ADVERTISEMENT

ಸಿನಿ ಸುದ್ದಿ: ವಾರಾಣಸಿಯಲ್ಲಿ ‘ದೈಜಿ’ ಚಿತ್ರ ತಂಡ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 0:35 IST
Last Updated 5 ಡಿಸೆಂಬರ್ 2025, 0:35 IST
ಚಿತ್ರತಂಡ
ಚಿತ್ರತಂಡ   

ರಮೇಶ್‌ ಅರವಿಂದ್‌ ಹಾಗೂ ರಾಧಿಕಾ ನಾರಾಯಣ್‌ ಮುಖ್ಯಭೂಮಿಕೆಯಲ್ಲಿರುವ ‘ದೈಜಿ’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಇತ್ತೀಚೆಗಷ್ಟೇ ಚಿತ್ರತಂಡ ವಾರಾಣಸಿಯಲ್ಲಿ ವಿಶೇಷ ಸನ್ನಿವೇಶಗಳ ಚಿತ್ರೀಕರಣ ನಡೆಸಿದ್ದು, ಅತಿಥಿ ಪಾತ್ರದಲ್ಲಿ ನಿರ್ದೇಶಕ ಗುರು ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಆಕಾಶ್ ಶ್ರೀವತ್ಸ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

‘ಈಗಾಗಲೇ ಟೀಸರ್‌ನಿಂದ ಕುತೂಹಲ ಕೆರಳಿಸಿರುವ ನಮ್ಮ ಸಿನಿಮಾ ಸೂಪರ್ ನ್ಯಾಚುರಲ್ ಥ್ರಿಲ್ಲರ್‌ ಕಥೆಯನ್ನು ಹೊಂದಿದೆ. ಚಿತ್ರದಲ್ಲಿನ ಮಹತ್ತರವಾದ ಸನ್ನಿವೇಶಗಳನ್ನು ಭಾರತದ ಅತ್ಯಂತ ಪ್ರಾಚೀನ, ಆಧ್ಯಾತ್ಮಿಕ ನಗರವಾದ ಕಾಶಿಯಲ್ಲಿ ಚಿತ್ರೀಕರಿಸಿದ್ದೇವೆ. ಅಲ್ಲಿನ ಅಲೌಕಿಕತೆ, ಆಧ್ಯಾತ್ಮಿಕತೆ, ಘಾಟ್‌ಗಳು ಸಿನಿಮಾದ ಮುಖ್ಯ ವಿಷಯಗಳಾದ ಅಗೋಚರ, ಅತೀಂದ್ರಿಯಶಕ್ತಿ, ನಂಬಿಕೆಗಳನ್ನು ಪ್ರತಿನಿಧಿಸುತ್ತವೆ. ಮೂರು ದಿನ ರಾತ್ರಿ ಗಂಗಾ ನದಿ ತಟದ ಜನಜಂಗುಳಿಯಲ್ಲಿಯೇ ಚಿತ್ರೀಕರಣ ನಡೆಸಿದ್ದೇವೆ. ಕೇವಲ ಎರಡು ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಪ್ರಾರಂಭವಾಗಿವೆ’ ಎಂದು ಚಿತ್ರತಂಡ ತಿಳಿಸಿದೆ.

ರವಿ ಕಶ್ಯಪ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದಿಗಂತ್, ಅವಿನಾಶ್, ನಿಧಿ ಹೆಗಡೆ, ಶ್ರೀಧರ್ ಕೊಣನೂರು, ಬಿ.ಎಂ.ಗಿರಿರಾಜ್‌ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಹಾಲಿವುಡ್‌ ನಟರಾದ ಸ್ಯಾಂಡಿ ಹಿಗಿನ್ಸ್, ಸಾಲ್ ಯೂಸುಫ್, ಎಲ್ಲೆನ್ ಶಂಬರ್ಲಿಯನ್, ಫ್ಲೋರೆನ್ಶಿಯಾ ಮಾರ್ಟಿನೆಜ಼, ಮಿಸ್ ಐರ್ಲೆಂಡ್ ಅಲೆಕ್ಸಾಂಡ್ರಾ ಟೇಲರ್ ಕೂಡ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಶ್ರೀಶ ಎಂ. ಕುದುವಳ್ಳಿ ಛಾಯಾಚಿತ್ರಗ್ರಹಣವಿದ್ದು, ಜುಡಾ ಸ್ಯಾಂಡಿ ಹಿನ್ನೆಲೆ ಸಂಗೀತವಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.