ADVERTISEMENT

ರಾಮಗೋಪಾಲ್‌ ವರ್ಮಾಗೆ ಸೆನ್ಸಾರ್ ಶಾಕ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:45 IST
Last Updated 8 ಡಿಸೆಂಬರ್ 2019, 20:45 IST
   

ತೆಲುಗು ಸಿನಿರಂಗದಲ್ಲಿ ಹೆಚ್ಚು ಚರ್ಚೆಗೆ ಒಳಗಾದ, ರಾಜಕೀಯ ವಿಡಂಬನೆಯನ್ನು ಕಥಾವಸ್ತುವನ್ನಾಗಿಸಿಕೊಂಡ ಚಿತ್ರ ‘ಕಮ್ಮ ರಾಜ್ಯಂ ಲೊ ಕಡಪ ರೆಡ್ಲು’. ವಿವಾದಿತ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್‌ ಗೋಪಾಲ್ ವರ್ಮ ಈ ಚಿತ್ರದ ನಿರ್ದೇಶಕ. ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಬೇಕಿದ್ದು ಹೈದರಾಬಾದ್‌ನ ಸೆನ್ಸಾರ್‌ ಮಂಡಳಿ ಚಿತ್ರ ಬಿಡುಗಡೆಗೆ ತಡೆ ಹಾಕಿದೆ.

ಚಿತ್ರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್‌. ಜಗನ್‌ ಮೋಹನ್ ರೆಡ್ಡಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಅವರ ಪುತ್ರ ನಾರ ಲೋಕೇಶ್, ಜನಸೇವಾ ಪಕ್ಷದ ಮುಖಂಡ ಪವನ್ ಕಲ್ಯಾಣ್, ಕೆ. ಎ. ಪೌಲ್ ಸೇರಿದಂತೆ ಅನೇಕ ಹಿರಿಯ ರಾಜಕಾರಣಿಗಳ ಪಾತ್ರ ಹಾಗೂ ರಾಜಕೀಯದ ಸನ್ನಿವೇಶಗಳನ್ನು ಹೋಲುವಂತೆ ಚಿತ್ರೀಕರಿಸಲಾಗಿದೆ ಎಂಬುದು ಸೆನ್ಸಾರ್ ಮಂಡಳಿಯ ಅಭಿ‌ಪ್ರಾಯ. ಚಿತ್ರದಲ್ಲಿ ಅನೇಕ ವಿವಾದಾತ್ಮಕ ವಿಷಯಗಳು ಇರುವ ಕಾರಣಕ್ಕೆ ಸೆನ್ಸಾರ್ ಮಂಡಳಿ ಗಂಭೀರ ಅಕ್ಷೇಪ ವ್ಯಕ್ತಪಡಿಸಿದೆ.

ಈ ಚಿತ್ರವು ರಾಜಕೀಯ ಅಶಾಂತಿಯನ್ನು ಪ್ರಚೋದಿಸುವಂತಿದೆ. ಈಗಾಗಲೇ ರಾಜ್ಯದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ಜಾತಿಗಳ ನಡುವಿನ ಸಂಘರ್ಷ ಜೋರಾಗಿದೆ. ಇಂತಹ ಸಂದರ್ಭದಲ್ಲಿ ಚಿತ್ರದ ಬಿಡುಗಡೆಯಿಂದ ಇನ್ನಷ್ಟು ಕಲಹಗಳಾಗಬಹುದು ಎಂಬ ಉದ್ದೇಶದಿಂದ ಸೆನ್ಸಾರ್ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ADVERTISEMENT

ಈ ಎಲ್ಲಾ ವಿವಾದಗಳ ನಡುವೆಯೂ ರಾಮ್‌ ಗೋಪಾಲ್‌ ತಮ್ಮ ಚಿತ್ರಕ್ಕೆ ‘ಅಮ್ಮ ರಾಜ್ಯಂ ಲೊಕಡಪ ಬಿಡ್ದಲು’ ಎಂಬ ನಾಮಕರಣ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಆದರೂ ಸೆನ್ಸಾರ್ ಮಂಡಳಿ ಚಿತ್ರ ನಿರ್ದೇಶಕನ ಮೇಲೆ ಕರುಣೆ ತೋರಿಲ್ಲ. ‘ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಆ ಕಾರಣಕ್ಕೆ ಆರ್‌ಜಿವಿ ಪರಿಶೀಲನಾ ಸಮಿತಿಯ ಮುಂದೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಆದರೆ ಮೂಲಗಳ ಪ್ರಕಾರ ಸೆನ್ಸಾರ್ ಮಂಡಳಿಯು ಚಿತ್ರ ಬಿಡುಗಡೆಗೆ ತಡೆ ಹಾಕಲು ಕಾರಣಗಳು ಬೇರೆಯದ್ದೇ ಇವೇ ಎನ್ನುತ್ತಿವೆ.

ಚಿತ್ರದಲ್ಲಿ ನಿರ್ದಿಷ್ಟ ಸಮುದಾಯವೊಂದಕ್ಕೆ ಸೇರಿದ ಆಂಧ್ರಪ್ರದೇಶ ಭಾರತೀಯ ಜನತಾ ಪಕ್ಷದ ಸಚಿವರೊಬ್ಬರನ್ನು ನೇರವಾಗಿ ಗುರಿಯಾಗಿಸಲಾಗಿದೆ. ಆ ಕಾರಣಕ್ಕೆ ಅವರು ಸೆನ್ಸಾರ್ ಮಂಡಳಿ ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಹೇರಿದ್ದಾರೆ. ಜೊತೆಗೆ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡದಂತೆ ತಡೆದಿದ್ದಾರೆ ಎಂಬ ಸುದ್ದಿಗಳೂ ಕೇಳಿ ಬರುತ್ತಿವೆ.

ಈ ಎಲ್ಲದರ ನಡುವೆಯೂ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ಸಿದ್ಧವಿದ್ದು ಚಿತ್ರದ ಅನೇಕ ಸೀನ್‌ಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ ಎಂಬುದನ್ನು ಚಿತ್ರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.