ADVERTISEMENT

ಕಾಮಿಡಿಗೆ ಸಜ್ಜಾದ ಇನ್‌ಸ್ಪೆಕ್ಟರ್‌ ವಿಕ್ರಂ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 19:45 IST
Last Updated 15 ಮಾರ್ಚ್ 2020, 19:45 IST
‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್
‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್   

ಪೊಲೀಸ್‌ ಪಾತ್ರ ಎಂದಾಕ್ಷಣ ಕನ್ನಡ ಚಿತ್ರರಂಗದಲ್ಲಿ ಥಟ್ಟನೆ ನೆನಪಾಗುವ ಹೆಸರು ಸಾಯಿಕುಮಾರ್; ಮತ್ತೊಬ್ಬರು ದೇವರಾಜ್‌. ‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರದ ಮೂಲಕ ಈ ಪೊಲೀಸ್‌ ಪಾತ್ರದ ಸಂಪ್ರದಾಯವನ್ನು ಅವರ ಪುತ್ರ ಪ್ರಜ್ವಲ್‌ ದೇವರಾಜ್‌ ಅವರೂ ಮುಂದುವರಿಸುವ ಹಾದಿಯಲ್ಲಿದ್ದಾರೆ.

1989ರಲ್ಲಿ ನಟ ಶಿವರಾಜ್‌ಕುಮಾರ್‌ ನಾಯಕರಾಗಿದ್ದ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ತೆರೆ ಕಂಡಿತ್ತು. ಅದೇ ವಿಕ್ರಂ ಈಗ ನಿರ್ದೇಶಕ ಶ್ರೀನರಸಿಂಹ ಮತ್ತು ಪ್ರಜ್ವಲ್‌ ದೇವರಾಜ್‌ ಅವರ ಕಾಂಬಿನೇಷನ್‌ನಡಿ ಕಾಮಿಡಿಯ ಹೊಸ ಬಣ್ಣ ಮೆತ್ತಿಕೊಂಡು ನೋಡುಗರನ್ನು ರಂಜಿಸಲು ಅಣಿಯಾಗಿದ್ದಾನೆ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆಡಿಯೊ ಬಿಡುಗಡೆ ಮಾಡಿದ್ದ ಚಿತ್ರತಂಡ, ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿಕೊಂಡಿದೆ. ಮುಂದಿನ ತಿಂಗಳು ಜನರ ಮುಂದೆ ಬರುವ ಇರಾದೆ ಚಿತ್ರತಂಡದ್ದು.

ಶ್ರೀನರಸಿಂಹ ನಿರ್ದೇಶನದ ಮೊದಲ ಚಿತ್ರ ಇದು. ಚೊಚ್ಚಿಲ ಚಿತ್ರದಲ್ಲಿಯೇ ಅವರು ನಟ ದರ್ಶನ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಿದ ಖುಷಿಯಲ್ಲಿದ್ದಾರೆ. ಆ ಸನ್ನಿವೇಶವನ್ನು ಅವರು ‘ಪ್ರಜಾಪ್ಲಸ್‌’ಗೆ ವಿವರಿಸಿದ್ದು ಹೀಗೆ: ‘ಸಿನಿಮಾದಲ್ಲಿ ಅವರದ್ದು ವಿಶೇಷ ಪಾತ್ರ. ಈ ಪಾತ್ರದಲ್ಲಿ ನಟಿಸುವಂತೆ ಅವರಿಗೆ ಕೋರಿದಾಗ ತಕ್ಷಣವೇ ಒಪ್ಪಿಕೊಂಡರು. ಆಗ ನಮಗಾದ ಖುಷಿ ಅಷ್ಟಿಷ್ಟಲ್ಲ. ಮೊದಲಿಗೆ ದರ್ಶನ್ ಅವರ ಇಂಟ್ರಡಕ್ಷನ್‌ ಸೀನ್‌ ಅನ್ನು ಚಿತ್ರೀಕರಿಸಬೇಕಿತ್ತು. ಅಂದು ನಾನು ಅಕ್ಷರಶಃ ಗಾಬರಿಯಾಗಿದ್ದೆ. ನೇರವಾಗಿ ಸೆಟ್‌ಗೆ ಬಂದ ಅವರು ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು. ಅವರು ನಿರ್ದೇಶಕರ ನಟ. ನನ್ನನ್ನು ಹೊಸಬನೆಂದು ಕಾಣಲಿಲ್ಲ. ಶೂಟಿಂಗ್‌ ಮುಗಿದಾಗ ಇಡೀ ಚಿತ್ರತಂಡವೇ ಸಂತಸಪಟ್ಟಿತು’ ಎನ್ನುವ ಅವರು, ದರ್ಶನ್‌ ಅವರ ದೃಶ್ಯವನ್ನು ಸಪ್ರೈಜ್‌ ಆಗಿಯೇ ಇಟ್ಟಿದ್ದಾರಂತೆ.

ADVERTISEMENT

‘ಇದು ಪಕ್ಕಾ ಕಾಮಿಡಿ ಸಿನಿಮಾ. ಎಂಜಾಯ್‌ ಮಾಡಿಕೊಂಡೇ ಸಿನಿಮಾ ಶೂಟಿಂಗ್ ನಡೆಸಿದ್ದೇವೆ’ ಎನ್ನುತ್ತಾರೆ ಅವರು.

ಭಾವನಾ ಮೆನನ್‌ ಈ ಚಿತ್ರದ ನಾಯಕಿ.ಜೆ. ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ನವೀನ್‌ಕುಮಾರ್‌ ಐ. ಅವರದು. ಹರೀಶ್‌ ಕೊಮ್ಮೆ ಅವರ ಸಂಕಲನವಿದೆ. ಎ.ಆರ್‌. ವಿಖ್ಯಾತ್‌ ಇದಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.