ADVERTISEMENT

ಬಿಗ್‌ಬಾಸ್‌ ವಿಜೇತ ರೂಪೇಶ್ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಜ.13ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 19:30 IST
Last Updated 6 ಜನವರಿ 2023, 19:30 IST
ರೂಪೇಶ್ ಶೆಟ್ಟಿ, ಗೀತಾ ಭಾರತಿ ಹಾಗೂ ಪಂಚಮಿ ರಾವ್
ರೂಪೇಶ್ ಶೆಟ್ಟಿ, ಗೀತಾ ಭಾರತಿ ಹಾಗೂ ಪಂಚಮಿ ರಾವ್   

ಗಗನ್ ಎಂ. ನಿರ್ದೇಶನದ ಚೊಚ್ಚಲ ಚಿತ್ರ, ‘ಬಿಗ್‌ಬಾಸ್‌’ ವಿಜೇತ ನಟ ರೂಪೇಶ್‌ ಶೆಟ್ಟಿ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಜ.13ಕ್ಕೆ ಬೆಳ್ಳಿತೆರೆಗೆ ಬರಲಿದೆ.

ರೂಪೇಶ್ ಶೆಟ್ಟಿ, ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಗೀತಾ ಭಾರತಿ, ಪಂಚಮಿ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

‘ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಚಿತ್ರದಲ್ಲಿ ಕಟೆಂಟ್ ಹೀರೊ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಕಥೆ ಚಿತ್ರದಲ್ಲಿದೆ. ಸ್ನೇಹಿತರೇ ಆತನ ಪ್ರಪಂಚ. ಇದರೊಂದಿಗೆ ಒಂದು ಮುಗ್ಧ ಪ್ರೇಮಕಥೆ ಇರುವ ಸಿನಿಮಾ ಇದು. ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೆ. ಕನ್ನಡದಲ್ಲಿ ಹೀರೊ ಆಗಿ ನಟಿಸುತ್ತಿರುವ ಐದನೇ ಸಿನಿಮಾವಿದು. ಆ ಎಲ್ಲ ಸಿನಿಮಾಗಳಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಆದರೆ ಮೊದಲ ಬಾರಿ ರೂಪೇಶ್ ಶೆಟ್ಟಿ ಸಿನಿಮಾ ಬರುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದು ಖುಷಿ ನೀಡಿದೆ’ ಎನ್ನುತ್ತಾರೆ ರೂಪೇಶ್‌.

ADVERTISEMENT

‘ಕಿರುಚಿತ್ರ, ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದೇನೆ. ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ‘ಮಂಕು ಭಾಯ್ ಫಾಕ್ಸಿ ರಾಣಿ’ ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾವನ್ನು ಮೊದಲು ಕಿರುಚಿತ್ರವನ್ನಾಗಿ ಮಾಡಲು ನಿರ್ಧರಿಸಿದ್ದೆವು. ರೂಪೇಶ್ ಶೆಟ್ಟಿ ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಬದಲಾಯಿಸಿಕೊಂಡೆವು. 2019ರಲ್ಲಿ ಆರಂಭವಾದ ಸಿನಿಮಾವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಸುತ್ತ ಕಥೆಯನ್ನು ಹೆಣೆಯಲಾಗಿದೆ’ ಎನ್ನುತ್ತಾರೆ ಗಗನ್‌.

ನಿರ್ಮಾಪಕ ಜೋಶ್ವ ಜೈಶಾನ್ ಕ್ರಾಸ್ತ, ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿನ್ಯಾಸ್ ಮದ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ. ಷಜಹಾನ್ ಕ್ಯಾಮೆರಾ ವರ್ಕ್, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಚಿತ್ರಕ್ಕಿದೆ. ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.