ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆಗಳ ವಿರುದ್ಧ ತಮ್ಮ ಅಸಮಾಧಾನ, ಆಕ್ರೋಶ ಹೊರಹಾಕುತ್ತಿರುವ ಸಂದರ್ಭದಲ್ಲೇ, ‘ಆಸ್ಪತ್ರೆಗಳಲ್ಲಿ ಪಾರದರ್ಶಕ ವ್ಯವಸ್ಥೆ ಇರಲಿ’ ಎಂದು ಆಗ್ರಹಿಸಿ ನಟ ಜಗ್ಗೇಶ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ‘ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ, ಸರ್ ಕೋವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾದ ಆದ 2,3 ದಿನಕ್ಕೆ ಸಾವು ಸಂಭವಿಸುತ್ತಿದೆ. ಇದು ನನ್ನ ಅನುಭವಕ್ಕೂ ಬಂದಿದೆ. ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ನೀಡುತ್ತಾರೆ ಎಂದು ಕುಟುಂಬದವರಿಗೆ ತಿಳಿಯದು. ಸಾವಾಗಿದೆ ಎಂದು ಮಾತ್ರ ತಿಳಿಸುತ್ತಾರೆ. ಮುಖಸಹಿತ ನೋಡಲಾಗದು. ಬೆರಳೆಣಿಕೆಯ ಕೆಲ ಸಿಬ್ಬಂದಿ ಹೊರತುಪಡಿಸಿ ತಜ್ಞರು ವೈಯುಕ್ತಿಕವಾಗಿ ವಿಷಯ ತಿಳಿಯಲು ಸಿಗುವುದಿಲ್ಲ. ಪ್ರತಿ ರೋಗಿಯ ಮನೆಯವರಿಗೆ ರೋಗಿಯನ್ನು ದೂರದಿಂದ ನೋಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುವುದಿಲ್ಲ. ಪ್ರತಿ ಕೋವಿಡ್ ರೋಗಿಗೆ ಇಂತಹದೇ ಚಿಕಿತ್ಸೆ ಮತ್ತು ಸ್ಕ್ಯಾನ್‌ಗಳು ಇರುತ್ತವೆ. ಇದು ಯಾವುದು ಇಲ್ಲದೆ ದಾಖಲಿಸಿಕೊಂಡು, ನಂತರ ಯಾವ ವಿಷಯವನ್ನೂ ಹೊರಗೆ ತಿಳಿಸದೆ ರೋಗಿಯ ಸಾವಿನ ಜೊತೆ ಮನೆಯವರು ಸಾಯುವಂತೆ ಮಾಡುತ್ತಾರೆ. ಒಳ ಅರಿವಿರದವರು ಸರ್ಕಾರದ ಕಾರ್ಯ, ಶ್ರಮ, ದೂಷಣೆ ಮಾಡಿ ಸತ್ಯ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ! ದಯಮಾಡಿ ರೋಗಿಯ ಚಿಕಿತ್ಸೆಯ ಬಗ್ಗೆ ಪಾರದರ್ಶಕ ವ್ಯವಸ್ಥೆ ಆಗಲಿ’ ಎಂದು ಉಲ್ಲೇಖಿಸಿ ಮುಖ್ಯಮಂತ್ರಿಯವರ ಟ್ವಿಟರ್ ಟ್ಯಾಗ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.