ADVERTISEMENT

ಆರು ತಿಂಗಳಲ್ಲೇ ಮೂರು ಸಿನಿಮಾ..! ಡಾರ್ಲಿಂಗ್ ಕೃಷ್ಣ ಸಂದರ್ಶನ

ಅಭಿಲಾಷ್ ಪಿ.ಎಸ್‌.
Published 30 ಅಕ್ಟೋಬರ್ 2025, 23:32 IST
Last Updated 30 ಅಕ್ಟೋಬರ್ 2025, 23:32 IST
ಡಾರ್ಲಿಂಗ್‌ ಕೃಷ್ಣ, ಮನಿಶಾ ಕಂದಕೂರ್‌
ಡಾರ್ಲಿಂಗ್‌ ಕೃಷ್ಣ, ಮನಿಶಾ ಕಂದಕೂರ್‌   

ಶಶಾಂಕ್‌ ನಿರ್ದೇಶನದಲ್ಲಿ ಡಾರ್ಲಿಂಗ್‌ ಕೃಷ್ಣ ನಟಿಸಿರುವ ‘ಬ್ರ್ಯಾಟ್‌’ ಸಿನಿಮಾ ಇಂದು (ಅ.31) ತೆರೆಕಾಣುತ್ತಿದೆ. ‘ಲವ್‌ ಮಾಕ್ಟೇಲ್‌–2’ ಬಳಿಕ ತಮ್ಮ ಸಿನಿಜರ್ನಿಯಲ್ಲೊಂದು ಬದಲಾವಣೆ ಮಾಡಿಕೊಂಡಿರುವ ಡಾರ್ಲಿಂಗ್‌ ಕೃಷ್ಣ ಹೊಸ ಸಿನಿಮಾಗಳನ್ನು ಒಪ್ಪಿಕೊಂಡೇ ಇಲ್ಲ! ‘ಲವ್‌ ಮಾಕ್ಟೇಲ್‌–3’ ಸೇರಿದಂತೆ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ‘ಫಾದರ್‌’ ಸಿನಿಮಾ ಆರು ತಿಂಗಳೊಳಗೆ ತೆರೆಕಾಣಲಿದೆ ಎನ್ನುತ್ತಾ ಮಾತಿಗಿಳಿದರು ಕೃಷ್ಣ.

*****

*ಶಶಾಂಕ್‌ ಅವರ ಜೊತೆ ಎರಡನೇ ಪ್ರಾಜೆಕ್ಟ್‌...

ADVERTISEMENT

ಹೌದು. ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಆಗಿ ಮೂರ್ನಾಲ್ಕು ತಿಂಗಳಾದ ಮೇಲೆ ಈ ಸಿನಿಮಾ ಒಪ್ಪಿಕೊಂಡಿದ್ದೆ. ಎರಡು ಮೂರು ಕಥೆಗಳನ್ನು ಶಶಾಂಕ್‌ ಆಗ ಹೇಳಿದ್ದರು. ಅದರಲ್ಲಿ ‘ಬ್ರ್ಯಾಟ್‌’ ಒಂದಾಗಿತ್ತು. ನನಗೆ ಈ ಕಥೆ ಇಷ್ಟವಾಯಿತು. ‘ಕೌಸಲ್ಯಾ..’ ಗೆಲುವು ಈ ಕಾಂಬಿನೇಷನ್‌ ಮುಂದುವರಿಯಲು ಕಾರಣ. ಒಬ್ಬ ನಟನಾಗಿ ನನಗೆ ಶಶಾಂಕ್‌ ಅವರ ಮೇಲೆ, ಅವರ ಕಥೆಯ ಮೇಲೆ ನಂಬಿಕೆಯಿದೆ. ನಿರ್ದೇಶಕರಾಗಿ ಅವರಿಗೂ ನನ್ನ ಜೊತೆ ಕೆಲಸ ಮಾಡುವುದು ಸುಲಭವೆಂದೆನಿಸಿದೆ. 

*ವರ್ಷಕ್ಕೆ ನಿಮ್ಮ ಮೂರ್ನಾಲ್ಕು ಸಿನಿಮಾಗಳು ಬರುತ್ತಿದ್ದವು. ಇದು ಕಡಿಮೆಯಾಗಿದ್ದೇಕೆ?

‘ಲವ್‌ ಮಾಕ್ಟೇಲ್‌–2’ ಆದ ಬಳಿಕ ಹೆಚ್ಚು ಕಥೆಗಳನ್ನು ಒಪ್ಪಿಕೊಂಡಿಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ತೆರೆಕಂಡ ಸಿನಿಮಾಗಳೆಲ್ಲವೂ ‘ಲವ್‌ ಮಾಕ್ಟೇಲ್‌’ ಆದ ಬಳಿಕ ಒಪ್ಪಿಕೊಂಡಿದ್ದ ಸಿನಿಮಾಗಳು. ‘ಲವ್‌ ಮಾಕ್ಟೇಲ್‌–2’ ಆದ ಮೇಲೆ ಕಥೆ ಆಯ್ಕೆಯಲ್ಲಿ ಹೆಚ್ಚು ಸೂಕ್ಷ್ಮವಾದೆ. ಈ ಸಿನಿಮಾ ಆದ ಬಳಿಕ ನಾನು ಒಪ್ಪಿಕೊಂಡಿದ್ದ ಮೊದಲ ಸಿನಿಮಾ ‘ಕೌಸಲ್ಯಾ...’, ಬಳಿಕ ‘ಬ್ರ್ಯಾಟ್‌’ ಹಾಗೂ ನಿರ್ದೇಶಕ ಆರ್‌.ಚಂದ್ರು ಅವರು ನಿರ್ಮಾಣ ಮಾಡಿರುವ, ರಾಜ್‌ಮೋಹನ್‌ ನಿರ್ದೇಶನದ ‘ಫಾದರ್‌’ ಒಪ್ಪಿಕೊಂಡೆ. ಇದೂ ಒಂದೂವರೆ ವರ್ಷದ ಹಿಂದೆ ಆಗಿದ್ದು, ಅಲ್ಲಿಂದ ಯಾವುದೇ ಹೊಸ ಸಿನಿಮಾಗಳನ್ನು ನಾನು ಒಪ್ಪಿಕೊಂಡಿಲ್ಲ. ಈಗ ಹೊಸ ಕಥೆಗಳನ್ನು ಕೇಳಲು ಆರಂಭಿಸಬೇಕು.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆರ್ಥಿಕವಾಗಿ ಕೊಂಚ ಸದೃಢವಾಗಬೇಕು, ಸುರಕ್ಷಿತವಾಗಿರಬೇಕು ಎನ್ನುವ ಸಮಯದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇವೆ. ಉದಾಹರಣೆಗೆ ನನ್ನ ನಿರ್ದೇಶನದ ಮೊದಲ ಸಿನಿಮಾಗೆ ‘ಮಿ.ಬ್ಯಾಚುಲರ್‌’ ಸಿನಿಮಾದ ಅಡ್ವಾನ್ಸ್‌ ಹಣವೇ ಮೊದಲ ಹೂಡಿಕೆಯಾಗಿತ್ತು. ಹೀಗೆ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಕೊಂಡಿ ಇರುತ್ತದೆ. ಒಂದು ಚಿಕ್ಕ ಗೆಲುವು ಬಂದಾಗ, ಜವಾಬ್ದಾರಿ ಹೆಚ್ಚುತ್ತದೆ. ಒಪ್ಪಿಕೊಳ್ಳುವ ಕಥೆಯ ಬಗ್ಗೆಯೂ ಹೆಚ್ಚು ಗಮನಹರಿಸಬೇಕಾಗುತ್ತದೆ. ಹೀಗಾಗಿ ಆಯ್ಕೆಯಲ್ಲಿ ಸೂಕ್ಷ್ಮರಾಗುತ್ತೇವೆ. ಸದ್ಯ ನಾನು ಮನಸ್ಸಿಗೆ ಒಪ್ಪಿಗೆಯಾಗುವ ಕಥೆಗಳನ್ನಷ್ಟೇ ಮಾಡುತ್ತಿದ್ದೇನೆ. ಈ ನಡುವೆ ನನ್ನದೇ ‘ಲವ್‌ ಮಾಕ್ಟೇಲ್‌–3’ ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದೇನೆ. ಇದನ್ನು ಮುಂದಿನ ಮೂರು ತಿಂಗಳೊಳಗಾಗಿ ತೆರೆಗೆ ತರುವ ಯೋಚನೆಯಲ್ಲಿದ್ದೇನೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಜನವರಿ–ಫೆಬ್ರುವರಿಯಲ್ಲಿ ‘ಲವ್‌ ಮಾಕ್ಟೇಲ್‌’ ಒಂದನೇ ಭಾಗ–ಎರಡನೇ ಭಾಗ ಬಂದಿತ್ತು. ಇದು ನಮ್ಮ ಸಮಯ.  

*‘ಬ್ರ್ಯಾಟ್‌’ನಲ್ಲಿರುವ ಪಾತ್ರದ ಬಗ್ಗೆ..

ನಾನು ಇದರಲ್ಲಿ ‘ಕ್ರಿಸ್ಟಿ’ ಎನ್ನುವ ಪಾತ್ರವನ್ನು ಮಾಡಿದ್ದೇನೆ. ಈತ ಓರ್ವ ಪ್ರಾಮಾಣಿಕ ಕಾನ್‌ಸ್ಟೆಬಲ್‌ನ ಪುತ್ರ. ಆದರೆ ‘ಕ್ರಿಸ್ಟಿ’ಗೆ ಹಣದ ಮೋಹ. ಅಪ್ಪ–ಮಗನ ನಡುವಿನ ಸೈದ್ಧಾಂತಿಕ ಸಂಘರ್ಷವೇ ‘ಬ್ರ್ಯಾಟ್‌’. ಇದುವೇ ಇಡೀ ಕಥಾಹಂದರ. ಇದಕ್ಕೆ ಕ್ರಿಕೆಟ್‌ ಬೆಟ್ಟಿಂಗ್‌ನ ಅಂಶ ಸೇರಿಸಿದ್ದೇವೆ. ಈ ಪಾತ್ರವನ್ನು ನಿಭಾಯಿಸುವುದು ಸವಾಲಿನಿಂದ ಕೂಡಿತ್ತು. ಈ ಪಾತ್ರದ ಬರವಣಿಗೆಯು ಹಲವು ಪದರಗಳಿಂದ ಕೂಡಿತ್ತು. ಕ್ರಿಸ್ಟಿಗೊಂದು ಸ್ವ್ಯಾಗ್‌, ಸ್ಟೈಲ್‌ ಇದೆ. ಈ ಪಾತ್ರಕ್ಕೆ ಯಾವುದೇ ರೀತಿ, ನೀತಿ ಇಲ್ಲ. 

*‘ಫಾದರ್‌’ ಸಿನಿಮಾ ಎಲ್ಲಿಯವರೆಗೆ ಬಂತು?

ಈ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದೆ. ಇದೂ ರಿಲೀಸ್‌ ಹಂತದಲ್ಲಿದೆ. ಮುಂದಿನ ನನ್ನ ಮೂರು ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ಬರಲಿದೆ. ಮುಂದಿನ ಆರು ತಿಂಗಳಲ್ಲಿ ಉಳಿದರೆಡು ಸಿನಿಮಾಗಳು ಬಂದರೂ ಆಶ್ಚರ್ಯವಿಲ್ಲ. 

*‘ಲವ್‌ ಮಾಕ್ಟೇಲ್‌–3’ ಹೇಗೆ ಭಿನ್ನವಾಗಿರಲಿದೆ? 

ಮೊದಲೆರಡು ಸಿನಿಮಾಗಳ ಜಾನರ್‌ ಬೇರೆ ಬೇರೆಯದ್ದಾಗಿತ್ತು. ಒಂದನೇ ಭಾಗ ‘ಕಮಿಂಗ್‌ ಆಫ್‌ ಏಜ್‌’ ವಿಭಾಗದಲ್ಲಿತ್ತು. ಎಂದರೆ ಯುವ ಪಾತ್ರಗಳೇ ಹೆಚ್ಚಾಗಿತ್ತು. ಎರಡನೇ ಭಾಗ ಭಾವನಾತ್ಮಕ ಕಥೆಯನ್ನೊಳಗೊಂಡಿತ್ತು. ಮೂರನೇ ಭಾಗದಲ್ಲಿ ಪಾತ್ರಗಳು ಅವೇ ಇದ್ದರೂ ಭಿನ್ನ ವಿಷಯ, ಜಾನರ್‌ನಲ್ಲಿ ಇರಲಿದೆ. ಇದನ್ನು ಸದ್ಯ ಬಿಟ್ಟುಕೊಡುವುದಿಲ್ಲ.         

ವೈಯಕ್ತಿಕ ಜೀವನದಲ್ಲೂ ‘ಫಾದರ್‌’ ಆಗಿದ್ದೀರಿ..

ಹೌದು. ನಾನು ನನ್ನ ಸಿನಿಮಾಗಳ ಜೊತೆಗೆ ‘ಲವ್‌ ಮಾಕ್ಟೇಲ್‌’ನಲ್ಲೇ ತೊಡಗಿಸಿಕೊಂಡಿದ್ದೆ. ಇದಕ್ಕೆ ಮಿಲನಾಳೂ ಸಾಥ್‌ ಕೊಟ್ಟಿದ್ದಳು. ಹೀಗಾಗಿ ಹೆಚ್ಚಿನ ಸಮಯವನ್ನು ಮಗಳಿಗಾಗಿ ಮೀಸಲಿಡಲು ಸಾಧ್ಯವಾಗಲೇ ಇಲ್ಲ. ಸದ್ಯ ಎರಡು ಪ್ರಾಜೆಕ್ಟ್ಸ್‌ ಕೈಯಲ್ಲಿದ್ದ ರೀತಿಯ ಅನುಭವ. ಸಿನಿಮಾ ಹಾಗೂ ಜೀವನ ಒಟ್ಟೊಟ್ಟಿಗೆ ಚೆನ್ನಾಗಿ ನಡೆಯುತ್ತಿದೆ. ಎರಡೂ ಒತ್ತಡದ ಕೆಲಸಗಳೇ ಆಗಿದ್ದರೂ ಖುಷಿಖುಷಿಯಾಗಿಯೇ ಮುನ್ನಡೆಯುತ್ತಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.