ADVERTISEMENT

ಸಿನಿಮಾ: ನಿಮ್ಮ ಭಾಷೆಯಲ್ಲೇ ಕೇಳಿ

ಶರತ್‌ ಹೆಗ್ಡೆ
Published 19 ಜುಲೈ 2022, 19:31 IST
Last Updated 19 ಜುಲೈ 2022, 19:31 IST
   

ಬಹುಭಾಷೆಯಲ್ಲಿ ಬಿಡುಗಡೆಯಾದ ಒಂದು ಸಿನಿಮಾ ನೋಡಲು ಹೋಗುತ್ತೀರಿ. ಆದರೆ, ನಿಮಗೆ ಬೇಕಾದ ಭಾಷೆಯ ಸಿನಿಮಾ ಆವೃತ್ತಿಯ ಟಿಕೆಟ್‌ ಲಭ್ಯವಿಲ್ಲ ಎಂದಿಟ್ಟುಕೊಳ್ಳಿ. ಅದೇ ಸಿನಿಮಾದಬೇರೆ ಭಾಷೆಯ ಟಿಕೆಟ್‌ ಲಭ್ಯ ಇದೆ. ಅದು ನಿಮಗೆ ಅರ್ಥವಾಗದ ಭಾಷೆಯೇ ಇರಬಹುದು. ಭಾಷೆ ಅರ್ಥ ಮಾಡಿಸಲು ನಿಮಗೆ ಸಿನಿಡಬ್ಸ್‌ಆ್ಯಪ್‌ ನೆರವಾಗುತ್ತದೆ.

ಸದ್ಯ ಕನ್ನಡದ ಮಟ್ಟಿಗೆ ನಿಧಾನಕ್ಕೆ ಪರಿಚಯವಾಗುತ್ತಿರುವ ಆ್ಯಪ್‌ ಇದು. ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ‌’ ಈ ಆ್ಯಪ್‌ನಲ್ಲಿ ತನ್ನ ಎಲ್ಲ ಆವೃತ್ತಿಗಳ ಆಡಿಯೋ ಟ್ರ್ಯಾಕ್‌ ಬಿಡುಗಡೆ ಮಾಡಿದೆ. ಸಿನಿಡಬ್‌ ಬಗ್ಗೆ ಸುದೀಪ್‌ ಅವರೇ ಇತ್ತೀಚೆಗೆ ಮಾಹಿತಿ ನೀಡಿದರು.

ಹೇಗೆ ಕೆಲಸ ಮಾಡುತ್ತದೆ?

ADVERTISEMENT

ಉದಾಹರಣೆಗೆ, ಒಂದು ಚಿತ್ರದ ಹಿಂದಿ ಅವತರಣಿಕೆಯ ಪ್ರದರ್ಶನಕ್ಕೆ ನೀವು ಹೋದಿರಿ ಎಂದಿಟ್ಟುಕೊಳ್ಳೋಣ. ಚಿತ್ರಮಂದಿರದ ಒಳಗೆ ಕುಳಿತು (ಚಿತ್ರಮಂದಿರದ ಹೊರಗೆ ಈ ಆ್ಯಪ್‌ ನಿಮಗೆ ಬೇಕಾದಂತೆ ಕೆಲಸ ಮಾಡುವುದಿಲ್ಲ) ಆ್ಯಪ್‌ ಚಾಲನೆ ಮಾಡಿ. ನಿರ್ದಿಷ್ಟ ಚಿತ್ರಮಂದಿರ, ಅದರ ಲೊಕೇಷನ್‌, ನೀವು ನೋಡುತ್ತಿರುವ ಚಿತ್ರ ಮತ್ತು ಪ್ರದರ್ಶನದ ವೇಳೆ ಮತ್ತು ನಿಮಗೆ ಕೇಳಬೇಕಾದ ಭಾಷೆಯನ್ನು (ಉದಾ: ಕನ್ನಡ) ಆ್ಯಪ್‌ನಲ್ಲಿ ನಮೂದಿಸಿ. ಇಯರ್‌ ಫೋನ್‌ ಸಿಕ್ಕಿಸಿಕೊಳ್ಳಿ. ಈಗ ತೆರೆಯ ಮೇಲೆ ಮೂಡುವ ದೃಶ್ಯಗಳ ಸಂಭಾಷಣೆ, ಹಾಡುಗಳು ನೀವು ನಮೂದಿಸಿದ ಭಾಷೆಯಲ್ಲಿ ಎಲ್ಲ ಪರಿಣಾಮಗಳ ಸಹಿತ ಕೇಳಿಸುತ್ತದೆ. ತೆರೆಯ ದೃಶ್ಯಗಳಿಗೂ ಧ್ವನಿಗೂ ನಿಖರವಾಗಿ ಹೊಂದುವಂತೆ ಈ ಆ್ಯಪ್‌ನ್ನು ರೂಪಿಸಲಾಗಿದೆ. ಇಡೀ ಚಿತ್ರವನ್ನು ನೀವು ಕನ್ನಡದಲ್ಲೇ ನೋಡಿದ ಅನುಭವ ಸಿಗುತ್ತದೆ.

ಇತಿಮಿತಿಗಳು

ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಚಿತ್ರ ಡಬ್‌ ಆಗಿರಬೇಕು. ಸಾಮಾನ್ಯವಾಗಿ ಪಾನ್‌ ಇಂಡಿಯಾ ಚಿತ್ರಗಳು ಕನಿಷ್ಠ ನಾಲ್ಕು ಭಾಷೆಗಳಲ್ಲಿ ಡಬ್‌ ಆಗಿರುತ್ತವೆ. ಹಾಗೆ ಡಬ್‌ ಆಗಿರುವ ಯಾವುದೇ ಭಾಷೆಯ ಆಡಿಯೋ ಟ್ರ್ಯಾಕ್‌ ನಿಮಗೆ ಸಿಗುತ್ತದೆ. ಪೈರೇಟೆಡ್‌ (ನಕಲು ಪ್ರತಿ) ಪ್ರತಿಗಳನ್ನು ವೀಕ್ಷಿಸುವುದಿದ್ದರೆ ಈ ಆ್ಯಪ್‌ ಕೆಲಸ ಮಾಡುವುದಿಲ್ಲ.

ಪ್ರಯೋಜನಗಳು: ನಿಗದಿತ ದಿನದಂದೇ ಸಿನಿಮಾ ನೋಡಬೇಕೆನ್ನುವವರಿಗೆ, ತಮ್ಮ ಭಾಷೆಯ ಆವೃತ್ತಿಯ ಟಿಕೆಟ್‌ ಸಿಗದಿದ್ದವರಿಗೆ ಯಾವುದೇ ಭಾಷೆಯ ಆವೃತ್ತಿ ನೋಡಿದರೂ ತಮ್ಮ ಭಾಷೆಯಲ್ಲಿ ಅದನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಸಿನಿಮಾ ಮಾರುಕಟ್ಟೆ ವಿಸ್ತರಣೆ, ಪ್ರೇಕ್ಷಕರನ್ನು ಚಿತ್ರಮಂದಿರದತ್ತಲೇ ಕರೆದೊಯ್ಯಲು ಇದು ಸಹಕಾರಿ ಎಂದು ಸುದೀಪ್‌ ಅಭಿಪ್ರಾಯಪಟ್ಟರು.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ ಉಚಿತವಾಗಿ ಲಭ್ಯವಿದೆ. ಪಾನ್‌ ಇಂಡಿಯಾ ಎಂದು ಬಿಡುಗಡೆಯಾದ ಚಿತ್ರದ ಯಾವುದೇ ಆವೃತ್ತಿಯ ಪ್ರದರ್ಶನಕ್ಕೆ ಹೋಗಿ, ನಿಮ್ಮ ಭಾಷೆಯಲ್ಲಿ ಕೇಳಿ, ನೋಡಿ, ಆನಂದಿಸಿ.

- ಹೆಚ್ಚಿನ ವಿವರಗಳಿಗೆ ನೋಡಿ:https://www. cinedubs.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.