‘ಸು ಫ್ರಂ ಸೋ’
ಆಗೊಂದು, ಈಗೊಂದು ಹಿಟ್ ಸಿನಿಮಾಗಳ ಹೊರತಾಗಿ ಈ ವರ್ಷ ಚಿತ್ರಮಂದಿರಗಳು ಜನರಿಲ್ಲದೇ ಬಿಕೋ ಎಂದಿದ್ದೇ ಹೆಚ್ಚು. ಆದರೆ ಜುಲೈ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಕೆಲ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬೇಡಿಕೆ ಇದ್ದರೂ ಸಿನಿಮಾಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳೇ ಸಿಗುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ!
ಎರಡು ವಾರಗಳ (ಜು.18) ಹಿಂದೆ ತೆರೆ ಕಂಡ ಬಾಲಿವುಡ್‌ನ ‘ಸೈಯಾರಾ’ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮರಳಿ ಕರೆತಂದಿತ್ತು. ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ನಟನೆಯ ಚಿತ್ರ ಬಿಡುಗಡೆಗೊಂಡ ನಾಲ್ಕು ದಿನಗಳಲ್ಲಿಯೇ ₹100 ಕೋಟಿ ಗಳಿಕೆ ಕಂಡಿತ್ತು. ಯುವ ಪ್ರೇಮಿಗಳ ಕಥೆಯನ್ನು ಹೊಂದಿರುವ ಮೋಹಿತ್ ಸೂರಿ ನಿರ್ದೇಶನದ ಈ ಚಿತ್ರ ರಾಜ್ಯದಲ್ಲಿ ₹10 ಕೋಟಿಗೂ ಅಧಿಕ ಬಾಚಿಕೊಂಡಿದೆ. ಸದ್ಯ ₹300 ಕೋಟಿ ಗಳಿಕೆ ಕಂಡಿರುವ ಚಿತ್ರ ಈಗಲೂ ಒಂದಷ್ಟು ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಇದರೊಂದಿಗೆ ಕಳೆದ ವಾರ ತೆರೆ ಕಂಡ ರಾಜ್ ಬಿ.ಶೆಟ್ಟಿ ತಂಡದ ‘ಸು ಫ್ರಂ ಸೋ’ ಚಿತ್ರ ಭರ್ಜರಿಯಾಗಿ ಜನರನ್ನು ಚಿತ್ರಮಂದಿರಗಳತ್ತ ಕರೆತಂದಿದೆ. ಪ್ರೇಕ್ಷಕರಿಗೆ ಟಿಕೆಟ್ ಸಿಗದೆ ಬೆಳಿಗ್ಗೆ 6.30ರಿಂದಲೇ ಪ್ರದರ್ಶನ ಕಾಣುವಂತಾಯ್ತು. ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿಯೂ ಚಿತ್ರಪ್ರೇಮಿಗಳನ್ನು ಸೆಳೆಯುತ್ತಿದ್ದು, ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10.30ರವರೆಗಿನ ಬಹುತೇಕ ಪ‍್ರದರ್ಶನಗಳು ಹೌಸ್‌ಫುಲ್. ಜೆ.ಪಿ.ತೂಮಿನಾಡು ನಿರ್ದೇಶನದ ಚಿತ್ರ ಉಳಿದೆಲ್ಲ ಭಾಷೆಯ ಚಿತ್ರಗಳನ್ನು ಹಿಂದಿಕ್ಕಿ ಗಳಿಕೆಯಲ್ಲಿ ನಾಗಾಲೋಟ ಮುಂದುವರಿಸಿದೆ. ಪ್ರದರ್ಶನಗಳ ಸಂಖ್ಯೆ ಏರುತ್ತಲೇ ಇದೆ. ಏಕಪರದೆ ಚಿತ್ರಮಂದಿರಗಳಿಗೂ ಈ ಸಿನಿಮಾ ವರವಾಗಿ ಪರಿಣಮಿಸಿದೆ. ಹೀಗಾಗಿ ಚಿತ್ರಮಂದಿರಗಳ ಮಾಲೀಕರು ಸಂತಸದಲ್ಲಿದ್ದಾರೆ.
ಕಳೆದ ವಾರ ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ತೆರೆಕಂಡ ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು ಭಾಗ–1’ ಕೂಡ ಜನಮನ್ನಣೆ ಗಳಿಸುತ್ತಿದೆ. ಗಳಿಕೆಯಲ್ಲಿ ಈಗಾಗಲೇ ₹100 ಕೋಟಿ ಗಡಿ ದಾಟಿರುವ ಚಿತ್ರ ರಾಜ್ಯದಲ್ಲಿಯೂ ಪ್ರಬಲ ಪೈಪೋಟಿ ನೀಡುತ್ತಿದೆ. ‘ಸು ಫ್ರಂ ಸೋ’ ಬಿರುಗಾಳಿಯ ನಡುವೆಯೂ ‘ವೀರ ಮಲ್ಲು’ ಒಂದಷ್ಟು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಬೆಂಗಳೂರೊಂದರಲ್ಲಿಯೇ ನೂರಕ್ಕೂ ಹೆಚ್ಚು ಪ್ರದರ್ಶನಗಳಿವೆ.
‘ವೀರ ಮಲ್ಲು’
ವಿಜಯ್ ಸೇತುಪತಿ ಹಾಗೂ ನಿತ್ಯಾ ಮೆನನ್ ಇಬ್ಬರೂ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಜೋಡಿ ಭಿನ್ನ ಸಿನಿಮಾಗಳ ಆಯ್ಕೆಯಿಂದಲೇ ಜನಪ್ರಿಯ. ಇವರ ‘ತಲೈವನ್ ತಲೈವಿ’ ಕೂಡ ಕಳೆದ ವಾರ ತೆರೆಕಂಡು ಒಂದಷ್ಟು ಸಿನಿರಸಿಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ಈ ಇಬ್ಬರ ಮೇಲಿನ ಅಭಿಮಾನದಿಂದ ಒಂದಷ್ಟು ಶೋಗಳು ಹೌಸ್‌ಫುಲ್ ಆಗುತ್ತಿವೆ.
‘ತಲೈವನ್ ತಲೈವಿ’
ಇಷ್ಟೆಲ್ಲ ಸಿನಿಮಾಗಳ ಅಬ್ಬರದ ನಡುವೆ ತಮಿಳಿನಲ್ಲೊಂದು ಚಿತ್ರ ಸದ್ದಿಲ್ಲದೇ ಜನಪ್ರಿಯತೆ ಗಳಿಸುತ್ತಿದೆ. ಫಹಾದ್ ಫಾಸೀಲ್, ವಡಿವೇಲು ನಟನೆಯ ‘ಮಾರೀಸನ್(ಮಾರೀಚ)’ ಚಿತ್ರ ಕೂಡ ಇಬ್ಬರು ಜನಪ್ರಿಯ ನಟರಿಂದಾಗಿ ಒಂದಷ್ಟು ಚಿತ್ರಮಂದಿರಗಳನ್ನು ಭರ್ತಿ ಮಾಡುತ್ತಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಪ್ರಬಲ ಪೈಪೋಟಿಯಿಂದಾಗಿ ಈ ಚಿತ್ರ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ.
‘ಸದ್ಯ ಮಾಲ್, ಚಿತ್ರಮಂದಿರಗಳ ತುಂಬ ಜನ ತುಂಬಿ ತುಳುಕುತ್ತಿರುವುದು ನೋಡಲು ಖುಷಿಯಾಗುತ್ತಿದೆ. ಇದರಿಂದ ಅಲ್ಲಿನ ಸುತ್ತಮುತ್ತಲಿನ ವಹಿವಾಟುಗಳು ಚಿಗುರಿವೆ’ ಎನ್ನುತ್ತಾರೆ ಶ್ರೀನಿವಾಸ ಚಿತ್ರಮಂದಿರದ ಮಾಲೀಕ ದೇವೇಂದ್ರ ರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.