ADVERTISEMENT

ಒಮ್ಮೆ ಮಾತ್ರ ಕೊಕೇನ್ ಸೇವಿಸಿದ್ದೆ: ದಿಗಂತ್

ಸಿಸಿಬಿ ಎದುರು ದಿಗಂತ್ ಹೇಳಿಕೆ * ಡ್ರಗ್ಸ್ ಪೆಡ್ಲರ್‌ ಬಗ್ಗೆ ಸುಳಿವು ಕೊಟ್ಟ ನಟ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 21:18 IST
Last Updated 24 ಸೆಪ್ಟೆಂಬರ್ 2020, 21:18 IST
ದಿಗಂತ್
ದಿಗಂತ್   

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆಗಾಗಿ ಸಿಸಿಬಿ ಪೊಲೀಸರ ಎದುರು ಹಾಜರಾಗಿದ್ದ ನಟ ದಿಗಂತ್, ಮಹತ್ವದ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾರೆ.

ಎರಡನೇ ಬಾರಿ ನೋಟಿಸ್‌ ಪಡೆದು ಸಿಸಿಬಿ ಕಚೇರಿಗೆ ಬಂದಿದ್ದ ದಿಗಂತ್ ಅವರ ಹೇಳಿಕೆಯನ್ನು ಪೊಲೀಸರು, ವಿಡಿಯೊ ಹಾಗೂ ಲಿಖಿತ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ.

‘ಕೆಲ ವರ್ಷಗಳ ಹಿಂದೆ ನನ್ನ ಬಲ ಕಣ್ಣಿಗೆ ಗಾಯವಾಗಿತ್ತು. ಅದರ ನೋವು ಹೆಚ್ಚಿತ್ತು. ಎಷ್ಟೇ ಮಾತ್ರೆ ತೆಗೆದುಕೊಂಡರೂ ನೋವು ಕಡಿಮೆ ಆಗಿರಲಿಲ್ಲ. ನಿದ್ದೆಯೂ ಬರುತ್ತಿರಲಿಲ್ಲ. ಇದರಿಂದ ಸಾಕಷ್ಟು ನೊಂದಿದ್ದೆ’ ಎಂದು ದಿಗಂತ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಸಿಸಿಬಿ ಮೂಲಗಳು ಹೇಳಿವೆ.

ADVERTISEMENT

‘ಯಾರೋ ಒಬ್ಬರು ಹೇಳಿದ್ದಕ್ಕಾಗಿ ಒಮ್ಮೆ ಮಾತ್ರ ಕೊಕೇನ್‌ ಸೇವಿಸಿದ್ದೆ. ಅದು ತಪ್ಪು ಹಾಗೂ ಅದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಆ ಮೇಲೆ ತಿಳಿಯಿತು. ನಂತರ, ಅಂಥ ಯಾವುದೇ ಡ್ರಗ್ಸ್ ಮುಟ್ಟಲಿಲ್ಲ’ ಎಂದೂ ದಿಗಂತ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪೆಡ್ಲರ್ ಮಾಹಿತಿ:ನಗರ ಹಾಗೂ ಹೊರ ದೇಶಗಳಲ್ಲಿ ನಡೆದಿದ್ದ ಪಾರ್ಟಿಗಳಲ್ಲೂ ದಿಗಂತ್ ಪಾಲ್ಗೊಂಡಿದ್ದರು ಎಂಬ ಮಾಹಿತಿ ಸಿಸಿಬಿ ಬಳಿ ಇದೆ. ಅದರ ಆಧಾರದಲ್ಲೇ ವಿಚಾರಣೆ ನಡೆಸಿದ್ದ ಸಿಸಿಬಿ, ದಿಗಂತ್ ಅವರಿಗೆ ಕೊಕೇನ್ ಪೂರೈಸಿದ್ದ ಡ್ರಗ್ಸ್‌ ಪೆಡ್ಲರ್‌ನ ಮಾಹಿತಿಯನ್ನೂ ಕಲೆಹಾಕಿದೆ. ಅದನ್ನು ಆಧರಿಸಿ ಪೆಡ್ಲರ್ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಚಾಟಿಂಗ್ ಅಳಿಸಿದ ನಟ; ಡ್ರಗ್ಸ್ ಜಾಲ ಸುದ್ದಿಯಾಗುತ್ತಿದ್ದಂತೆ ನಟ ದಿಗಂತ್, ತಮ್ಮ ಮೊಬೈಲ್‌ನಲ್ಲಿ ಆಫ್ರಿಕಾ ಪ್ರಜೆಯೊಬ್ಬರ ಜತೆ ನಡೆಸಿದ್ದ ಸಂಭಾಷಣೆಯನ್ನು ಅಳಿಸಿ ಹಾಕಿದ್ದಾರೆಂದು ಗೊತ್ತಾಗಿದೆ. ಮೊದಲ ಬಾರಿ ವಿಚಾರಣೆಗೆ ಬಂದಿದ್ದಾಗ ದಿಗಂತ್ ಹಾಗೂ ಅವರ ಪತ್ನಿಯೂ ಆದ ನಟಿ ಐಂದ್ರಿತಾ ರೇ ಅವರ ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

ಆಫ್ರಿಕಾ ಪ್ರಜೆ ಜತೆಗಿನ ಸಂದೇಶ ಅಳಿಸಿದ್ದ ಮಾಹಿತಿ ಮೊಬೈಲ್ ಪರಿಶೀಲನೆಯಿಂದ ಗೊತ್ತಾಗಿತ್ತು. ಆ ಬಗ್ಗೆಯೂ ದಿಗಂತ್‌ ಅವರಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ.

ನಟಿಯರು ಸೇರಿ ಐವರು ಇ.ಡಿ ವಶಕ್ಕೆ
ಡ್ರಗ್ಸ್‌ ಜಾಲದಲ್ಲಿ ಭಾಗಿಯಾದ ಆರೋಪದಡಿ ಜೈಲು ಸೇರಿರುವ ನಟಿಯರು ಸೇರಿದಂತೆ ಐವರನ್ನು ಇದೀಗ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಆರೋಪಿಗಳನ್ನು ಕಸ್ಟಡಿಗೆ ನೀಡಿ’ ಎಂದು ಕೋರಿ ಇ.ಡಿ ಅಧಿಕಾರಿಗಳು, ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳನ್ನು ಮುಂದಿನ ಐದು ದಿನಗಳವರೆಗೆ ಇ.ಡಿ ಕಸ್ಟಡಿಗೆ ನೀಡಿದೆ.

ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಉದ್ಯಮಿ ರಾಹುಲ್, ವಿರೇನ್ ಖನ್ನಾ ಹಾಗೂ ಬಿ.ಕೆ. ರವಿಶಂಕರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಅಧಿಕಾರಿಗಳ ವಿಚಾರಣೆಗೆ ಒಳಪಡಲಿದ್ದಾರೆ.

ಜಾಮೀನು ಅರ್ಜಿ ಮುಂದಕ್ಕೆ: ಡ್ರಗ್ಸ್ ಜಾಲ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಗರದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ ಸೆ. 28ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.