ADVERTISEMENT

ತೆರೆಗೆ ಬರಲು ಸಜ್ಜಾದ ಅಧ್ಯಕ್ಷ...

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:31 IST
Last Updated 1 ಆಗಸ್ಟ್ 2019, 19:31 IST
   

ರಾ ಗಿಣಿ ದ್ವಿವೇದಿ ಮತ್ತು ಶರಣ್‌ ನಟನೆಯ ‘ಅಧ್ಯಕ್ಷ ಇನ್‌ ಅಮೆರಿಕಾ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಮೊದಲ ಟ್ರೇಲರ್‌ ಅನ್ನು ಶನಿವಾರ ಬಿಡುಗಡೆ ಮಾಡಲಾಗಿದೆ.

ಟ್ರೇಲರ್‌ ನೋಡಿದರೆ, ಚಿತ್ರದಲ್ಲಿ ಭರಪೂರ ಹಾಸ್ಯ, ಮನರಂಜನೆ ಇರುವುದು ಮನದಟ್ಟಾಗುತ್ತದೆ.ಶರಣ್‌, ಗೋವಿಂದೇಗೌಡ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿಯವರ ಕಾಮಿಡಿ ಪ್ರೇಕ್ಷಕರಿಗೆ ಸಖತ್‌ ಕಿಕ್‌ ನೀಡಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿರುವ ರಾಗಿಣಿ ನಟನೆ ಮತ್ತು ಮಾದಕ ನೋಟ ಪ್ರೇಕ್ಷಕರಿಗೆ ಮುದನೀಡಲಿದೆ. ಈ ಸಿನಿಮಾ ಮಲಯಾಳದ ‘ಟು ಕಂಟ್ರೀಸ್‌’ ಚಿತ್ರದ ರಿಮೇಕ್.

ಚಿತ್ರದ ಟ್ರೇಲರ್‌ ಬಿಡುಗಡೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಇಳಿದ ನಟ ಶರಣ್‌, ‘ನಾನು ಮೊದಲು ನಟಿಸಿದ, ಸಿದ್ದಲಿಂಗಯ್ಯ ನಿರ್ದೇಶನದ ‘ಪ್ರೇಮ ಪ್ರೇಮ ಪ್ರೇಮ’ ಚಿತ್ರದ ಡಬ್ಬಿಂಗ್‌ ಇದೇ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನಡೆದಿತ್ತು. ಅಯೋಗ್ಯ ಸಿನಿಮಾದ ಆಡಿಯೊ ಬಿಡುಗಡೆಯೂಇಲ್ಲೇ ಆಗಿತ್ತು. ಈಗ ನನ್ನ ಬಹು ನಿರೀಕ್ಷಿತ ಚಿತ್ರದ ಟ್ರೇಲರ್‌ ಕೂಡ ಇಲ್ಲೇ ಬಿಡುಗಡೆಯಾಗಿದೆ’ ಎಂದು ಚಾಮುಂಡೇಶ್ವರಿ ಸ್ಟುಡಿಯೊ ಜತೆಗೆ ತಮಗಿರುವ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.

ADVERTISEMENT

ಸದ್ಯದಲ್ಲೇ ಆಡಿಯೊ ಬಿಡುಗಡೆ ಕೂಡ ಮಾಡಲು ಯೋಚಿಸಿದ್ದೇವೆ. ಆಗಸ್ಟ್‌ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕಲಾವಿದರ ಮತ್ತು ತಂತ್ರಜ್ಞರ ಶ್ರಮ ಟ್ರೇಲರ್‌ನಲ್ಲಿ ಕಾಣಿಸುತ್ತಿದೆ. ‘ಅಧ್ಯಕ್ಷ’ ಸಿನಿಮಾ ಕೂಡ ಆಗಸ್ಟ್‌ ಕೊನೆಯಲ್ಲಿ ಬಿಡುಗಡೆಯಾಗಿತ್ತು. ಅಧ್ಯಕ್ಷ ಸಿನಿಮಾದ ಮುಂದುವರಿದ ಭಾಗವಲ್ಲ ಇದು. ಆದರೆ, ಆ ಸಿನಿಮಾದಲ್ಲಿರುವ ಪಾತ್ರದ ಹೋಲಿಕೆಯ ಛಾಯೆ ಇಲ್ಲಿ ಕಾಣಬಹುದು. ಹೊಸ ದಂಪತಿ ಅಮೆರಿಕಕ್ಕೆ ಹೋದಾಗ ಅಲ್ಲಿ ಎದುರಿಸುವ ಸನ್ನಿವೇಶವೇ ಈ ಚಿತ್ರದ ಕಥಾಹಂದರ. ನನ್ನ ಹೆಚ್ಚಿನಸಿನಿಮಾಗಳಲ್ಲಿ ಮದುವೆಯಾಗುವ ಮೂಲಕ ಸಿನಿಮಾ ಮುಗಿಯುತ್ತಿತ್ತು. ಆದರೆ, ಇದರಲ್ಲಿ ಮದುವೆಯಾಗುವ ಮೂಲಕ ಸಿನಿಮಾ ಕಥೆ ಶುರುವಾಗುತ್ತದೆ ಎನ್ನುವ ಮಾತು ಸೇರಿಸಿದರು ಶರಣ್‌.

ಒಂದು ಗಂಟೆ ತಡವಾಗಿ ಬಂದನಟಿ ರಾಗಿಣಿ ದ್ವಿವೇದಿ, ‘ಏಕೆ ಯಾರಲ್ಲೂ ಉತ್ಸಾಹ, ನಗುವೇ ಕಾಣಿಸುತ್ತಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿದ್ದವರ ಮೊಗದಲ್ಲಿ ಮಂದಹಾಸ ಮೂಡಿಸಲು ಯತ್ನಿಸಿದರು. ‘ಇದೇ ಮೊದಲ ಬಾರಿಗೆ ಕಾಮಿಡಿ ಜಾನರ್‌ ಸಿನಿಮಾದಲ್ಲಿ ನಟಿಸಿದ್ದೇನೆ. ನಾವು ನಿರೀಕ್ಷೆ ಮಾಡಿದಂತೆಯೇ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ‘ಕಾಮಿಡಿ ಕಿಂಗ್‌’ ಶರಣ್‌ ಅಭಿನಯಕ್ಕೆ ತಲೆದೂಗದವರೇ ಇಲ್ಲ. ಈ ಸಿನಿಮಾ ವರ್ಷದ ಅತ್ಯುತ್ತಮ ಹಾಸ್ಯ ಚಿತ್ರವೆನಿಸಿಕೊಳ್ಳುವುದರಲ್ಲಿ ಡೌಟೇ ಇಲ್ಲ’ ಎಂದರು.

ನಿರ್ದೇಶಕ ಯೋಗಾನಂದ್, ‘ಸಿನಿಮಾ ಬಿಡುಗಡೆಗೆ ಅನುಮತಿಗಾಗಿ ಸೆನ್ಸಾರ್‌ ಮಂಡಳಿಗೆ ಅರ್ಜಿ ಸಲ್ಲಿಸಲಾಗಿದೆ.ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಕುತೂಹಲ ಮತ್ತು ಒತ್ತಡದಲ್ಲಿದ್ದೇನೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಅದರಲ್ಲೂ ಶರಣ್‌ ಅವರ ಬದ್ಧತೆ ಮತ್ತು ಹಾಸ್ಯಪ್ರಜ್ಞೆ ನಮ್ಮ ಸಿನಿಮಾ ಕೆಲಸವನ್ನು ನೀರು ಕುಡಿದಷ್ಟು ಸರಾಗಗೊಳಿಸಿತು. ಇನ್ನೂ ಪ್ರೇಕ್ಷಕರು ನಮ್ಮನ್ನು ಕೈಹಿಡಿಯಬೇಕು’ ಎಂದು ಮಾತು ಸೇರಿಸಿದರು.

ಸಿನಿಮಾ ವಿತರಕ ಶೈಲೇಂದ್ರ ಬಾಬು, ‘ಮಲಯಾಳದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಚಿತ್ರ, ಕನ್ನಡದಲ್ಲಿ ಅದಕ್ಕಿಂತಲೂ ಹೆಚ್ಚು ಯಶಸ್ಸು ಕಾಣುವ ವಿಶ್ವಾಸವಿದೆ. ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ. ರಾಜ್ಯದ ಪ್ರಮುಖ 250 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎನ್ನುವ ಮಾಹಿತಿ ನೀಡಿದರು. ನಿರ್ಮಾಪಕಿ ವಿಜಯಾ ಇಡೀ ಚಿತ್ರತಂಡವನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.