ADVERTISEMENT

ಮೈಸೂರಿನಲ್ಲಿ 'ಸ್ಟಾರ್‌' ನಟನಿಂದ ದಲಿತ ವೇಟರ್‌ ಮೇಲೆ ಹಲ್ಲೆ: ಇಂದ್ರಜಿತ್‌ ಲಂಕೇಶ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 10:03 IST
Last Updated 15 ಜುಲೈ 2021, 10:03 IST
ಇಂದ್ರಜಿತ್‌ ಲಂಕೇಶ್‌
ಇಂದ್ರಜಿತ್‌ ಲಂಕೇಶ್‌   

ಬೆಂಗಳೂರು: ಮೈಸೂರಿನ ಸಂದೇಶ್‌ ನಾಗರಾಜ್‌ ಹೊಟೇಲ್‌ನಲ್ಲಿ ಸ್ಟಾರ್‌ ನಟರೊಬ್ಬರು ದಲಿತ ಸಮುದಾಯದ ವೇಟರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ವೇಟರ್‌ ಕಣ್ಣುಗಳಿಗೆ ಹಾನಿಯಾಗಿದೆ. ಈ ವಿಚಾರವಾಗಿ ಹೊಟೇಲ್‌ನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅಲ್ಲಿನ ವೇಟರ್‌ಗಳ ವಿಚಾರಣೆಯನ್ನೂ ನಡೆಸಿ ತುರ್ತು ಕ್ರಮ ಜರುಗಿಸಬೇಕು. ಈ ಘಟನೆಯಿಂದ ದಲಿತರಲ್ಲಿ ಅವ್ಯಕ್ತವಾದ ಭಯದ ವಾತಾವರಣ ನಿರ್ಮಾಣವಾಗಿದೆ. ದಲಿತರು, ಬಡವರು, ಶೋಷಿತರ ಜೀವಕ್ಕೆ ಯಾವುದೇ ಸುರಕ್ಷತೆ ಇಲ್ಲವಾಗಿದೆ ಎಂದು ಹೇಳಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಪೊಲೀಸ್‌ ವ್ಯವಸ್ಥೆಯೂ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಭಾವಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಾಲದ ವಿವಾದದಲ್ಲಿ ಮಹಿಳೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಪೊಲೀಸರ ಮೇಲೆ ಒತ್ತಡ ತಂದು ಪ್ರಭಾವಿಗಳು ಮಾತ್ರ ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ ಮಹಿಳೆಯರಲ್ಲಿ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಿದೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ಸುಮ್ಮನೇ ಬಿಡುತ್ತಿದ್ದಿರಾ? ಜನಸಾಮಾನ್ಯರಿಗೆ ಒಂದು ನ್ಯಾಯ; ಪ್ರಭಾವಿಗಳಿಗೆ ಮತ್ತೊಂದು ನ್ಯಾಯವೇ? ಇದು ಮಹಿಳೆಯರ ಮೇಲಿನ ದೌರ್ಜ್ಯನಕ್ಕೆ ಸಾಕ್ಷಿ ಅಲ್ಲವೇ ಎಂದು ಇಂದ್ರಜಿತ್‌ ಲಂಕೇಶ್‌ ಪ್ರಶ್ನಿಸಿದ್ದಾರೆ.

ಸಮಗ್ರ ತನಿಖೆಗೆ ಸೂಚನೆ:

ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಊಹಾಪೋಹಗಳು ಬೇಕಿಲ್ಲ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.