ಅಚ್ಯುತ್ ಪೋತ್ದಾರ್
ಥಾಣೆ: ‘3 ಈಡಿಯಟ್ಸ್’, ‘ಪ್ರಧಾನ್ ಮಂತ್ರಿ’, ‘ಭಾರತ್ ಏಕ್ ಖೋಜ್’ ರೀತಿಯ ಸಿನಿಮಾ ಮತ್ತು ಟಿ.ವಿ. ಕಾರ್ಯಕ್ರಮಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದ ನಟ ಅಚ್ಯುತ್ ಪೋತ್ದಾರ್ (90) ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನರಾಗಿದ್ದಾರೆ.
ಪೋತ್ದಾರ್ ಅವರನ್ನು ಸೋಮವಾರ ಸಂಜೆ 4 ಗಂಟೆಗೆ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ರಾತ್ರಿ 10.30ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ‘ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಗಂಭೀರ ಸ್ಥಿತಿಯಲ್ಲಿ ಅವರನ್ನು ಸೋಮವಾರ ದಾಖಲಿಸಲಾಗಿತ್ತು. ಈ ವೇಳೆ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು’ ಎಂದು ಜುಪಿಟರ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಘಾವತ್ ಹೇಳಿದ್ದಾರೆ.
‘ತೇಜಾಬ್’, ‘ಪರಿಣೀತಾ’, ‘ಆಂದೋಲನ್’, ‘ವಾಗ್ಲೇ ಕಿ ದುನಿಯಾ’, ‘ದಬಂಗ್ 2’ ಮತ್ತು ‘ಫೆರಾರಿ ಕಿ ಸವಾರಿ’ ಸೇರಿದಂತೆ ಹಲವಾರು ಹಲವು ಟಿ.ವಿ ಕಾರ್ಯಕ್ರಮಗಳು ಮತ್ತು ಸಿನಿಮಾಗಳಲ್ಲಿ ಪೋತ್ದಾರ್ ಅವರು ಪೋಷಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ.
ರಾಜ್‌ಕುಮಾರ್ ಹಿರಾನಿ ಅವರ ‘3 ಈಡಿಯಟ್ಸ್’ ಚಿತ್ರದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ‘ಕೆಹ್ನಾ ಕ್ಯಾ ಚಾಹತೇ ಹೋ’ ಎಂಬ ಡೈಲಾಗ್ ಮೀಮ್‌ಗಳಲ್ಲಿ ಭಾರಿ ಜನಪ್ರಿಯರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.