ADVERTISEMENT

ಬಾಲಿವುಡ್‌ ನಟ, ನಿರ್ದೇಶಕ ಸತೀಶ್ ಕೌಶಿಕ್ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2023, 14:19 IST
Last Updated 9 ಮಾರ್ಚ್ 2023, 14:19 IST
ಸತೀಶ್ ಕೌಶಿಕ್ (66)
ಸತೀಶ್ ಕೌಶಿಕ್ (66)   

ನವದೆಹಲಿ: ಬಾಲಿವುಡ್‌ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್(66) ಗುರುವಾರ ದೆಹಲಿಯಲ್ಲಿ ನಿಧನರಾದರು.

ಸತೀಶ್ ಕೌಶಿಕ್ ನಿಧನವನ್ನು ಹಿರಿಯ ನಟ ಅನುಪಮ್ ಖೇರ್ ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ.

ಮಿಸ್ಟರ್‌ ಇಂಡಿಯಾ ಚಿತ್ರದಲ್ಲಿ ಅವರ ‘ಕ್ಯಾಲೆಂಡರ್’ ಪಾತ್ರ ಮತ್ತು ‘ದೀವಾನಾ ಮಸ್ತಾನಾ’ದಲ್ಲಿ ‘ಪಪ್ಪು ಪೇಜರ್’ ಪಾತ್ರಗಳಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದರು. ಅತ್ಯುತ್ತಮ ಹಾಸ್ಯನಟನೆಗಾಗಿ ಸತೀಶ್ ಕೌಶಿಕ್ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಹರಿಯಾಣದ ಮಹೇಂದ್ರಗಢದಲ್ಲಿ 1956ರ ಏಪ್ರಿಲ್ 13ರಂದು ಸತೀಶ್ ಕೌಶಿಕ್ ಜನಿಸಿದರು. 1972 ರಲ್ಲಿ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದರು.

ಕೌಶಿಕ್ ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸಿನಿಮಾ ಕೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಧ್ಯಯನ ನಡೆಸಿದ್ದಾರೆ.

ಇವರು ನಿರ್ದೇಶಕ, ರಂಗಭೂಮಿ ನಟ, ಹಾಸ್ಯನಟ, ಚಿತ್ರಕಥೆಗಾರರಾಗಿಯೂ ಹೆಚ್ಚು ಮನ್ನಣೆಯನ್ನು ಗಳಿಸಿದ್ದರು.

1990ರಲ್ಲಿ ತೆರೆ ಕಂಡ 'ರಾಮ್ ಲಖನ್' ಮತ್ತು 1997ರಲ್ಲಿ ಬಂದ 'ಸಾಜನ್ ಚಲೇ ಸಸುರಲ್' ಚಿತ್ರಗಳಲ್ಲಿನ ಅವರ ಅತ್ಯುತ್ತಮ ಹಾಸ್ಯನಟನೆಗಾಗಿ ಎರಡು ಬಾರಿ ಫಿಲ್ಮ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1993ರಲ್ಲಿ ಮೊದಲ ಬಾರಿಗೆ 'ರೂಪ್ ಕಿ ರಾಣಿ ಚೋರೋನ್ ಕಾ ರಾಜಾ' ಚಿತ್ರವನ್ನು ಕೌಶಿಕ್ ನಿರ್ದೇಶಿಸಿದರು. ಬೋನಿ ಕಪೂರ್ ನಿರ್ಮಾಣದ ಈ ಚಿತ್ರದಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ನಟಿಸಿದ್ದರು.

ಬೋನಿ ಕಪೂರ್ ನಿರ್ಮಿಸಿದ ‘ಪ್ರೇಮ್‌’ ಚಿತ್ರವನ್ನೂ ಕೌಶಿಕ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಟಬು ಮತ್ತು ಸಂಜಯ್‌ ಕಪೂರ್‌ ನಟಿಸಿದ್ದರು.

2003ರಲ್ಲಿ ಇವರು ಸಲ್ಮಾನ್ ಖಾನ್ ಮತ್ತು ಭೂಮಿಕಾ ಚಾವ್ಲಾ ಅಭಿನಯದ 'ತೇರೆ ನಾಮ್' ಚಿತ್ರವನ್ನು ನಿರ್ದೇಶಿಸಿ ಹೆಸರು ಗಳಿಸಿದ್ದರು.

1983ರಲ್ಲಿ ಕುಂದನ್ ಶಾ ಅವರ ಕಾಮಿಡಿ ಕ್ಲಾಸಿಕ್ ಚಿತ್ರ 'ಜಾನೆ ಭಿ ದೋ ಯಾರೋನ್'ಗೆ ಸಂಭಾಷಣೆಗಳನ್ನು ಬರೆದಿದ್ದಾರೆ.

ಕೌಶಿಕ್ ಅವರು ಹರಿಯಾಣ ಚಲನಚಿತ್ರ ಪ್ರಚಾರ ಮಂಡಳಿಯ ಅಧ್ಯಕ್ಷರಾಗಿ ಮತ್ತು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸತೀಶ್ ಕೌಶಿಕ್ ಅವರ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.