
ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಈ ಚಿತ್ರ ಹಾಗೂ ಅದರಲ್ಲಿನ ತಮ್ಮ ಪಾತ್ರ ಕುರಿತು ಅವರು ಮಾತನಾಡಿದ್ದಾರೆ.
ಯಾವ ಜಾನರ್‌ನ ಚಿತ್ರ? ಅದರಲ್ಲಿ ನಿಮ್ಮ ಪಾತ್ರವೇನು?
ಉತ್ತರ: ನನ್ನದು ಬಡ ರೈತನ ಪಾತ್ರ. ಯಾವಾಗಲೂ ಸರ್ವರಿಗೂ, ಎಲ್ಲ ವರ್ಗದವರಿಗೂ ಸಮಾನತೆ ಬೇಕು ಎಂಬ ವಿಷಯ ಹೊಂದಿರುವ ಕಥೆ. 1975–80ರ ಅವಧಿಯಲ್ಲಿ ನಡೆದ ಒಂದಷ್ಟು ಘಟನೆಗಳ ಆಧಾರಿತ ಕಥೆ ಎನ್ನಬಹುದು. ಆಗ ಅಮಾಯಕ ರೈತರಿದ್ದರು. ಭೂಮಿ ಮತ್ತು ಬದುಕಿಗಾಗಿ ಅವರ ಹೋರಾಟ ಏನಿತ್ತು ಎಂದು ಹೇಳುವಂಥ ವಿಷಯ. ಹಳ್ಳಿ, ಹಳ್ಳಿಗೂ, ಸಮಾನತೆ ಬರಬೇಕು, ಸಂವಿಧಾನದ ಆಶಯಗಳು ಈಡೇರಬೇಕು ಎಂದು ವಿನಂತಿ ಮಾಡಿಕೊಳ್ಳುವ ಸಿನಿಮಾ.
ಈ ಚಿತ್ರದ ನಿರ್ದೇಶಕ ಜಡೇಶ್ ‘ಕಾಟೇರ’ ಸಿನಿಮಾದ ಬರಹಗಾರರಾಗಿದ್ದರು. ಅಲ್ಲಿ ಕಾಗೋಡು ಹೋರಾಟದ ಕಥೆಯಿತ್ತು. ಇಲ್ಲಿಯೂ ಅದೇ ಕಥೆ ಮುಂದುವರಿಯುತ್ತದೆಯಾ?‘
ಉತ್ತರ: ಇದು ಜಡೇಶ್ ಅವರು ಆಯ್ಕೆ ಮಾಡಿದ ಕಥೆ. ಹಾಗಂತ ‘ಕಾಟೇರ’ದ ಮುಂದಿನ ಕಥೆಯಲ್ಲ. ಇದು ಒಂದು ವರ್ಗಕ್ಕೆ, ಜಾತಿಗೆ ಸಂಬಂಧಿತ ವಿಷಯವಲ್ಲ. ಎಲ್ಲ ವರ್ಗದವರ ಕಥೆ. ಸಮಾಜದಲ್ಲಿ ಸಮಾನತೆ ಬೇಕು, ಎಲ್ಲರಿಗೂ ಒಳ್ಳೆದಾಗಬೇಕು ಎಂಬ ಉದ್ದೇಶವಿರುವ ಕಥಾವಸ್ತು.
ಹಾಗಿದ್ದರೆ ಇದು ಆ್ಯಕ್ಷನ್, ಮಾಸ್ ಸಿನಿಮಾವೇ?
ಉತ್ತರ: ನನ್ನ ಸಿನಿಮಾ ಅಂದಾಗ ಆ್ಯಕ್ಷನ್ ಇರಲೇಬೇಕು. ಗಟ್ಟಿಯಾದ ಕಥಾವಸ್ತುವಿನ ಜತೆಗೆ ಆ್ಯಕ್ಷನ್, ಮನರಂಜನೆ ಇರುವ ಸಿನಿಮಾ. ಪ್ರೀತಿ, ಕುಟುಂಬಗಳ ಸಂಬಂಧ, ನಗು, ಅಳು ಎಲ್ಲವೂ ಇದೆ. ಮುಖ್ಯವಾಗಿ ಕೌಟುಂಬಿಕ ಕಥಾಹಂದರದ ಚಿತ್ರ.
ಮಾಸ್, ಆ್ಯಕ್ಷನ್ ಸಿನಿಮಾಗಳ ಪರಿಭಾಷೆ ಬದಲಾಗುತ್ತಿದೆಯಾ?
ಉತ್ತರ: ಆ್ಯಕ್ಷನ್, ಮಾಸ್‌ಗೆ ಒಂದು ವರ್ಗ ಖಂಡಿತ ಇದೆ. ಆದರೆ ಬರೀ ಹೊಡೆದಾಟ, ಮೆರೆದಾಟ ಇದ್ದರೆ ಜನ ಒಪ್ಪುವುದಿಲ್ಲ. ಕಂಟೆಂಟ್ ಆಧಾರಿತ ಸಿನಿಮಾ ಮಾಡುವುದು ಸರಿ ಮತ್ತು ಆ ರೀತಿ ಸಿನಿಮಾವನ್ನು ಜನ ಎಂದಿಗೂ ಕೈಬಿಡುವುದಿಲ್ಲ. ಕಥೆಯಿಲ್ಲದೆ ಸುಮ್ಮನೆ ದುಡ್ಡು ಸುರಿದರೆ, ಆ್ಯಕ್ಷನ್ ಇಟ್ಟರೆ, ನೋಡಿದವರು ಚೆನ್ನಾಗಿಲ್ಲ ಎಂದು ಹೇಳಿ ಹೋಗುತ್ತಾರೆ. ಅವರಿಗೆ ಆ ಹಕ್ಕಿದೆ. ಅದನ್ನೂ ನಾವು ಗೌರವಿಸಬೇಕು.
ನಿಮ್ಮ ಹಿಂದಿನ ಎರಡೂ ಸಿನಿಮಾಗಳು ಯಶಸ್ವಿಯಾಗಿವೆ. ಅದಕ್ಕೆ ನೀವೇ ನಿರ್ದೇಶಕರೂ ಕೂಡ. ಈಗ ಬೇರೆ ನಿರ್ದೇಶಕನ ಜತೆ ಮತ್ತೆ ಕೈಜೋಡಿಸಿದ್ದು ಯಾಕೆ?
ಉತ್ತರ: ತುಂಬ ಒಳ್ಳೆಯ ವಿಚಾರ ಇರುವ ಸಿನಿಮಾ. ಎಲ್ಲರೂ ನೋಡಬೇಕಾದ ಸಿನಿಮಾ. ಎಲ್ಲ ರೈತರ ಕುಟುಂಬದವರು ನೋಡಲಿ. ಆವತ್ತು ಏನಿತ್ತು ಎಂದು ಮಕ್ಕಳಿಗೂ ತೋರಿಸಲಿ. ನಾವು ಈ ರೀತಿ ಕಥೆ ಮಾಡದಿದ್ದರೆ ಮುಂದೆ ಯಾರೂ ಮಾಡುವುದಿಲ್ಲ. ಈಗಿನ ಕಾಲದ ಜೆನ್ ಜಿ ಮಕ್ಕಳು ಇದನ್ನೆಲ್ಲ ನೋಡಲು ಆಗುವುದಿಲ್ಲ. ಮುಂದೆ ಬೇರೆ ಏನೋ ಬಂದು ಆವರಿಸಿಕೊಳ್ಳಬಹುದು. ಎಲ್ಲವನ್ನು ಅವರು ನೋಡಲಿ ಎಂಬ ಆಸೆ. ಅದಕ್ಕಾಗಿ ಈ ಸಿನಿಮಾ ಒಪ್ಪಿಕೊಂಡೆ. ಜತೆಗೆ ಜಡೇಶ್ ಬಹಳ ಸೆನ್ಸಿಬಲ್ ನಿರ್ದೇಶಕರು. ಇಲ್ಲಿ ಎಲ್ಲಿಯೂ ಅವರು ಹಿಂಗೆ, ಇವರು ಹಂಗೆ ಎಂದು ತೋರಿಸಿಲ್ಲ. ಆ ಹಕ್ಕೂ ನಮಗಿಲ್ಲ. ಆವತ್ತಿನ ಕಾಲಘಟ್ಟದಲ್ಲಿ ವಸ್ತುಸ್ಥಿತಿ ಹೀಗಿತ್ತು ಎಂದಷ್ಟೆ ತೋರಿಸಿದ್ದೇವೆ.
ಈ ಸಿನಿಮಾ ಬಿಡುಗಡೆ ಸಾಕಷ್ಟು ಸಲ ಮುಂದಕ್ಕೆ ಹೋಗಿದ್ದು ಯಾಕೆ?
ಉತ್ತರ: ದೊಡ್ಡ ಪ್ರಮಾಣದ ಸಿನಿಮಾ. ಹೀಗಾಗಿ ಸಿದ್ಧತೆ ಮತ್ತು ಆರ್ಥಿಕವಾಗಿ ತಯಾರಿ ಹೆಚ್ಚಿತ್ತು. ಸಿನಿಮಾ ಮಾಡುತ್ತ ಮತ್ತೇನೋ ಬೇಕು ಅನ್ನಿಸುತ್ತೆ. ಅಡುಗೆ ಚೆನ್ನಾಗಿ ಆಗಲಿ ಎಂಬ ಆಸೆ. ಅದರ ತಯಾರಿಯಿಂದ ತಡವಾಯ್ತು.
ನಿಮ್ಮ ನಿರ್ದೇಶನದ ‘ಸಿಟಿ ಲೈಟ್ಸ್’ ಯಾವ ಹಂತದಲ್ಲಿದೆ? ಅದರಲ್ಲಿಯೂ ನಟಿಸಿದ್ದೀರಾ?
ಉತ್ತರ: ಚಿತ್ರೀಕರಣ ಬಹುತೇಕ ಮುಗಿದಿದೆ. ಲ್ಯಾಂಡ್‌ಲಾರ್ಡ್ ನಂತರ ಅದನ್ನು ಕೈಗೆತ್ತಿಕೊಳ್ಳುವೆ. ಈ ವರ್ಷವೇ ಆ ಸಿನಿಮಾವೂ ತೆರೆಗೆ ಬರಲಿದೆ. ನಾನು ಅದರಲ್ಲಿ ಪಾತ್ರ ಮಾಡಿದ್ದೇನೋ ಇಲ್ಲವೋ ಎಂದು ಈಗಲೇ ಹೇಳುವುದಿಲ್ಲ.
ಮುಂದಿನ ಯೋಜನೆಗಳು...
ಉತ್ತರ: ಎರಡು ಮೂರು ಕಥೆಗಳ ಬರವಣಿಗೆ ನಡೆಯುತ್ತಿದೆ. ಜವಾಬ್ದಾರಿಯಿಂದ ಕಥೆ ಆಯ್ಕೆ ಮಾಡೋಣ, ಇನ್ನಾದರೂ ಎಡವುವುದು ಬೇಡ ಎಂಬ ಆಸೆ. ನನ್ನ ನಿರ್ದೇಶನದ ಬಗ್ಗೆಯೂ ಏನೂ ನಿರ್ಧಾರವಾಗಿಲ್ಲ.
ನೀವು ನಟನ ಜತೆಗೆ ನಿರ್ದೇಶಕನೂ ಹೌದು. ನಿಮ್ಮ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಪ್ರಮಾಣ ಕಡಿಮೆ ಇರಲು ಕಾರಣ ಏನಿರಬಹುದು?
ಉತ್ತರ: ಮುಕ್ತವಾಗಿ ಹೇಳಲಾಗದ ಸಾಕಷ್ಟು ಅಂಶಗಳಿವೆ. ಸಿನಿಮಾಕ್ಕೆ ಬೇಕಾದ ವಿದ್ಯಾವಂತರ ಕೊರತೆಯಿದೆ ಅನ್ನಿಸುತ್ತದೆ. ಇದಕ್ಕೆ ಆದ ಒಂದು ವಿದ್ಯೆ ಬೇಕು. ಅದನ್ನು ಕಲಿತವರ ಬೇಕು. ಬರವಣಿಗೆ ಬೇಕು, ಓದಿಕೊಂಡುವವರು ಬೇಕು. ಈ ಎಲ್ಲ ಅಂಶಗಳು ಸೇರಿದರೆ ಒಳ್ಳೆಯ ಸಿನಿಮಾ ಆಗುತ್ತದೆ. ಕೇರಳದಲ್ಲೊಂದು ಕ್ರಾಂತಿ ಆಯಿತು. ಅದೇ ರೀತಿ ಕ್ರಾಂತಿಯನ್ನು ನಾವು ಮಾಡಬಹುದು. ಪ್ರತಿಭಾವಂತರು ಒಂದಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.