ADVERTISEMENT

ಸಿನಿ ಸುದ್ದಿ | ‘ದೈಜಿ’ಯಲ್ಲಿ ರಮೇಶ್‌ ಭಿನ್ನ ಅವತಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 1:11 IST
Last Updated 19 ಸೆಪ್ಟೆಂಬರ್ 2025, 1:11 IST
ರಮೇಶ್‌ ಅರವಿಂದ್‌
ರಮೇಶ್‌ ಅರವಿಂದ್‌   

ರಮೇಶ್‌ ಅರವಿಂದ್‌ ನಟನೆಯ 106ನೇ ಚಿತ್ರ, ಆಕಾಶ್‌ ಶ್ರೀವತ್ಸ ನಿರ್ದೇಶನದ ‘ದೈಜಿ’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಗೊಂಡಿತು. 

‘ದೈಜಿ’ ಥ್ರಿಲ್ಲರ್ ಹಾರರ್ ಚಿತ್ರವಾಗಿದೆ. ಈ ಹಿಂದೆ ರಮೇಶ್‌ ಅವರು ನಟಿಸಿದ್ದ ‘ಶಿವಾಜಿ ಸುರತ್ಕಲ್‌’ ಸಿನಿಮಾ ಸರಣಿಯನ್ನು ಆಕಾಶ್‌ ನಿರ್ದೇಶಿಸಿದ್ದರು. ಇದು ರಮೇಶ್‌ ಅವರ ಸಿನಿಪಯಣಕ್ಕೆ ಹೊಸ ತಿರುವು ನೀಡಿತ್ತು. ಇವರ ಕಾಂಬಿನೇಷನ್‌ನ ಮೂರನೇ ಸಿನಿಮಾವಾಗಿ ‘ದೈಜಿ’ ಪ್ರೇಕ್ಷಕರ ಎದುರಿಗೆ ಬರಲಿದೆ. 

‘ಹತ್ತು ವರ್ಷಗಳ ಹಿಂದೆ ನಾನು‌, ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಈ ಚಿತ್ರದ ಕಥೆ ಬಗ್ಗೆ ಹೇಳಿದ್ದೆ. ಇದು ವಿದೇಶದಲ್ಲಿ ನಾನು ಕಂಡಿರುವ ನೈಜ ಘಟನೆ ಆಧರಿತ ಚಿತ್ರ. ಇದನ್ನು ನಾನು ಅಂದುಕೊಂಡಂತೆ ತೆರೆಗೆ ತಂದಿರುವ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ’ ಎಂದರು ಚಿತ್ರದ ನಿರ್ಮಾಪಕ ರವಿ ಕಶ್ಯಪ್. 

ADVERTISEMENT

ಆಕಾಶ್‌ ಶ್ರೀವತ್ಸ ಮಾತನಾಡಿ, ‘ಈ ಕಥೆಗೆ ರಮೇಶ್ ಅರವಿಂದ್ ಅವರೇ ಸೂಕ್ತ ಎನಿಸಿ ಅವರಿಗೆ ಕಥೆ ಹೇಳಿದೆ. ಅವರು ನಟಿಸಲು ಒಪ್ಪಿಕೊಂಡರು. ‘ಸೂರ್ಯ’ ಎಂಬ ಪಾತ್ರದಲ್ಲಿ ರಮೇಶ್ ಅವರು ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ‘ಭೂಮಿ’ ಪಾತ್ರದಲ್ಲಿ ಹಾಗೂ ರಮೇಶ್ ಅವರ ತಮ್ಮನಾಗಿ ನಟ ದಿಗಂತ್ ‘ಗಗನ್’ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ‘ದೈಜಿ’ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ವರ್ಷದ ಕೊನೆ ಅಥವಾ 2026ರ ಆರಂಭಕ್ಕೆ ಸಿನಿಮಾ ತೆರೆಕಾಣಲಿದೆ’ ಎಂದರು. 

‘ಸಾಮಾನ್ಯ ಹಾರಾರ್ ಚಿತ್ರಗಳಿಗಿಂತ ಭಿನ್ನವಾದ ಕಥೆ ಈ ಸಿನಿಮಾದಲ್ಲಿದೆ. ವಿಭಿನ್ನವಾಗಿ ಈ ಕಥೆಯನ್ನು ಶ್ರೀವತ್ಸ ತೆರೆಗೆ ತಂದಿದ್ದಾರೆ. ನಾನು ಕೆ.ಬಾಲಚಂದರ್ ಅವರಂತಹ ಹೆಸರಾಂತ ನಿರ್ದೇಶಕರ ಜೊತೆಗೆ ಹತ್ತು ಸಿನಿಮಾ ಮಾಡಿದ್ದೇನೆ. ಮುಂದೆ ಶ್ರೀವತ್ಸ ಅವರ ಜೊತೆಗೂ ಇದೇ ರೀತಿ ಸಿನಿಮಾ ಮಾಡಲಿದ್ದೇನೆ. ದಿಗಂತ್ ಅವರ ಲವಲವಿಕೆ ನನಗೆ ಬಹಳ ಇಷ್ಟ. ಈ ಚಿತ್ರದಲ್ಲಿ ವಿದೇಶದ ಪ್ರಸಿದ್ಧ ಕಲಾವಿದರೊಂದಿಗೂ ನಟಿಸಿದ್ದೇನೆ’ ಎಂದರು ರಮೇಶ್ ಅರವಿಂದ್.

ನಿರ್ದೇಶಕ, ನಟ ಬಿ.ಎಂ.ಗಿರಿರಾಜ್‌ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಚಿತ್ರಗ್ರಹಣ, ಜ್ಯೂಡ ಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಆಕಾಶ್ ಶ್ರೀವತ್ಸ ಅವರೇ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.