ಪೃಥ್ವಿ ಅಂಬಾರ್
‘ರಥಾವರ’ ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಆ್ಯಕ್ಷನ್ ಕಟ್ ಹೇಳಿರುವ, ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಚೌಕಿದಾರ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣಪತ್ರ ನೀಡಿದೆ.
ಅಪ್ಪ ಮಗನ ಬಾಂಧವ್ಯದ ಕುರಿತ ಈ ಸಿನಿಮಾದಲ್ಲಿ ಸಾಯಿಕುಮಾರ್ ಹಾಗೂ ಪೃಥ್ವಿ ಅಂಬಾರ್ ತಂದೆ–ಮಗನಾಗಿ ಜೊತೆಯಾಗಿದ್ದಾರೆ. ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್ಕುಮಾರ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಫ್ಯಾಮಿಲಿ ಡ್ರಾಮಾ ಜಾನರ್‌ನಲ್ಲಿದೆ. ‘ಚಿತ್ರವನ್ನು ಸೆನ್ಸಾರ್ ಮಂಡಳಿ ಸದಸ್ಯರು ಶ್ಲಾಘಿಸಿದ್ದಾರೆ. ಅದರಲ್ಲಿಯೂ ಸಾಯಿ ಕುಮಾರ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ. ಮನಸ್ಸಿಗೆ ಹತ್ತಿರವೆನಿಸುವ ಪಾತ್ರದಲ್ಲಿ ಸಾಯಿಕುಮಾರ್ ಅಮೋಘವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಚಿತ್ರತಂಡ ತಿಳಿಸಿದೆ.
ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಚಿತ್ರಗ್ರಹಣ, ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಚಿತ್ರದ ಹಾಡುಗಳಿಗಿವೆ. ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬರಲಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ ಎಂದಿದೆ ಚಿತ್ರತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.