಿನಲ್ಸ್‌ಗೆ ಕತೆ ಹೇಳುವ ರೀತಿಯನ್ನು ಸ್ವಲ್ಪ ಬದಲಾಯಿಸಬೇಕಾಗುತ್ತದೆ’ ಎಂದುಕಲರ್ಸ್‌ ಕನ್ನಡ ವಾಹಿನಿಯ ಬಿಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಹೇಳಿದರು.

‘ಕಥೆಗಳಿಗೆ ಬೇಡಿಕೆ ಇದೆ. ಬರಹಗಾರರು ತಮ್ಮ ಕಥೆಯನ್ನು ಒಂದು ಸಾಲಿನಲ್ಲಿ (ಸಂಕ್ಷಿಪ್ತವಾಗಿ) ಪ್ರಸ್ತುತಪಡಿಸುವ ಸಾಮರ್ಥ್ಯ ಹೊಂದಿರಬೇಕು. ಅಥವಾ ನಿರ್ಮಾಣವಾದ ವಿಷಯವನ್ನು ಚಿತ್ರಮಂದಿರದಲ್ಲೇ ಬಂದು ನೋಡಿ ಎಂದು ಹೇಳುವ ಹಟಮಾರಿತನ ಇರಬಾರದು. ಏಕೆಂದರೆ ಒಟಿಟಿ ನಿರ್ವಾಹಕರು ತಾಂತ್ರಿಕ ಪರಿಣತಿಯನ್ನು ಹೊಂದಿದವರೇ ಆಗಿದ್ದಾರೆ. ಆದ್ದರಿಂದ ಒಳ್ಳೆಯ ಕಥೆ/ ವಿಷಯವನ್ನು ಒಟಿಟಿ ವೇದಿಕೆಯವರು ಹುಡುಕುತ್ತಲೇ ಇರುತ್ತಾರೆ’ ಎಂದು ಪರಮೇಶ್ವರ ಹೇಳಿದರು.

‘ಒಟಿಟಿ ಎಂದರೆ ಒಂದರ್ಥದಲ್ಲಿ ಸಿನಿಮಾ ಮತ್ತು ಟಿವಿ ನಡುವೆ ಮದುವೆಯಾದಂತಿದೆ. ಹಾಗೆಂದು ಮೂಲ ಕಥೆಯನ್ನು ತುಂಬಾ ತಿರುಚಬಾರದು ಮೂಲ ಬರಹಗಾರನ ಆಶಯವನ್ನು ಗೌರವಿಸಬೇಕು’ ಎಂದರು ಜೀ 5ನ ಹಿಂದಿ ಸರಣಿಗಳ ವಿಭಾಗದ ಉಪಾಧ್ಯಕ್ಷೆ ಪ್ರಗತಿ ದೇಶ್‌ಮುಖ್‌.

‘ಡಬ್ಬಿಂಗ್‌ ಆದ ವಸ್ತುವನ್ನು ನೋಡುವವರು ತುಂಬಾ ಕಡಿಮೆ. ಆದೊಂದು ಲಾಭದಾಯಕ ಕ್ಷೇತ್ರವಾಗಿ ಇಲ್ಲ. ಒಂದಿಷ್ಟು ಜನ ಅದನ್ನು ನೋಡುವವರಿದ್ದಾರೆ ಅಷ್ಟೇ. ಕನ್ನಡದ ಮಟ್ಟಿಗೆ ಒಟಿಟಿ ಇನ್ನಷ್ಟೇ ಬೆಳೆಯಬೇಕಿದೆ’ ಎಂದರು ಪ್ರದೀಪ್‌ ಕುಮಾರ್‌.

‘ಮುಬಿ’ಯ ಏಷ್ಯಾ ವಿಭಾಗದ ಕಾರ್ಯಕ್ರಮ ನಿರ್ದೇಶಕಿ ಸ್ವೆಟ್ಲಾನಾ ನೌಡಿಯಾಳ್‌ ಭಾಗವಹಿಸಿದ್ದರು. ಅಭಿಷೇಕ್‌ ಅಯ್ಯಂಗಾರ್‌ ಚರ್ಚೆಯನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.