ADVERTISEMENT

‘ಪಠಾಣ್‌’: ಚಿತ್ರ ಮತ್ತು ಹಾಡಿನಲ್ಲಿ ಬದಲಾವಣೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 19:54 IST
Last Updated 29 ಡಿಸೆಂಬರ್ 2022, 19:54 IST
ಪ್ರಸೂನ್‌
ಪ್ರಸೂನ್‌   

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರದ ಹಾಡೊಂದು ಇತ್ತೀಚೆಗಷ್ಟೇ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸಿನಿಮಾ ಹಾಗೂ ಹಾಡಿನಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಚಿತ್ರತಂಡಕ್ಕೆ ನಿರ್ದೇಶಿಸಿದೆ.

‘ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮುನ್ನ, ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿದ ‘ಪಠಾಣ್‌’ ಚಿತ್ರದ ಪರಿಷ್ಕೃತ ಪ್ರತಿಯನ್ನು ಸಲ್ಲಿಸಲು ಚಿತ್ರದ ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲಂಸ್‌ಗೆ ಸಿಬಿಎಫ್‌ಸಿ ಸೂಚಿಸಿದೆ’ ಎಂದು ಮಂಡಳಿಯ ಅಧ್ಯಕ್ಷ ಪ್ರಸೂನ್‌ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿತ್ರತಂಡಕ್ಕೆ ಸೂಚಿಸಿರುವ ಬದಲಾವಣೆಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ಅವರು ಇಲ್ಲಿ ಉಲ್ಲೇಖಿಸಿಲ್ಲ. ‘ಸಿನಿಮಾ ನಿರ್ಮಾಣ ಮಾಡುವವರ ಸೃಜನಶೀಲತೆ ಮತ್ತು ಪ್ರೇಕ್ಷಕರ ಭಾವನೆಗಳ ನಡುವೆ ಸಮತೋಲನ ಸಾಧಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಪರಿಹಾರ ಕಂಡುಕೊಳ್ಳುವುದು ಸಿಬಿಎಫ್‌ಸಿ ಗುರಿಯಾಗಿದೆ’ ಎಂದಿದ್ದಾರೆ ಜೋಶಿ.

ಡಿ.12ರಂದು ಬಿಡುಗಡೆಯಾಗಿದ್ದ ಚಿತ್ರದ ‘ಬೇಷರಮ್‌ ರಂಗ್‌’ ಹಾಡು ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಹಾಡಿನಲ್ಲಿ ಕೇಸರಿ ಬಣ್ಣದ ಒಳಉಡುಪು ಧರಿಸಿದ್ದು ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಚಿತ್ರವನ್ನು ಬ್ಯಾನ್‌ ಮಾಡುವ ಕೂಗೂ ಇದೇ ಸಂದರ್ಭದಲ್ಲಿ ಎದ್ದಿತ್ತು. ಸಿನಿಮಾ ಜ.25ರಂದು ಬಿಡುಗಡೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.