ADVERTISEMENT

ಗಾರೆ ಕೆಲಸದಿಂದ ನಿರ್ದೇಶನದವರೆಗಿನ ‘ಚಂದ್ರಪ್ರಭ‘

ಎನ್.ನವೀನ್ ಕುಮಾರ್
Published 11 ಅಕ್ಟೋಬರ್ 2019, 19:45 IST
Last Updated 11 ಅಕ್ಟೋಬರ್ 2019, 19:45 IST
ಆಂಗಿಕಂ ಚಿತ್ರದಲ್ಲಿ ಚಂದ್ರಪ್ರಭ
ಆಂಗಿಕಂ ಚಿತ್ರದಲ್ಲಿ ಚಂದ್ರಪ್ರಭ   

ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿದ್ದ ಆತನಿಗೆ ಮುಂದೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಗಾರೆ ಕೆಲಸ, ಕಬ್ಬು ಕಡಿಯುವ ಕೆಲಸ ಮಾಡುತ್ತಿದ್ದ ಆತ ರೆಸಾರ್ಟ್‌ವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿದ್ದ. ಬಾಗಿಲು ಕಾಯುವ ಕೆಲಸ ಆತನಿಗೆ ಬೇಸರ ತರಿಸಿತ್ತು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿದ್ದ ಆತನಿಗೆ ಮೈಸೂರಿನ ರಂಗಾಯಣದ ಒಡನಾಟ ಸಿಕ್ಕಿತು. ರಂಗಭೂಮಿಯ ಎಲ್ಲ ಪ್ರಕಾರಗಳಲ್ಲಿ ಪಳಗಿದ ಆತನಿಗೆ ಕಾಮಿಡಿ ಶೋಗಳಲ್ಲಿ ನಟಿಸುವ ಅವಕಾಶ ಒಲಿದು ಬಂತು. ತನ್ನದೇ ವಿಶಿಷ್ಟ ದೇಹಭಾಷೆಯಿಂದಾಗಿ ಗಮನ ಸೆಳೆದ ಆತ, ಸದ್ಯ ಎಂಡೋಸಲ್ಫಾನ್ ಪೀಡಿತ ಮಕ್ಕಳ ಸ್ಥಿತಿಗತಿಗಳನ್ನು ಆಧರಿಸಿದ ‘ಆಂಗಿಕಂ’ ಚಲನಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದ ಚಂದ್ರಪ್ರಭ ಜಿ. ಅವರೇ ಈ ಸಾಧನೆಯ ರೂವಾರಿ. ತಂದೆ ಗವಿರಂಗಯ್ಯ, ತಾಯಿ ವೃಷಭಾದೇವಿ. ಕಾಮಿಡಿ ಶೋಗಳ ಮೂಲಕ ಪ್ರಸಿದ್ಧಿ ಪಡೆದ ಚಂದ್ರಪ್ರಭ ಅವರು ಉಪೇಂದ್ರ ಅಂತಹ ನಟರೊಂದಿಗೆ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅವರು ಈ ಹಂತಕ್ಕೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದಾರೆ. ಪರಿಶ್ರಮ ಹಾಕಿದ್ದಾರೆ, ಎಷ್ಟೋ ಅವಮಾನಗಳನ್ನು ಅನುಭವಿಸಿದ್ದಾರೆ.

ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಕುಳಿತಿದ್ದಾಗ ಪಕ್ಕದಲ್ಲೇ ಇರುವ ರಂಗಾಯಣದಲ್ಲಿ ನಡೆಯುತ್ತಿದ್ದ ಚಿಣ್ಣರ ಮೇಳದಲ್ಲಿ ಮಕ್ಕಳ ಸದ್ದು ಕೇಳಿಸುತ್ತದೆ. ಮಕ್ಕಳು ನಾಟಕ ಕಲಿಯುತ್ತಿರುವುದನ್ನು ಗಮನಿಸಿದ ಅವರು, ರಂಗಾಯಣದ ಒಂದು ವರ್ಷದ ರಂಗ ತರಬೇತಿಗೆ ಸೇರುವ ನಿರ್ಧಾರ ಕೈಗೊಳ್ಳುತ್ತಾರೆ. ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ತರಬೇತಿ ಮುಂದುವರಿಸುತ್ತಾರೆ. ಆದರೆ, ಕೈಯಲ್ಲಿ ಹಣವಿಲ್ಲದೆ, ಸ್ನೇಹಿತರು, ಬಂಧು ಬಳಗದವರ ಮುಂದೆ ಕೈಚಾಚಲು ಇಷ್ಟವಾಗದೆ ನಾಟಕ ತರಬೇತಿಯನ್ನು ಬಿಟ್ಟು ಮೊದಲಿನ ಕೆಲಸಕ್ಕೆ ಹೋಗಲು ಮನಸು ಹಾತೊರೆಯುತ್ತದೆ. ಆದರೆ, ಏನೇ ಆಗಲಿ, ಹಿಡಿದ ಕೆಲಸವನ್ನು ಬಿಡಬಾರದು. ಮಾಡುವ ಕೆಲಸವನ್ನೇ ಭಿನ್ನವಾಗಿ ಮಾಡುತ್ತಾ ತನ್ನದೇ ಛಾಪು ಮೂಡಿಸಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ ಚಂದ್ರಪ್ರಭ.

ADVERTISEMENT

ಇದೇ ಸಂದರ್ಭದಲ್ಲಿ ರಂಗಾಯಣದಲ್ಲಿ ಬೆಳಕು ವಿನ್ಯಾಸಕಾರರಾಗಿದ್ದ ಸಗಾಯ್ ರಾಜು ಅವರು ಧೈರ್ಯ ತುಂಬುತ್ತಾರೆ. ಅವರು ತಮ್ಮ ಮನೆಯಲ್ಲೇ ಉಳಿಸಿಕೊಂಡು ಊಟ, ವಸತಿ ವ್ಯವಸ್ಥೆ ಕಲ್ಪಿಸುತ್ತಾರೆ. ತಮ್ಮ ಸಹಾಯಕನನ್ನಾಗಿ ಮಾಡಿಕೊಂಡು ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡುವುದನ್ನು ಹೇಳಿಕೊಡುತ್ತಾರೆ. ಅವರೊಂದಿಗೆ ಆರು ವರ್ಷಗಳವರೆಗೆ ಕೆಲಸ ಮಾಡಿದ ಚಂದ್ರಪ್ರಭ, ನಂತರ, ಜಿ.ಬಿ.ಸಿದ್ದೇಗೌಡ ಅವರ ಬಳಿ ಸಿನಿಮಾ ನಿರ್ದೇಶನಕ್ಕೆ ಸಂಬಂಧಿಸಿದ ಪಟ್ಟುಗಳನ್ನು ತಿಳಿದುಕೊಳ್ಳುತ್ತಾರೆ.

ಅಂಧ, ಕಿವುಡ ಮಕ್ಕಳಿಗೆ ನಾಟಕ:

ಅಂಧ ವಿದ್ಯಾರ್ಥಿಗಳು, ಕಿವುಡ ಹಾಗೂ ಮೂಗ ಮಕ್ಕಳು ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಎಚ್.ಐವಿ ಪೀಡಿತರು, ಸಲಿಂಗ ಕಾಮಿಗಳಿಗೆ ನಾಟಕಗಳನ್ನು ನಿರ್ದೇಶಿಸಿದ ಹೆಗ್ಗಳಿಗೆ ಚಂದ್ರಪ್ರಭ ಅವರದ್ದು.

‘ಕಲರ್ಸ್‌ ಸೂಪರ್ ವಾಹಿನಿಯವರು ಕಾಮಿಡಿ ಶೋಗೆ ಆಡಿಷನ್ ಮಾಡುತ್ತಿರುವ ವಿಷಯ ತಿಳಿದ ಸ್ನೇಹಿತ ರವಿಶಂಕರ್, ನೀನು ಆಡಿಷನ್ ನಲ್ಲಿ ಭಾಗವಹಿಸು ಎಂದು ಒತ್ತಾಯ ಮಾಡಿದ್ದ. ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಭಾಗವಹಿಸಿದೆ. ನೀನು ಶೋಗೆ ಆಯ್ಕೆ ಆಗಿದ್ದೀಯ ಎಂದು ವಾನಿಯವರು ಹೇಳಿದ್ದರು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಅದೇ ಖುಷಿಯಲ್ಲಿದ್ದ ನನಗೆ ನಿರಾಸೆ ಕಾದಿತ್ತು. ನೀವು ಕಾಯ್ದಿರಿಸಿದ ಪಟ್ಟಿಯಲ್ಲಿ ಇದ್ದೀರಿ ಎಂದರು. ಬೇಸರದಿಂದ ಊರಿಗೆ ಬಂದೆ. ನಂತರ ಕರೆ ಮಾಡಿದ ವಾಹಿನಿಯವರು, ‘ನಿಮಗೆ ಸಣ್ಣ ಪಾತ್ರವಿದ್ದು, ಎರಡು ದಿನಗಳ ಶೂಟಿಂಗ್ ಇದೆ. ಬಂದು ನಟಿಸಬಹುದು’ ಎಂದು ಆಹ್ವಾನ ನೀಡಿದರು. ಹೋಗಿ ಆ ಪಾತ್ರದಲ್ಲಿ ನಟಿಸಿದೆ. ನನ್ನ ನಟನೆಯನ್ನು ಕಂಡು, ಪೂರ್ಣ ಪ್ರಮಾಣದಲ್ಲಿ ಶೋನಲ್ಲಿ ನಟಿಸುವಂತೆ ಹೇಳಿದರು. ಅಂದಿನಿಂದ ಮಜಾ ಭಾರತ, ಕಾಮಿಡಿ ಟಾಕೀಸ್, ಮಜಾ ಟಾಕೀಸ್‌ ಶೋಗಳಲ್ಲಿ ನಟಿಸಿದೆ. ನಟ, ನಿರೂಪಕ ಸೃಜನ್ ಲೋಕೇಶ್ ಅವರೂ ಕೂಡ ನನಗೆ ಒಳ್ಳೆಯ ಅವಕಾಶ ಕೊಟ್ಟರು’ ಎಂದು ಚಂದ್ರಪ್ರಭ ಸ್ಮರಿಸುತ್ತಾರೆ.

‘ಮಜಾಭಾರತ’ ಕಾಮಿಡಿ ಶೋನಲ್ಲಿ ಗ್ರಾಮೀಣ ಶೈಲಿಯಲ್ಲಿ ಡೈಲಾಗ್ ಹೊಡೆಯುತ್ತಾ, ವಿಭಿನ್ನ ಅಭಿನಯದ ಮೂಲಕ ನೋಡುಗರ ಮುಖದಲ್ಲಿ ನಗೆಯುಕ್ಕಿಸುತ್ತಿದ್ದ ಚಂದ್ರಪ್ರಭ ತೀರ್ಪುರಾಗರರ ಮೆಚ್ಚುಗೆಗೂ ಪಾತ್ರರಾಗಿದ್ದರು.

‘ನಮ್ ಏರಿಯಾದಲ್ಲಿ ಒಂದ್ ದಿನ’, ‘ತರ್ಲೆ ವಿಲೇಜ್’, ‘ಐರಾವತ’, ‘ಪರಸಂಗ’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಅವರು, ‘ಐ ಲವ್ ಯು’ ಚಿತ್ರದಲ್ಲಿ ಉಪೇಂದ್ರ ಅವರ ಸ್ನೇಹಿತನಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ, ಪಾರವ್ವನ ಕನಸು ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.