ADVERTISEMENT

ಕಾವೇರಿ ಹೋರಾಟದ ಬಿಸಿ: ತಮಿಳು ನಟ ಸಿದ್ಧಾರ್ಥ್‌ ಪತ್ರಿಕಾಗೋಷ್ಠಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 15:34 IST
Last Updated 28 ಸೆಪ್ಟೆಂಬರ್ 2023, 15:34 IST
<div class="paragraphs"><p>ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು</p></div>

ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು

   

ಬೆಂಗಳೂರು: ತಮ್ಮ ‘ಚಿಕ್ಕು’ ಸಿನಿಮಾದ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದ ತಮಿಳು ನಟ ಸಿದ್ಧಾರ್ಥ್‌ ಅವರಿಗೆ ಕಾವೇರಿ ಹೋರಾಟದ ಬಿಸಿ ತಟ್ಟಿತು. ಸಿನಿಮಾ ಪ್ರಚಾರ ನಡೆಸದಂತೆ ಕರವೇ ಸ್ವಾಭಿಮಾನಿ ಸೇನೆ ಸಂಘಟನೆ ಕಾರ್ಯಕರ್ತರು ಗುರುವಾರ ಅವರನ್ನು ತಡೆದರು.

ಸಿದ್ಧಾರ್ಥ್‌ ನಟನೆಯ ‘ಚಿಕ್ಕು’ ಸಿನಿಮಾ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಗುರುವಾರ ಬಿಡುಗಡೆಗೊಂಡಿದೆ. ಇದರ ಕನ್ನಡ ಅವತರಣಿಕೆಯ ಮಾಧ್ಯಮ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿಯನ್ನು ಮಲ್ಲೇಶ್ವರದ ಎಸ್​ಆರ್​ವಿಯಲ್ಲಿ ಸಿನಿಮಾ ತಂಡ ಹಮ್ಮಿಕೊಂಡಿತ್ತು. ಸುದ್ದಿಗೋಷ್ಠಿ ವೇಳೆ ಏಕಾಏಕಿ ನುಗ್ಗಿದ ಕರವೇ ಕಾರ್ಯಕರ್ತರು ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಂತೆ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ನಟನ ಪತ್ರಿಕಾಗೋಷ್ಠಿಗೂ ಅಡ್ಡಿಪಡಿಸಿದರು.

ADVERTISEMENT

ವೇದಿಕೆ ಮೇಲೆ ನಟ ಸಿದ್ಧಾರ್ಥ್ ಮಾತನಾಡುತ್ತಿರುವ ಸಂದರ್ಭದಲ್ಲಿ ನುಗ್ಗಿದ ಕಾರ್ಯಕರ್ತರು, ‘ಕಾವೇರಿ ವಿವಾದ ಕಾವೇರಿರುವ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಟ ಸಿದ್ಧಾರ್ಥ್, ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಅದಕ್ಕೆ ಅವಕಾಶ ನೀಡಲಿಲ್ಲ.

ಕಾರ್ಯಕರ್ತರ ಮಾತಿಗೆ ಮಣಿದ ನಟ ಪತ್ರಿಕಾಗೋಷ್ಠಿ ಮೊಟುಕುಗೊಳಿಸಿ ಹೊರಟರು. ಮಾಧ್ಯಮ ಪ್ರತಿನಿಧಿಗಳ ಸಂಧಾನದ ಫಲವಾಗಿ ಬಳಿಕ ಯೋಜನೆಯಂತೆ ಚಿತ್ರಪ್ರದರ್ಶನ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.