ADVERTISEMENT

ಸಾವಿನ ಸುದ್ದಿ ಮೊದಲು ಕೇಳಿದ ಆಘಾತ, ಸಂಕಟ ನನ್ನದು:ಬರಗೂರು ರಾಮಚಂದ್ರಪ್ಪ

ಕೆ.ಎಂ.ಸಂತೋಷ್‌ ಕುಮಾರ್‌
Published 8 ಜೂನ್ 2020, 14:21 IST
Last Updated 8 ಜೂನ್ 2020, 14:21 IST
   

ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಯನ್ನು ಆರಂಭದಲ್ಲಿ ಯಾರೂ ಕೂಡ ನಂಬಲು ತಯಾರಿರಲಿಲ್ಲ. ಸಾವಿನ ಸುದ್ದಿ ಕೇಳಿದವರೆಲ್ಲರೂ ‘ಸುಳ್ಳು ಹೇಳಬೇಡಿ. ಚಿರುಗೆ ಏನಾಗಿದೆ. ಅವರು ಯಾಕೆ ಸಾಯುತ್ತಾರೆ, ಇದು ಸಾಯುವ ವಯಸ್ಸಾ?’ ಎಂದು ಉದ್ಗರಿಸಿದವರೇ ಹೆಚ್ಚು.

ಇನ್ನು ಚಿರು ಚಿರನಿದ್ರೆಗೆ ಜಾರಿರುವಸುದ್ದಿಯನ್ನು ಅವರ ಕುಟುಂಬಕ್ಕೆ ತಿಳಿಸಲು ‌ಅಪೊಲೊ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೂ ತೊಳಲಾಡಿದ್ದಾರೆ. ಚಿರು ಮತ್ತು ಮೇಘನಾ ಕುಟುಂಬದವರಿಗೆ ಈ ಆಘಾತಕಾರಿ ಸುದ್ದಿಯನ್ನುಮುಟ್ಟಿಸಿ, ಎರಡೂ ಕುಟುಂಬಗಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕೆಲಸವನ್ನು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯು ಸಾಹಿತಿ ಮತ್ತು ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಹೆಗಲಿಗೆ ವಹಿಸಿದ್ದರಂತೆ.

‘ಸುಂದರ್‌ರಾಜ್‌ ಮತ್ತುಪ್ರಮಿಳಾ ಜೋಷಾಯ್‌ ಅವರ ಕುಟುಂಬ ನನಗೆ ತುಂಬಾ ಹತ್ತಿರದ್ದು. ಈ ದಂಪತಿಯ ಪುತ್ರಿ ಮೇಘನಾ ರಾಜ್ ಚಿಕ್ಕ ಹುಡುಗಿಯಾಗಿದ್ದಾಗ ಬಣ್ಣ ಹಚ್ಚಿದ್ದು ನನ್ನ ಸಿನಿಮಾ ‘ಕರಡಿಪುರ’ದಲ್ಲಿ. ಈ ಚಿತ್ರ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೂ ಆಯ್ಕೆಯಾಗಿತ್ತು.ಸುಂದರ್‌ರಾಜ್‌ ಮತ್ತು ಪ್ರಮಿಳಾ ಜೋಷಾಯ್‌ ಇಬ್ಬರೂ ನನ್ನ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಚಿರು ಅವರ ತಾತ ಶಕ್ತಿಪ್ರಸಾದ್‌ ನನ್ನ ಜಿಲ್ಲೆಗೆ ಸೇರಿದವರು ಮತ್ತು ನನ್ನ ಪತ್ನಿಯ ಪಕ್ಕದೂರಿನವರು. ಈ ಎರಡೂ ಕುಟುಂಬಗಳು ನನಗೆ ತುಂಬಾ ಹತ್ತಿರದವು. ಈ ಎರಡು ಕುಟುಂಬಗಳಿಗೆ ಆದ ದುರಂತ ಚಿತ್ರರಂಗಕ್ಕೆ ಆದ ದುರಂತವೇ ಸರಿ. ವೈಯಕ್ತಿಕವಾಗಿಯೂ ನನಗೆ ತುಂಬಾ ಸಂಕಟದ ಸುದ್ದಿ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.

ADVERTISEMENT

ಮೊದಲು ಸಾವಿನ ಸುದ್ದಿ ಕೇಳಿ ಸಂಕಟಪಟ್ಟ ಕ್ಷಣವನ್ನು ಬರಗೂರು ವಿವರಿಸಿದ್ದು ಹೀಗೆ;

‘ಭಾನುವಾರ ಮಧ್ಯಾಹ್ನ2.25ಕ್ಕೆ ಪ್ರಮಿಳಾ ಜೋಷಾಯ್‌ ಅವರು ಸುಂದರ್‌ ರಾಜ್‌ ಅವರ ಮೊಬೈಲ್‌ನಿಂದ ಕರೆ ಮಾಡಿದ್ದರು. ಚಿರಂಜೀವಿ ಸರ್ಜಾ ಅವರನ್ನುಅಪೊಲೊ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಾವೂ ಹೋಗುತ್ತಿದ್ದೇವೆ. ಅಲ್ಲಿನ ವೈದ್ಯರ ಮೊಬೈಲ್‌ ನಂಬರ್‌ ಕೊಡಿ ಎಂದು ಕೇಳಿದ್ದರು.ನನ್ನ ಪತ್ನಿಯನ್ನು ಅಪೊಲೊ ಆಸ್ಪತ್ರೆಗೆ ಸೇರಿಸಿ ಅಲ್ಲಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಟ್ಟುಕೊಂಡು ಚಿಕಿತ್ಸೆ ಕೊಡಿಸಿದ್ದೆವು. ಅಲ್ಲಿನ ವೈದ್ಯರ ಪರಿಚಯವಿತ್ತು. ತಕ್ಷಣ ಆಸ್ಪತ್ರೆಯ ವೈದ್ಯ ಡಾ.ಮುರಳಿ ಮತ್ತು ನರ್ಸಿಂಗ್‌ ವಿಭಾಗದ ಮೇಲ್ವಿಚಾರಕಿ ಆಲ್ಫಿಅವರನ್ನು ಸಂಪರ್ಕಿಸಿದೆ. ಆಸ್ಪತ್ರೆಯಲ್ಲಿ ಚಿರು ಆರೋಗ್ಯದ ಸ್ಥಿತಿಗತಿಯ ಬಗ್ಗೆ ಹದಿನೈದು ನಿಮಿಷಕ್ಕೊಮ್ಮೆ ಮಾಹಿತಿ ನೀಡುತ್ತಿದ್ದರು. ಅದನ್ನು ‘ಸುಂದರ್‌ರಾಜ್‌ ಮತ್ತುಪ್ರಮಿಳಾ ಜೋಷಾಯ್ ಕುಟುಂಬದವರಿಗೆ ಮುಟ್ಟಿಸುತ್ತಿದ್ದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪ್ರಕಾರ ಚಿರು ಆಸ್ಪತ್ರೆಗೆ ಹೋಗುವ ಮೊದಲೇ ಹೃದಯಸ್ತಂಬನವಾಗಿ ನಾಡಿಮಿಡಿತ ನಿಂತುಹೋಗಿತ್ತು. ವೈದ್ಯರು ತಮ್ಮ ಪ್ರಯತ್ನ ನಡೆಸುತ್ತಿದ್ದರು’.

‘ವೈದ್ಯರ ಪ್ರಯತ್ನ ಕೈಗೂಡದಿದ್ದಾಗ ಚಿರು ಮೃತಪಟ್ಟಿರುವುದನ್ನು ಘೋಷಿಸುವ ಹದಿನೈದು ನಿಮಿಷ ಮುಂಚಿತವಾಗಿ ಆಲ್ಫಿ ನನಗೆ ಕರೆ ಮಾಡಿ, ‘ಸರ್‌ ಚಿರು ಬದುಕುಳಿದಿಲ್ಲ. ಇಷ್ಟರಲ್ಲೇ ಡಿಕ್ಲೇರ್‌ ಮಾಡಲಿದ್ದಾರೆ ಎಂದರು. ವೈದ್ಯ ಡಾ.ಮುರಳಿ ಅವರು ನನಗೆ ಕರೆ ಮಾಡಿ, ‘ಈ ಸುದ್ದಿಯನ್ನು ಅವರ ಕುಟುಂಬದವರಿಗೆ ತಿಳಿಸಲು ಆಗುತ್ತಾ, ಒಂದು ಪರೋಕ್ಷ ಸೂಚನೆಯನ್ನಾದರೂ ಕೊಡಿ. ಅವರ ಕುಟುಂಬವನ್ನು ಈ ಆಘಾತ ಸಹಿಸಿಕೊಳ್ಳಲು ಮಾನಸಿಕವಾಗಿ ಸಿದ್ಧ ಮಾಡೋಣ’ ಎಂದು ಕೇಳಿದರು. ನಾನು ಈ ಸುದ್ದಿ ತಿಳಿಸುವುದು ಚೆನ್ನಾಗಿರುವುದಿಲ್ಲ ಎಂದೆ. ಅದಕ್ಕೂ ಅರ್ಧ ತಾಸು ಮುಂಚಿತವಾಗಿ ಸುಂದರ್‌ ರಾಜ್‌ ಮತ್ತು ಪ್ರಮೀಳಾ ಜೋಷಾಯ್‌ ಅವರಿಗೆ ನಾನು ಕರೆ ಮಾಡಿ ‘ಯಾವುದಕ್ಕೂ, ಎಲ್ಲದಕ್ಕೂ ಸಿದ್ಧವಾಗಿರಿ’ ಎಂದು ಪರೋಕ್ಷ ಸೂಚನೆ ಕೊಟ್ಟು, ಮಾನಸಿಕವಾಗಿ ಗಟ್ಟಿಗೊಳಿಸುವ ಕೆಲಸ ಮಾಡಿದ್ದೆ’.

‘ಸದ್ಯದಲ್ಲೇ ಡಾಕ್ಟರ್‌ಡಿಕ್ಲೇರ್‌ ಮಾಡ್ತಾರೆ, ಈ ವಿಷಯವನ್ನು ಡಾಕ್ಟರ್‌ ನಿಮಗೆ ತಿಳಿಸಲು ಹೇಳಿದ್ದಾರೆ’ ಎಂದ ಆಲ್ಫಿ ಎನ್ನುವ ಹೆಣ್ಣುಮಗಳು ಮಾತನ್ನು ಮೊಟ್ಟಮೊದಲು ಕೇಳಿದ ಆಘಾತ ಮತ್ತು ಸಂಕಟ ನನ್ನದು. ಇದು ತುಂಬಾ ನೋವಿನ ಸಂಗತಿ’ ಎಂದು ಬರಗೂರು ಕ್ಷಣ ಹೊತ್ತು ಮೌನದ ಮೊರೆಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.