
‘ಉಪಾಧ್ಯಕ್ಷ’ ಗೆಲುವಿನ ನಂತರ ಚಿಕ್ಕಣ್ಣ ಪೂರ್ಣಪ್ರಮಾಣದ ನಾಯಕನಾಗಿರುವ ಸಿನಿಮಾಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ. ‘ಅಯೋಗ್ಯ’, ‘ಮದಗಜ’ ಮುಂತಾದ ಚಿತ್ರಗಳನ್ನು ನೀಡಿರುವ ನಿರ್ದೇಶಕ ಮಹೇಶ್ ಕುಮಾರ್ ಜತೆ ತಮ್ಮ ಮುಂದಿನ ಚಿತ್ರಕ್ಕಾಗಿ ಚಿಕ್ಕಣ್ಣ ಕೈಜೋಡಿಸಿದ್ದಾರೆ. ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಚಿತ್ರವನ್ನು ನಿರ್ಮಿಸಿದ್ದ ಸೋಮಶೇಖರ್ ಕಟ್ಟಿಗೇನಹಳ್ಳಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಸದ್ಯ ‘ಲಕ್ಷ್ಮಿಪುತ್ರ’ ಸಿನಿಮಾದಲ್ಲಿ ಚಿಕ್ಕಣ್ಣ ನಟಿಸುತ್ತಿದ್ದಾರೆ.ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅದರ ಬೆನ್ನಲ್ಲೇ ಚಿಕ್ಕಣ್ಣ ಈ ಸಿನಿಮಾ ಒಪ್ಪಿಕೊಂಡಿದ್ದು ಅಕ್ಟೋಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
‘ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಚಿಕ್ಕಣ್ಣ ಬಣ್ಣ ಹಚ್ಚುತ್ತಿದ್ದಾರೆ. ವಿಭಿನ್ನ ಕಥಾಹಂದರದ ದೇಸಿ ಸೊಗಡಿನ ಚಿತ್ರವಿದು. ಸದ್ಯ ‘ಅಯೋಗ್ಯ 2’ ಚಿತ್ರದ ಚಿತ್ರೀಕರಣ ಮುಗಿಸಿರುವ ಮಹೇಶ್, ಈ ಸಿನಿಮಾದ ಸ್ಕ್ರಿಪ್ಟ್ ಕೆಲಸ ಅಂತಿಮಗೊಳಿಸುತ್ತಿದ್ದಾರೆ’ ಎಂದಿದೆ ಚಿತ್ರತಂಡ.
ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ದೊಡ್ಡ ಬಜೆಟ್‌ನಲ್ಲಿಯೇ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ವಿ.ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಚಿತ್ರಗ್ರಹಣವಿದೆ. ಮಾಸ್ತಿ, ರಘು ನಿಡುವಳ್ಳಿ ಹಾಗೂ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.