ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಸಿನಿಮಾಗಳನ್ನು ನೋಡದೆಯೇ ಆಯ್ಕೆ ಮಾಡಲಾಗಿದೆ ಎಂದು ಅನೇಕ ಚಿತ್ರ ನಿರ್ಮಾಪಕರು ಗಂಭೀರವಾಗಿ ಆರೋಪಿಸಿದ್ದು, ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ಚಿತ್ರಗಳ ಆಯ್ಕೆ ಸಮಿತಿಗೆ ಚಿತ್ರರಂಗವನ್ನು ಪ್ರತಿನಿಧಿಸುವ ಅಂಗಸಂಸ್ಥೆಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು, ನಂತರ ಉಳಿದ ಕೆಲಸ ಮಾಡಬೇಕೆಂಬ ನಿಯಮವಿದೆ. ಆದರೆ, ಚಿತ್ರೋತ್ಸವದ ಆಯೋಜಕರು ಹಾಗೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆಯ್ಕೆ ಸಮಿತಿ ರಚಿಸಿದ್ದಾರೆ. ಸ್ಪರ್ಧೆಗೆ ಕಳುಹಿಸಿದ ಚಿತ್ರಗಳನ್ನು ಪೂರ್ತಿ ವೀಕ್ಷಿಸದೇ ಚಿತ್ರಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು 20ಕ್ಕೂ ಅಧಿಕ ನಿರ್ಮಾಪಕರು ಶನಿವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬುಧವಾರ (ಫೆ.19) ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ನಿರ್ದೇಶಕ ಅಭಿಲಾಶ್ ಶೆಟ್ಟಿಯವರ ಪೋಸ್ಟ್
‘ಈ ಸಲದ ಬೆಂಗಳೂರು ಚಿತ್ರೋತ್ಸವಕ್ಕಾಗಿ ನಮ್ಮ ‘ನಾಳೆ ರಜ ಕೋಳಿ ಮಜ’ ಚಿತ್ರವನ್ನು ಕನ್ನಡ, ಭಾರತ ಮತ್ತು ಏಷ್ಯನ್ ಮೂರು ವಿಭಾಗಗಳಿಗೂ ಕಳುಹಿಸಿದ್ದೆ. ‘ಸಿನಿಸೆಂಡ್’ ಡಿಜಿಟಲ್ ಮಾಧ್ಯಮದಲ್ಲಿ ಪ್ರತ್ಯೇಕ ಸ್ಕ್ರೀನರ್ ಮಾಡಿದ್ದೆ. ಇದುವರೆಗೆ ಒಂದೇ ವ್ಯೂ ಆಗಿತ್ತು. ಉಳಿದೆರಡು ವಿಭಾಗಗಳಿಗೆ ಶುಲ್ಕ ಕಟ್ಟಿಸಿಕೊಂಡು ಚಿತ್ರವನ್ನೇ ನೋಡಿರಲಿಲ್ಲ. ಚಿತ್ರೋತ್ಸವದ ಆಯೋಜಕರಿಂದ ಸ್ಪಷ್ಟೀಕರಣ ಕೇಳಿದರೂ ಉತ್ತರ ಬರಲಿಲ್ಲ. ಉಳಿದ ಚಿತ್ರತಂಡಗಳು ಕೂಡ ಈ ಬಗ್ಗೆ ಗಮನಹರಿಸಿದಾಗ, 20ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡದೇ ಇರುವುದು ಬೆಳಕಿಗೆ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಅಭಿಲಾಷ್ ಶೆಟ್ಟಿ.
ಮಾರ್ಚ್ 1ರಿಂದ ಚಿತ್ರೋತ್ಸವ ಪ್ರಾರಂಭವಾಗಲಿದೆ.
‘ಸಾಮಾನ್ಯವಾಗಿ ವಿಮಿಯೊ ಅಥವಾ ಸಿನಿಸೆಂಡ್ ಮೂಲಕ ಸಿನಿಮಾಗಳನ್ನು ಕಳುಹಿಸುತ್ತಾರೆ. ಇದರಿಂದ ಡೌನ್‌ಲೋಡ್ ಮಾಡಿ ಚಿತ್ರ ನೋಡುವುದು ಈಗ ಕಷ್ಟವಿದೆ. ಕಾನೂನಿನ ಪ್ರಕಾರ ಚಿತ್ರವನ್ನು ಡೌನ್‌ಲೋಡ್ ಮಾಡಿ ನೋಡುವಂತಿಲ್ಲ. ತಾಂತ್ರಿಕ ಕಾರಣದಿಂದಾಗಿ ಚಿತ್ರ ನೋಡಿದ್ದು ನಿಮ್ಮ ಸ್ಕ್ರೀನರ್‌ನಲ್ಲಿ ಕಾಣಿಸಿಲ್ಲ ಎಂದು ಸಬೂಬು ಹೇಳುವುದು ಹಾಸ್ಯಾಸ್ಪದ. ಅನುಮತಿ ಇಲ್ಲದೆ ಡೌನ್‌ಲೋಡ್ ಮಾಡುವುದು ಪೈರಸಿಗೆ ಸಮ. ವಿಮಿಯೊ ದೊಡ್ಡ ಕಂಪನಿ. ಈ ರೀತಿ ತಾಂತ್ರಿಕ ಅಡಚಣೆಗೆ ಆಸ್ಪದ ನೀಡುವುದಿಲ್ಲ. 20–30 ಸಿನಿಮಾಗಳಿಗೂ ತಾಂತ್ರಿಕ ತೊಂದರೆಯ ನೆಪ ಹೇಳಿದರೆ ನಂಬುವುದು ಹೇಗೆ? ಕೆಲವು ಚಿತ್ರಗಳನ್ನು 9–10 ನಿಮಿಷ ಮಾತ್ರ ನೋಡಿದ್ದಾರೆ. ಇದೂ ಗೊತ್ತಾಗುತ್ತದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ, ಈ ಹಿಂದೆ ಚಿತ್ರೋತ್ಸವದ ಭಾಗವೇ ಆಗಿದ್ದ ವ್ಯಕ್ತಿಯೊಬ್ಬರು.
‘ಇದು ಎಂಕ, ನಾಣಿ, ಸೀನನ ಚಿತ್ರೋತ್ಸವ. ಪ್ರತಿ ವರ್ಷ ಆಯ್ಕೆಯಲ್ಲಿ ಕೆಲವು ಹಿತಾಸಕ್ತಿಗಳು ಕೆಲಸ ಮಾಡುವುದು ಸಹಜ. ಚಿತ್ರವನ್ನು ನೋಡದೆಯೇ ಆಯ್ಕೆ ನಿರ್ಧರಿಸಿದ್ದು ತಪ್ಪು. ಹೊಸ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕೆಲವು ಚಿತ್ರತಂಡದವರು ಹೈಕೋರ್ಟ್ ಮೆಟ್ಟಿಲು ಏರಿದ್ದೇವೆ. ವಾರ್ತಾ ಇಲಾಖೆ, ಮುಖ್ಯಮಂತ್ರಿ ಗಮನಕ್ಕೂ ಈ ವಿಷಯವನ್ನು ತರುತ್ತೇವೆ’ ಎನ್ನುತ್ತಾರೆ ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್.
‘136 ಸಿನಿಮಾಗಳು ಬಂದಿದ್ದವು. ಆಯ್ಕೆ ಸಮಿತಿ ಸದಸ್ಯರು ಎಲ್ಲ ಸಿನಿಮಾಗಳನ್ನೂ ಪೂರ್ತಿಯಾಗಿ ನೋಡಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಾಕ್ಷ್ಯಗಳಿವೆ. ನ್ಯಾಯಾಲಯದಲ್ಲಿ ನಾವು ಎಲ್ಲ ದಾಖಲೆಗಳನ್ನು ಒದಗಿಸುತ್ತೇವೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪಿ.ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ನಟೇಶ್ ಹೆಗಡೆಯವರ ‘ಪೆದ್ರೊ’ ಪೃಥ್ವಿ ಕೊಣನೂರು ನಿರ್ದೇಶನದ ‘ರೈಲ್ವೆ ಚಿಲ್ಡ್ರನ್’ಗಳಂತಹ ಚಿತ್ರಗಳು ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದರೂ ಬೆಂಗಳೂರು ಚಿತ್ರೋತ್ಸವದಲ್ಲಿ ಈ ಹಿಂದೆ ಜಾಗ ಸಿಕ್ಕಿರಲಿಲ್ಲ. ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆಗೊಂಡಿದ್ದ ‘ಬಾರಾ ಬೈ ಬಾರಾ’ ಕೊಂಕಣಿ ಚಿತ್ರ ‘ಜುಜೆ’ ಕನ್ನಡದ ‘ಗಂಟುಮೂಟೆ’ಯಂತಹ ಚಿತ್ರವೂ ಇಲ್ಲಿ ಪ್ರದರ್ಶನಗೊಂಡಿರಲಿಲ್ಲ.
ಆಯ್ಕೆಯಲ್ಲಿ ರಾಜಕೀಯ ಲಾಬಿ ಇರುವುದು ಹೊಸ ವಿಷಯವಲ್ಲ. ಸಿನಿಮಾ ಚೆನ್ನಾಗಿದ್ದರೆ ಆಯ್ಕೆಯಾಗಬೇಕು. ಫೋನ್ ಕರೆಗಳ ಮೂಲಕ ಚಿತ್ರ ಆಯ್ಕೆಯಾಗಬಾರದು. ಬೆಂಗಳೂರು ಚಿತ್ರೋತ್ಸವದ ಕುರಿತು ಬೇರೆ ಕಡೆಗಳಲ್ಲಿಯೂ ಒಳ್ಳೆ ಅಭಿಪ್ರಾಯವಿಲ್ಲ. ಲಾಬಿಯೇ ಮಾಡುವುದಾದರೆ ತೀರ್ಪುಗಾರರ ಮಂಡಳಿ ಯಾಕೆ ಬೇಕು? ಹೀಗಾದಲ್ಲಿ ಇಲ್ಲಿ ಸಿಗುವ ಪ್ರಶಸ್ತಿಗೆ ಮೂರು ಕಾಸಿನ ಬೆಲೆಯೂ ಇರದು. ಪುಣೆ ಚಿತ್ರೋತ್ಸವದಂತೆ ಇಲ್ಲಿಯೂ ಯಾರ ಫೋನ್ ಕರೆಗಳಿಗೂ ಸ್ಪಂದಿಸದ ಲಾಬಿಗೆ ಮಣಿಯದ ತೀರ್ಪುಗಾರರನ್ನು ನೇಮಕ ಮಾಡಿಕೊಳ್ಳಬೇಕು’–ಪೃಥ್ವಿ ಕೊಣನೂರು ನಿರ್ದೇಶಕ ನಿರ್ಮಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.