ADVERTISEMENT

ದಕ್ಷಿಣದ ನಿರ್ದೇಶಕರತ್ತ ಬಾಲಿವುಡ್‌ ಸ್ಟಾರ್‌ಗಳ ಚಿತ್ತ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:37 IST
Last Updated 9 ಆಗಸ್ಟ್ 2025, 6:37 IST
<div class="paragraphs"><p>ಸಲ್ಮಾನ್‌ ಖಾನ್‌</p></div>

ಸಲ್ಮಾನ್‌ ಖಾನ್‌

   

ಅಟ್ಲಿ ನಿರ್ದೇಶನದ ‘ಜವಾನ್‌’, ಸಂದೀಪ್‌ ರೆಡ್ಡಿ ವಂಗ ಆ್ಯಕ್ಷನ್‌ ಕಟ್‌ ಹೇಳಿದ ‘ಅನಿಮಲ್‌’ ಚಿತ್ರಗಳು ಭರ್ಜರಿ ಗೆಲವು ದಾಖಲಿಸಿದ ಬಳಿಕ ಪ್ರಮುಖ ಬಾಲಿವುಡ್‌ ಸ್ಟಾರ್‌ಗಳು ದಕ್ಷಿಣದ ನಿರ್ದೇಶಕರತ್ತ ಒಲವು ತೋರುತ್ತಿದ್ದಾರೆ. ಆ ಸಾಲಿಗೆ ಈಗ ನಟ ಸಲ್ಮಾನ್‌ ಖಾನ್‌ ಕೂಡ ಸೇರಿಕೊಂಡಿದ್ದಾರೆ.

ನಟ ಸಲ್ಮಾನ್‌ ಖಾನ್‌ ಮಲಯಾಳದ ಪ್ರತಿಭಾವಂತ ನಿರ್ದೇಶಕ ಮಹೇಶ್ ನಾರಾಯಣನ್‌ ಜತೆ ಕೈಜೋಡಿಸುತ್ತಿರುವುದಾಗಿ ವರದಿಯಾಗಿದೆ. ‘ಟೇಕ್ ಆಫ್’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ನಂತರ ಗುರುತಿಸಿಕೊಂಡಿದ್ದು ಫಹಾದ್‌ ಫಾಸಿಲ್‌ ಪಾಳಯದಲ್ಲಿ. ಕೋವಿಡ್ ಸಮಯದಲ್ಲಿ ಬಹಳ ಜನಪ್ರಿಯವಾದ ‘ಸಿ ಯು ಸೂನ್’ ಚಿತ್ರವನ್ನು ನೀಡಿದರು. ಬಳಿಕ ಫಹಾದ್ ಫಾಸಿಲ್‌ಗೆ ‘ಮಾಲಿಕ್’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಈ ನಿರ್ದೇಶಕನ ಜತೆ ಸಲ್ಮಾನ್‌ ತಮ್ಮ ಮುಂದಿನ ಚಿತ್ರಕ್ಕೆ ಅಣಿಯಾಗಿರುವುದು ಕುತೂಹಲ ಹೆಚ್ಚಿಸಿದೆ. 

ADVERTISEMENT

‘ಇದು 70–90ರ ದಶಕಗಳಲ್ಲಿ ನಡೆಯುವ ಐತಿಹಾಸಿಕ ಕಥೆ. ಈ ಸಂಬಂಧ ಸಲ್ಮಾನ್‌ ಖಾನ್‌ ನಿರ್ದೇಶಕರ ಜತೆ 4–5 ಸಲ ಮೀಟಿಂಗ್‌ ನಡೆಸಿದ್ದಾರೆ. ಸದ್ಯದಲ್ಲಿಯೇ ಮಹೇಶ್‌ ಪೂರ್ಣ ಸ್ಕ್ರಿಪ್ಟ್‌ ಅನ್ನು ಸಲ್ಮಾನ್‌ಗೆ ವಿವರಿಸಲಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಒಂದು ಕಾಲದಲ್ಲಿ ಬಾಲಿವುಡ್‌ ನಟರಿಗೆ ದಕ್ಷಿಣ ಭಾರತದ ಸಿನಿಮಾಗಳು ತಮ್ಮೊಂದಿಗೆ ಪೈಪೋಟಿ ನೀಡಲಾರವು ಎಂಬ ಭಾವನೆ ಇತ್ತು. ಅಲ್ಲಿನ ಸೂಪರ್‌ಸ್ಟಾರ್‌ಗಳು ಹಿಂದಿ ನಿರ್ದೇಶಕರ ಹೊರತಾಗಿ ಬೇರೆಯವರಿಗೆ ಕಾಲ್‌ಶೀಟ್‌ ನೀಡುತ್ತಿರಲಿಲ್ಲ. ಕೆಲವಷ್ಟು ನಿರ್ದೇಶಕರು ದಕ್ಷಿಣದಲ್ಲಿ ಯಶಸ್ಸು ಕಂಡ ತಮ್ಮದೇ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ರಿಮೇಕ್‌ ಮಾಡಿದ್ದರು. ಆದರೆ ನೇರವಾಗಿ ಹಿಂದಿಯ ಸ್ಟಾರ್‌ ನಟನಿಗೆ ಆ್ಯಕ್ಷನ್‌ ಕಟ್‌ ಹೇಳಿದ ನಿರ್ದೇಶಕರು ಬಹಳ ವಿರಳ. ಮಣಿರತ್ನಂ, ರಾಮ್‌ಗೋಪಾಲ್‌ ವರ್ಮಾರಂಥ ಬೆರಳೆಣಿಕೆಯಷ್ಟು ನಿರ್ದೇಶಕರು ಮಾತ್ರ ನೇರವಾಗಿ ಬಾಲಿವುಡ್‌ನಲ್ಲಿ ಸಿನಿಮಾ ಮಾಡಿ ಗೆದ್ದವರು.

ಕಳೆದ ನಾಲ್ಕರು ವರ್ಷಗಳಲ್ಲಿ ಈ ಸನ್ನಿವೇಶ ಬದಲಾಗಿದೆ. ‘ಕೆಜಿಎಫ್‌’, ‘ಕಾಂತಾರ’ದಂಥ ಚಿತ್ರಗಳ ವಿಶ್ವ ವ್ಯಾಪಿ ಗೆಲುವು ಬಾಲಿವುಡ್‌ ಸ್ಟಾರ್‌ಗಳನ್ನು ದಕ್ಷಿಣದತ್ತ ತಿರುಗಿ ನೋಡುವಂತೆ ಮಾಡಿತು. ಈ ತಲೆಮಾರಿನ ನಿರ್ದೇಶಕರಲ್ಲಿ ಮೊದಲು ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದು ತಮಿಳಿನ ಅಟ್ಲಿ. ‘ಜವಾನ್’ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತು.

ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ಅಮೀರ್‌ ಖಾನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ನಿರ್ದೇಶಕನ ಜತೆ ಸಿನಿಮಾ ಮಾಡುವುದಾಗಿ ಅಮೀರ್‌ ಹೇಳಿದ್ದಾರೆ. ರಣಬೀರ್‌ ಕಪೂರ್‌ಗೆ ‘ಅನಿಮಲ್‌’ನಂಥ ದೊಡ್ಡ ಹಿಟ್‌ ಕೊಟ್ಟ ತೆಲುಗಿನ ಸಂದೀಪ್‌ ರೆಡ್ಡಿ ವಂಗ ಕೂಡ ಅಮೀರ್‌ ಖಾನ್‌ಗೆ ಕಥೆ ಹೇಳಿದ್ದಾರೆ ಎಂಬ ವದಂತಿಯಿದೆ. 

ಸತತ ಸೋಲುಗಳಿಂದ ಕಂಗೆಟ್ಟಿರುವ ಸಲ್ಮಾನ್ ಖಾನ್‌ಗೆ ತಮಿಳಿನ ಮುರುಗದಾಸ್ ಜೊತೆ ಕೈಜೋಡಿಸಿ ಮಾಡಿದ ‘ಸಿಖಂಧರ್’ ಸಿನಿಮಾ ಕೂಡ ಕೈಹಿಡಿಯಲಿಲ್ಲ. ಆದಾಗ್ಯೂ ಮತ್ತೆ ದಕ್ಷಿಣದ ನಿರ್ದೇಶಕನ ಜತೆ ಕೈಜೋಡಿಸಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.