ADVERTISEMENT

ರಜನಿಕಾಂತ್‌ಗೆ ಫಾಲ್ಕೆ ಪ್ರಶಸ್ತಿ ಘೋಷಿಸಿದ 'ಸಮಯ'ದ ಬಗ್ಗೆ ಕಾಂಗ್ರೆಸ್‌ನ ವಾದವೇನು?

ಏಜೆನ್ಸೀಸ್
Published 1 ಏಪ್ರಿಲ್ 2021, 15:35 IST
Last Updated 1 ಏಪ್ರಿಲ್ 2021, 15:35 IST
ರಜನಿಕಾಂತ್‌
ರಜನಿಕಾಂತ್‌   

ನವದೆಹಲಿ: ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಸೂಪರ್‌ ಸ್ಟಾರ್‌ ರಜನಿಕಾಂತ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಆದರೆ, ಅವರಿಗೆ ಕೇಂದ್ರ ಸರ್ಕಾರವು ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿರುವ 'ಸಮಯ'ದ ಬಗ್ಗೆ ಕಾಂಗ್ರೆಸ್‌ ಪ್ರಶ್ನೆ ಎತ್ತಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಜನಿಕಾಂತ್‌ ಅವರಿಗೆ ಪ್ರಶಸ್ತಿ ಘೋಷಿಸಿರುವುದು ಕಾಂಗ್ರೆಸ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

'ರಾಜಕೀಯ ವಿವಾದಗಳಲ್ಲಿ ಸೆಲೆಬ್ರಿಟಿಗಳನ್ನು ಅನಗತ್ಯವಾಗಿ ಎಳೆದು ತರುವ ಯಾವುದೇ ಕೆಲಸವನ್ನು ಸರ್ಕಾರ ಮಾಡಬಾರದು. ಎಲ್ಲದರಿಂದ ರಾಜಕೀಯ ಲಾಭ ಪಡೆಯಲು ಸರ್ಕಾರ ಪ್ರಯತ್ನಿಸಬಾರದು' ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

'ರಜನಿಕಾಂತ್‌ ಅವರಿಗೆ ಫಾಲ್ಕೆ ಪ್ರಶಸ್ತಿಯನ್ನು ಬಹಳ ಹಿಂದೆಯೇ ನೀಡಬೇಕಾಗಿತ್ತು, ಈ ವರ್ಷ ಅದನ್ನು ಏಕೆ ನೀಡಲಾಗುತ್ತಿದೆ' ಎಂದು ಅವರು ಪ್ರಶ್ನಿಸಿದ್ದಾರೆ.

'ರಜನಿಕಾಂತ್ ಅವರು ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಬಿಜೆಪಿ ಸರ್ಕಾರ ಈ ಬಗ್ಗೆ ಎಚ್ಚರದಿಂದಿರಬೇಕು. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲಾಭ ಗಳಿಸುವ ಉದ್ದೇಶದಿಂದ ಸರ್ಕಾರ ಇದನ್ನು ಮಾಡಿದ್ದರೆ, ಇದು ಸೂಕ್ತವಲ್ಲ. ಜನರು ಇದೆಲ್ಲವನ್ನೂ ಗಮನಿಸುತ್ತಿದ್ದಾರೆ' ಎಂದು ಶುಕ್ಲಾ ಹರಿಹಾಯ್ದಿದ್ದಾರೆ.

ನಟ ರಜನಿಕಾಂತ್‌ ಅವರಿಗೆ 51ನೇ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಗುರುವಾರ ಪ್ರಕಟಿಸಿದ್ದರು.

ತಮಿಳು ಚಿತ್ರರಂಗದಲ್ಲಿ ಖ್ಯಾತ ನಟ ದಿವಂಗತ ಶಿವಾಜಿ ಗಣೇಶನ್ ಮತ್ತು ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ಕೆ. ಬಾಲಚಂದರ್ ಅವರು ಫಾಲ್ಕೆ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬಾಲಚಂದರ್‌ ಅವರ ಮಾರ್ಗದರ್ಶನದಲ್ಲೇ ಬೆಳೆದು ಬಂದ ನಟ ರಜನಿಕಾಂತ್ ತಮಿಳು ಸಿನಿಮಾ ರಂಗದ ಮೂರನೇ ವ್ಯಕ್ತಿಯಾಗಿ ಫಾಲ್ಕೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.