ADVERTISEMENT

Cinema: ತೊನ್ನಿನ ಸಮಸ್ಯೆ ಕುರಿತ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೇಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 1:30 IST
Last Updated 18 ಅಕ್ಟೋಬರ್ 2025, 1:30 IST
<div class="paragraphs"><p>‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ದೃಶ್ಯ</p></div>

‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ದೃಶ್ಯ

   

ಮಹೇಶ್ ಗೌಡ ನಿರ್ಮಾಣ, ನಿರ್ದೇಶನ ಮಾಡಿ ನಟಿಸಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ತೊನ್ನಿನ ಸಮಸ್ಯೆ ಕುರಿತಾದ ಅಪರೂಪದ ಕಥಾವಸ್ತು ಹೊಂದಿರುವ ಚಿತ್ರವನ್ನು ಶ್ರೀಮುರಳಿ ಅರ್ಪಿಸುತ್ತಿದ್ದಾರೆ.

‘ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ತೊನ್ನು ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರುವ ಚಿತ್ರವಿದು. ಸ್ವತಃ ಆ ಸಮಸ್ಯೆ ಹೊಂದಿರುವ ವ್ಯಕ್ತಿಯೇ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ನಟಿಸಿದ್ದು ಇಷ್ಟವಾಯ್ತು. ಸಮಸ್ಯೆ ಎಂಬ ಗೋಳಿನ ಕಥೆ ಇದರಲ್ಲಿ ಇಲ್ಲ. ಬದಲಿಗೆ ಇದೊಂದು ರಾಂಕಾಮ್‌ ಜಾನರ್‌ನ ಚಿತ್ರ. ನಗಿಸುತ್ತಲೇ ಅಳು ಮೂಡಿಸುವ ಕಥೆ. ಇಂಥ ಸಿನಿಮಾವನ್ನು ಅರ್ಪಿಸುತ್ತಿರುವುದಕ್ಕೆ ಹೆಮ್ಮೆಯಿದೆ. ಇಂಥ ಅಪರೂಪದ ಕಥಾವಸ್ತು ಹೊಂದಿರುವ ಚಿತ್ರಗಳು ಬಂದಾಗ ಜನ ಕೂಡ ಅಷ್ಟೇ ಪ್ರೀತಿಯಿಂದ ಸ್ವೀಕರಿಸಬೇಕು’ ಎಂದರು ಶ್ರೀಮುರಳಿ.

ADVERTISEMENT

ಡಾ.ಅಂಜನಪ್ಪ ಮಾತನಾಡಿ, ‘ತೊನ್ನು ಎಂಬುದು ಒಂದು ರೋಗವಲ್ಲ. ಬದಲಿಗೆ ನ್ಯೂನತೆ. ಈ ಸಮಸ್ಯೆ ಹೊಂದಿರುವವರನ್ನು ಅಸ್ಪೃಶ್ಯರಂತೆ ಕಾಣುವುದು ಸರಿಯಲ್ಲ. ಈ ಬಗ್ಗೆ ಚಿತ್ರದ ಮೂಲಕ ಜಾಗೃತಿ ಮೂಡಿಸಲು ಹೊರಟಿರುವ ಚಿತ್ರತಂಡಕ್ಕೆ ಅಭಿನಂದನೆಗಳು. ನಾನು ಕೂಡ ಈ ಸಮಸ್ಯೆ ಹೊಂದಿದ್ದು ಸಾಕಷ್ಟು ಅವಮಾನಗಳನ್ನು ಎದುರಿಸಿರುವೆ. ಆದಾಗ್ಯೂ ನನ್ನ ಸಾಧನೆಗೆ ಯಾವುದೂ ಅಡ್ಡಿಯಾಗಲಿಲ್ಲ’ ಎಂದರು.

ಅಕ್ಟೋಬರ್ 24ರಂದು ಚಿತ್ರ ತೆರೆ ಕಾಣುತ್ತಿದೆ. ಕಾಜಲ್‌ ಕುಂದರ್‌ ಚಿತ್ರದ ನಾಯಕಿ. ‘ವಿಟಿಲಿಗೋ ಸಮಸ್ಯೆಯ ಸುತ್ತ ಹೆಣೆದಿರುವ ಕಥೆ ಅಂದಾಕ್ಷಣ ಮನೋರಂಜನೆ ಇರುವುದಿಲ್ಲ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್‌ ಸಿನಿಮಾ. ಎಂಥ ಗಹನವಾದ ಕಥೆಯನ್ನಾದರೂ ಗಂಭೀರವಾಗಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ತಲುಪುವುದು ಕಷ್ಟ. ಹೀಗಾಗಿ ದುಗುಡವನ್ನು ಕೂಡ ತೆಳು ಹಾಸ್ಯದ ಮೂಲಕ ದಾಟಿಸುತ್ತಲೇ ಸಾಮಾಜಿಕ ಸಂದೇಶ ನೀಡಲಾಗಿದೆ’ ಎಂದರು ಮಹೇಶ್‌.

ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಚಿತ್ರಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.