ADVERTISEMENT

ಕೊರೊನಾ ಹೋರಾಟಕ್ಕೆ ಸೂಪರ್ ಸ್ಟಾರ್ ರಜನಿ ನೆರವು; ₹50 ಲಕ್ಷ ದೇಣಿಗೆ

ಏಜೆನ್ಸೀಸ್
Published 17 ಮೇ 2021, 10:28 IST
Last Updated 17 ಮೇ 2021, 10:28 IST
ನಟ ರಜನಿಕಾಂತ್
ನಟ ರಜನಿಕಾಂತ್   

ಚೆನ್ನೈ: ನಟ ರಜನಿಕಾಂತ್ ಸೋಮವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ, ಕೊರೊನಾವೈರಸ್ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆಯನ್ನು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.ಇತ್ತೀಚೆಗಷ್ಟೇ ರಜನಿ ಕೊರೊನಾ ಲಸಿಕೆಯ 2ನೇ ಡೋಸ್‌ ಹಾಕಿಸಿಕೊಂಡಿದ್ದರು.

ಕೊರೊನಾ ನಿರ್ಮೂಲನೆಗಾಗಿ ನಾನು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆಯನ್ನು ನೀಡಿದ್ದೇನೆ. ಕೋವಿಡ್ ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರವು ನಿರ್ದೇಶಿಸುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು ಎಂದು ರಜನಿಕಾಂತ್ ಕರೆ ನೀಡಿದ್ದಾರೆ.

ಈ ಮೊದಲು ಕೊರೊನಾವೈರಸ್ ವಿರುದ್ಧ ಹೋರಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡುವಂತೆ ಸ್ಟಾಲಿನ್ ಅವರು ಜನರಿಗೆ ಮನವಿ ಮಾಡಿದ್ದರು.

ಭಾನುವಾರದಂದು ಕೋವಿಡ್ ವಿರುದ್ಧ ಹೋರಾಡಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ 13 ಸದಸ್ಯರ ಶಾಸಕಾಂಗ ಸಲಹಾ ಸಮಿತಿಯನ್ನು ರಚಿಸಲಾಗಿತ್ತು.

ತಮಿಳುನಾಡಿನಲ್ಲಿ ಭಾನುವಾರದಂದು ಹೊಸದಾಗಿ 12,450 ಸೋಂಕು ಪ್ರಕರಣಗಳು ವರದಿಯಾಗಿದ್ದು, 20,905 ಮಂದಿ ಚೇತರಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 303 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿವೆ.

ತಮಿಳುನಾಡಿನಲ್ಲಿ ಈಗ 2,07,789 ಸಕ್ರಿಯ ಪ್ರಕರಣಗಳಿದ್ದು, 17,359 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.