ADVERTISEMENT

ಕಾಲಿವುಡ್‌ಗೆ ಮಂಜು ವಾರಿಯರ್ ಪಯಣ

ನವೀನ ಕುಮಾರ್ ಜಿ.
Published 11 ಅಕ್ಟೋಬರ್ 2019, 7:03 IST
Last Updated 11 ಅಕ್ಟೋಬರ್ 2019, 7:03 IST
'ಅಸುರನ್' ಚಿತ್ರದಲ್ಲಿ ಮಂಜು ವಾರಿಯರ್
'ಅಸುರನ್' ಚಿತ್ರದಲ್ಲಿ ಮಂಜು ವಾರಿಯರ್   

ಮಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ಮಂಜು ವಾರಿಯರ್‌ಗೆ ಮತ್ತೆ ಅದೃಷ್ಟ ಖುಲಾಯಿಸಿದೆ‌. ಅವರು ಅಭಿನಯಿಸಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುವ ಮೂಲಕ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿವೆ.

ಮಂಜು ನಟಿಸಿರುವ ತಮಿಳು ಚಿತ್ರ ‘ಅಸುರನ್’ ಈಚೆಗೆ ಬಿಡುಗಡೆಗೊಂಡಿದ್ದು, ಇದು ಕೂಡ ಹಿಟ್ ಚಿತ್ರಗಳ ಸಾಲಿಗೆ ಸೇರಿದೆ. ಸೂಪರ್ ಸ್ಟಾರ್‌ಗಳ ಜೊತೆಗಿನ ಅಭಿನಯವಿರಲಿ, ನಾಯಕಿ ಪ್ರಧಾನವಾದ ಚಿತ್ರಗಳಿರಲಿ ಮಂಜು ನಟನೆಗೆ ಈಗಲೂ ಪ್ರೇಕ್ಷಕರು ಫಿದಾ ಆಗುತ್ತಾರೆ ಎಂಬುದಕ್ಕೆ ಅವರ ಚಿತ್ರಗಳ ಯಶಸ್ಸೇ ಸಾಕ್ಷಿ.

ಮಲಯಾಳದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಈ ನಟಿ ‘ಅಸುರನ್’ ಮೂಲಕ ಈಗ ಕಾಲಿವುಡ್ ಅಂಗಳದಲ್ಲೂ ಛಾಪು ಮೂಡಿಸಿದ್ದಾರೆ. ಧನುಷ್ ಅಭಿನಯದ ‘ಈ’ ಚಿತ್ರದಲ್ಲಿ ಮಂಜು ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಮೊದಲ ತಮಿಳು ಚಿತ್ರವಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ನಟಿಸಿರುವ ಮಂಜು ಮೋಡಿ ಮಾಡಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ತಮಿಳು ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ.ಧನುಷ್ ಕೂಡ ಈ ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ.

ADVERTISEMENT

ತಮಿಳಿನ ಹೆಸರಾಂತ ಸಾಹಿತಿ ಪೂಮಣಿ ಅವರ ‘ವೆಕ್ಕೈ’ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.ದೀರ್ಘ ಕಾಲದ ಬಿಡುವಿನ ಬಳಿಕ ಮತ್ತೆ ಅಭಿನಯ ರಂಗಕ್ಕೆ ಕಾಲಿರಿಸಿದರೂ, ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಮಂಜು, ಯಾವುದೇ ಪಾತ್ರಕ್ಕೂ ತಾನು ಸೈ ಎಂಬುದನ್ನು ಮಂಜು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ‘ಅಸುರನ್’ ಚಿತ್ರದಲ್ಲಿ ಮಂಜು ಅದ್ಭುತ ಅಭಿನಯ ನೀಡಿದ್ದಾರೆ ಎಂಬ ಪ್ರಶಂಸೆಯ ಮಾತುಗಳು ಕೂಡ ಕೇಳಿ ಬರುತ್ತಿವೆ.

ಮೋಹನ್ ಲಾಲ್ ಅಭಿನಯದ ಬಿಗ್ ಬಜೆಟ್ ಚಿತ್ರಗಳಾದ‘ಒಡಿಯನ್’, ‘ಲೂಸಿಫರ್‌’ ಚಿತ್ರಗಳಲ್ಲೂ ಮಂಜು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಮಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿದ್ದವು ಮತ್ತು ಭರ್ಜರಿ ಕಲೆಕ್ಷನ್ ಕೂಡ ತಂದುಕೊಟ್ಟಿದ್ದವು.

ನಾಯಕಿ ಪ್ರಧಾನ ಚಿತ್ರಗಳಾದ ‘ಉದಾಹರಣಂ ಸುಜಾತ’, ‘ಕೇರ್ ಆಫ್ ಸಾಯಿರಾ ಬಾನು’ ಮಲಯಾಳ ಚಿತ್ರಗಳು ಮಂಜು ಅಭಿನಯ ಕೌಶಲಕ್ಕೆ ಕನ್ನಡಿ ಹಿಡಿಯುವ ಸಿನಿಮಾಗಳು. 2017ರಲ್ಲಿ ಈ ಎರಡು ಚಿತ್ರಗಳು ಬಿಡುಗಡೆಗೊಂಡಿದ್ದವು. ನಂತರ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿವೆ. ಯಾವ ಸ್ಟಾರ್ ನಟರ ಉಪಸ್ಥಿತಿ ಇಲ್ಲದಿದ್ದರೂ ಈ ಚಿತ್ರಗಳನ್ನು ಯಶಸ್ಸಿನ ದಡ ಮುಟ್ಟಿಸಿದ ಕೀರ್ತಿ ಮಂಜು ವಾರಿಯರ್‌ಗೆ ಸಲ್ಲುತ್ತದೆ.

1995 ರಲ್ಲಿ ಮೋಹನ್ ನಿರ್ದೇಶನದಲ್ಲಿ ತೆರೆಕಂಡಿದ್ದ ‘ಸಾಕ್ಷ್ಯಂ’ ಚಿತ್ರದ ಮೂಲಕ ಮಂಜು ಬೆಳ್ಳಿತೆರೆಗೆ ಕಾಲಿರಿಸಿದ್ದರು. ಸುರೇಶ್ ಗೋಪಿ, ಮುರಳಿ, ಗೌತಮಿ ಮೊದಲಾದವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರದ ನಟನೆಯ ಬಳಿಕ ಮಂಜು ಹಿಂತಿರುಗಿ ನೋಡಿದವರಲ್ಲ. ‘ತೂವಲ್ ಕೊಟ್ಟಾರಂ’, ‘ಸಲ್ಲಾಪಂ’, ‘ಈ ಪುಳಯುಂ ಕಡನ್ನು’, ‘ಕೃಷ್ಣ ಗುಡಿಯಿಲ್ ಒರು ಪ್ರಣಯ ಕಾಲತ್ತ್’, ‘ಪ್ರಣಯ ವರ್ಣಂಗಳ್’, ‘ಕಣ್ಮದಂ’, ‘ಸಮ್ಮರ್ ಇನ್ ಬೆಥ್ಲೆಹೇಮ್’, ‘ಪತ್ರಂ’, ‘ಕಣ್ಣೆಯುತಿ ಪೊಟ್ಟುಂ ತೊಟ್ಟು’ ಇಂತಹ ಹಿಟ್ ಚಿತ್ರಗಳಲ್ಲಿ ನಾಯಕಿ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೂ ಭಾಜನರಾಗಿದ್ದರು.

1998ರಲ್ಲಿ ನಟ ದಿಲೀಪ್ ಅವರೊಂದಿಗೆ ಮದುವೆಯಾದ ಬಳಿಕ ಮಂಜು ಅಭಿನಯ ರಂಗದಿಂದ ದೂರವುಳಿದಿದ್ದರು. ತಮ್ಮ ಅಭಿನಯ ಬದುಕಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅವರು ನಟನೆಯನ್ನು ನಿಲ್ಲಿಸಿದ್ದರು. 2015ರಲ್ಲಿ ಮಂಜು ಅವರು ದಿಲೀಪ್ ರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ.

2014ರಲ್ಲಿ ಬಿಡುಗಡೆಗೊಂಡಿದ್ದ ‘ಹೌ ಓಲ್ಡ್ ಆರ್ ಯು’ ಚಿತ್ರದಲ್ಲಿ‌ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಅಭಿನಯರಂಗಕ್ಕೆ ಪ್ರವೇಶಿಸಿದ್ದರು.ಇದೀಗ ಮಾಲಿವುಡ್‌ನಲ್ಲಿ ಮತ್ತೊಮ್ಮೆ ಬಹು ಬೇಡಿಕೆಯ ನಟಿಯಾಗಿ ಮಂಜು ಬೆಳೆದಿದ್ದಾರೆ. ಜೊತೆಗೆ ತಮಿಳು ಚಿತ್ರರಂಗಕ್ಕೂ ತಮ್ಮ ಅಭಿನಯ ಪಯಣ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.