ADVERTISEMENT

ಬದಲಾಗು ನೀನು ಬದಲಾಯಿಸು ನೀನು: ಜೂನ್‌ 5ಕ್ಕೆ ಕೊರೊನಾ ಜಾಗೃತಿ ಹಾಡು ರಿಲೀಸ್‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 12:23 IST
Last Updated 3 ಜೂನ್ 2020, 12:23 IST
ಬದಲಾಗು ನೀನು...
ಬದಲಾಗು ನೀನು...   

ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಜನರಲ್ಲಿ ವಿಶ್ವಾಸ ತುಂಬುವುದಕ್ಕಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ‘ಬದಲಾಗು ನೀ ಬದಲಾಯಿಸು ನೀನು‘ ಎಂಬ ಹಾಡನ್ನು ಪ್ರಸ್ತುಪಡಿಸುತ್ತಿದೆ.

ಕನ್ನಡ ಚಿತ್ರರಂಗ ಮತ್ತು ಕ್ರಿಕೆಟ್‌ ರಂಗದ ಇಪ್ಪತ್ತೆರಡು ತಾರೆಯರು ಈ ಹಾಡಿನ ಆಲ್ಬಂನಲ್ಲಿ ಪಾಲ್ಗೊಂಡಿದ್ದಾರೆ. ಜೂನ್ 5ರ ವಿಶ್ವ ಪರಿಸರ ದಿನದಂದು ಈ ಹಾಡಿನ ಆಲ್ಬಂ ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.

ನಿರ್ದೇಶಕ ಪವನ್‌ ಒಡೆಯರ್ ಅವರದ್ದು ಹಾಡಿನ ಪರಿಕಲ್ಪನೆ ಮತ್ತು ನಿರ್ದೇಶನ. ಪ್ರದ್ಯುಮ್ನ ನರಹಳ್ಳಿ ಅವರು ಸಾಹಿತ್ಯ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಮ್ರಾನ್ ಸರ್ದಾರಿಯ ಕೊರಿಯೊಗ್ರಫಿ ಮಾಡಿದ್ದಾರೆ.

ADVERTISEMENT

ತಾರೆಯರಾದ ರವಿಚಂದ್ರನ್, ಸುಮಲತಾ ಅಂಬರೀಶ್, ರಮೇಶ್ ಅರವಿಂದ, ಶಿವರಾಜ್‌ಕುಮಾರ್, ಉಪೇಂದ್ರ, ಗಣೇಶ್,ದರ್ಶನ್, ರಕ್ಷಿತ್ ಶೆಟ್ಟಿ, ನಟಿಯರಾದ ಸುಮಲತಾ ಅಂಬರೀಷ್, ಶಾನ್ವಿ ಶ್ರೀವತ್ಸ, ಆಶಿಕಾ ರಂಗನಾಥ್, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಸಿನಿಮಾ ಹಾಗೂ ಕ್ರೀಡಾರಂಗದ ಹಲವು ತಾರೆಯರು ಇದ್ದಾರೆ.

‘ಕೊರೊನಾ ವಿರುದ್ಧ ಹೋರಾಟಕ್ಕೆ ಜನರನ್ನು ಅಣಿಯಾಗಲು ಪ್ರೇರೇಪಿಸುವಂತಹ ಹಾಡು ಇದು. ಕೊರೊನಾ ಜತೆಗೆ ಜತೆಗೆ ಜೀವಿಸುವುದನ್ನೂ ಈ ಹಾಡಿನಲ್ಲಿ ವಿವರಿಸಲಾಗಿದೆ. ಚಿತ್ರರಂಗ ಹಾಗೂ ಕ್ರಿಕೆಟ್ ಕ್ಷೇತ್ರದ ಇಪ್ಪತ್ತೆರಡು ಖ್ಯಾತ ತಾರೆಯರು ಈ ಹಾಡಿನ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ‘ ಎಂದು ವಿವರಿಸಿದರು ನಿರ್ದೇಶಕ ಪವನ್ ಒಡೆಯರ್‌.

‘ಹದಿನೈದು ದಿನಗಳ ಕಾಲ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಬಹುತೇಕ ಎಲ್ಲ ನಟ – ನಟಿಯರ ಮನೆಗೆ ತೆರಳಿ ಶೂಟಿಂಗ್ ಮಾಡಿದ್ದೇವೆ. ಇಡೀ ಚಿತ್ರೀಕರಣ ಬಹಳ ಚೆನ್ನಾಗಿತ್ತು. ಎಲ್ಲರೂ ತುಂಬಾ ಪ್ರೀತಿಯಿಂದ ಚಿತ್ರೀಕರಣಕ್ಕೆ ಸಹಕಾರ ನೀಡಿದರು. ಕೆಲವು ತಾರೆಯರು ಮಾತ್ರ, ಹಾಡಿಗೆ ಬೇಕಾದ ಹಾವಭಾವ, ನಟನೆ ಬಗ್ಗೆ ಮಾಹಿತಿ ಪಡೆದು ಶೂಟ್ ಮಾಡಿಕಳಿಸಿದ್ದಾರೆ. ಎಲ್ಲರೂ ತುಂಬಾ ಪ್ರೀತಿಯಿಂದ ಸಹಕರಿಸಿದ್ದಾರೆ‘ ಎಂದರು ಪವನ್.

ಹಾಡಿನ ಆಲ್ಪಂ ಕೆಲಸ ಈಗಾಗಲೇ ಮುಗಿದಿದ್ದು, ಮೇ 25ಕ್ಕೆ ರಿಲೀಸ್ ದಿನಾಂಕವನ್ನೂ ನಿಗದಿಪಡಿಸಿ, ಪೋಸ್ಟರ್‌ಗಳು ಸಿದ್ಧವಾಗಿದ್ದವು. ರಿಲೀಸ್ ಆಗದಿರುವುದಕ್ಕೆ ಕಾರಣ ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.