ADVERTISEMENT

ಕಾಮಿಡಿ, ಸಸ್ಪೆನ್ಸ್‌, ಥ್ರಿಲ್ಲರ್‌, ಹಾರಾರ್‌ ತುಂಬಿರುವ ‘ನವರಸ’ದ ದಮಯಂತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 11:01 IST
Last Updated 29 ನವೆಂಬರ್ 2019, 11:01 IST
‘ದಮಯಂತಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ
‘ದಮಯಂತಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ   

ಭರಪೂರ ಕಾಮಿಡಿ,ಸಸ್ಪೆನ್ಸ್‌, ಥ್ರಿಲ್ಲರ್‌, ಹಾರಾರ್‌ ಅಂಶಗಳಿರುವ ಪ್ರೇತಾತ್ಮದ ಕಥೆಯನ್ನು ‘ದಮಯಂತಿ’ ಚಿತ್ರದಲ್ಲಿ ನಿರ್ದೇಶಕ ನವರಸನ್‌ತುಸು ಹೆಚ್ಚೇ ಎನಿಸುವಂತೆ ನವರಸಗಳೊಂದಿಗೆ ಅದ್ದಿ ತೆಗೆದು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಕಥೆ ಶುರುವಾಗುವುದು ಹೀಗೆ; ಯುವಕ ವಿಕ್ಕಿಯ (ಶರಣ್‌ ಉಳ್ತಿ) ತಂದೆ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸಾಲಗಾರರ ಕಾಟ ಮಗನಿಗೂ ತಪ್ಪುವುದಿಲ್ಲ. ಅದೇ ವೇಳೆಗೆ ಆತನ ತಾಯಿಗೆ ಬ್ರೈನ್‌ ಟ್ಯೂಮರ್‌ ಕಾಣಿಸಿಕೊಂಡು, ಶಸ್ತ್ರ ಚಿಕಿತ್ಸೆಗೆ ₹50 ಲಕ್ಷ ಬೇಕಾಗುತ್ತದೆ. ತಂದೆಯನ್ನು ಶಪಿಸುವ ಮಗನಿಗೆ,ತನ್ನ ತಂದೆ ರಿಯಲ್‌ ಎಸ್ಟೇಟ್‌ ನಡೆಸುತ್ತಿದ್ದ ಒಬ್ಬ ಶ್ರೀಮಂತನಾಗಿದ್ದ. ದೇವಾಪುರದ ರಾಜ ಬಂಗ್ಲೆ ಖರೀದಿಸಿ, ಅದನ್ನು ಯಾರೂ ಕೊಂಡುಕೊಳ್ಳದಿದ್ದಾಗಸಾಲಗಾರನಾಗಿ ಜೀವ ಕಳೆದುಕೊಂಡರೆನ್ನುವ ಸತ್ಯ ತಾಯಿಯಿಂದ ಗೊತ್ತಾಗುತ್ತದೆ. ಅಪ್ಪ ಖರೀದಿಸಿದ್ದ ಭೂತ ಬಂಗ್ಲೆಯನ್ನು ವಿಕ್ಕಿ ಸ್ನೇಹಿತನೊಂದಿಗೆ ಹುಡುಕಲು ಹೊರಟಾಗ ‘ದಮಯಂತಿ’ಯಕರುಳು ಕಿವುಚುವ ಕಥೆ ತೆರೆದುಕೊಳ್ಳುತ್ತದೆ. ಊರವರು ‘ಆ ಬಂಗ್ಲೆಗೆ ಹೋಗೋದು ಒಂದೆ ಸ್ಮಶಾನಕ್ಕೆ ಹೋಗೋದು ಒಂದೇ’ ಎಂದು ಹೆದರಿಸುತ್ತಾರೆ.

ಟಿ.ವಿ ಚಾನೆಲ್‌ಗಾಗಿ ರಿಯಾಲಿಟಿ ಶೋ ನಡೆಸುವ ಯೋಜನೆಯಲ್ಲಿದ್ದ ವಿಕ್ಕಿ, ದಮಯಂತಿ ಬಂಗ್ಲೆಯಲ್ಲಿ ಏಳು ದಿನಗಳನ್ನು ಇಬ್ಬರು ಯುವತಿಯರು, ನಾಲ್ವರು ಪುರುಷರು ಕಳೆಯುವಂತೆ ‘ಡಿಡಿ ಬಾಸ್‌’ ರಿಯಾಲಿಟಿ ಶೋ ಆಯೋಜಿಸುತ್ತಾನೆ. ಇದಕ್ಕೆ ಸ್ಪರ್ಧಿಗಳಾಗಿ ಬರುವವರು ತಬಲಾ ನಾಣಿ, ಗಿರೀಶ್‌ ಶಿವಣ್ಣ, ಮಿತ್ರ, ಪವನ್‌, ಅನುಷಾ ರೈ, ಅಂಜನಾ. ಸಾಧು ಕೋಕಿಲ ಅವರದ್ದು ವೈಲ್ಡ್‌ ಕಾರ್ಡ್‌ ಎಂಟ್ರಿ, ಬಂದಷ್ಟೇ ವೇಗದಲ್ಲಿ ನಿರ್ಗಮಿಸುವ ಪಾತ್ರ. ಸ್ಪರ್ಧಿಗಳಿಗೆತಾವು ಹೊಕ್ಕಿರುವುದು ದೆವ್ವದ ಮನೆ ಎನ್ನುವುದು ಗೊತ್ತಾದ ಮೇಲೆ ಚಿತ್ರದ ಕಥೆ ಮತ್ತೊಂದು ಆಯಾಮ ಪಡೆಯುತ್ತದೆ. ಕಥೆಯೊಳಗೊಂದು ಕಥೆ ಬಿಚ್ಚಿಕೊಳ್ಳುತ್ತಾ ಕುತೂಹಲದೊಂದಿಗೆ ಸಾಗುತ್ತದೆ. ಕೊನೆಗೆ ಸಿದ್ಧಸೂತ್ರದೊಂದಿಗೆ ಅಂತ್ಯವಾಗುತ್ತದೆ.

ADVERTISEMENT

ಹಾಸ್ಯದ ಕಮಾಲ್‌ಗೆಮೊದಲಾರ್ಧ ಮೀಸಲಿಟ್ಟಂತಿದೆ. ಹಾಸ್ಯ ದೃಶ್ಯಗಳು, ಹಾಸ್ಯ ಸಂಭಾಷಣೆಗಳು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತವೆ. ದಮಯಂತಿಯ (ರಾಧಿಕಾ ಕುಮಾರಸ್ವಾಮಿ) ದರ್ಶನ ಮಧ್ಯಂತರದಿಂದ. ಮಗಳು, ವೈದ್ಯೆ, ರಾಣಿ, ಪ್ರೇತ ಹೀಗೆ ನಾಲ್ಕು ಶೇಡ್‌ಗಳಲ್ಲಿ ರಾಧಿಕಾ ಕುಮಾರಸ್ವಾಮಿ ‌ನಟನೆ ಕಣ್ಸೆಳೆಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಎದ್ದು ಕಾಣುವುದು ಪ್ರಸಾದನ ಕಲೆ (ಮೇಕಪ್‌), ಅದಕ್ಕೆ ತಕ್ಕಂತೆಯೇ ದಮಯಂತಿಯ ಪರಕಾಯ ಪ್ರವೇಶಿಸಿದಂತಿದೆರಾಧಿಕಾ ಅಭಿನಯ. ಖಳನಾಯಕನಾಗಿಸೌರವ್‌ ಲೋಕೇಶ್‌ ಗಮನ ಸೆಳೆಯುತ್ತಾರೆ. ಉಳಿದ ಕಲಾವಿದರೂ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಹಾರಾರ್‌ ಸಿನಿಪ್ರೇಕ್ಷಕರ ಇಷ್ಟಕ್ಕೆ ಅನುಸಾರ ಕಥೆ ಹೆಣೆದಂತಿದೆ. ಕಥೆಯನ್ನು ಸೊಗಸಾಗಿ ಹೇಳುವ ದಾರಿಯನ್ನುನಿರ್ದೇಶಕರೇ ಕಠಿಣಗೊಳಿಸಿಕೊಂಡು, ಅದರ ಶ್ರಮವನ್ನು ಪ್ರೇಕ್ಷಕನಿಗೂ ತಾಕಿಸಿದ್ದಾರೆ. ಈ ಚಿತ್ರ ‘ಮನೆಮಾರಾಟಕ್ಕಿದೆ’ ಚಿತ್ರ ನೆನಪಿಸಿದರೆ ಅದು ಪ್ರೇಕ್ಷಕನ ತಪ್ಪಲ್ಲ.ಮಹೇಶ್ ರೆಡ್ಡಿ ಸಂಕಲನ ಬಿಗಿಯಾಗಿಸಿದ್ದರೆ ಇನ್ನೊಂದಿಷ್ಟು ಸಮಯ, ಪ್ರೇಕ್ಷಕನ ತ್ರಾಸ ಕಡಿಮೆ ಮಾಡಬಹುದಿತ್ತು.ಹಿನ್ನೆಲೆ ಸಂಗೀತವೂ ಕೂಡ ಎದೆಗೆ ಅಪ್ಪಳಿಸಿದ ಅನುಭವ ಕೊಡುತ್ತದೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣದಲ್ಲಿ ಕೆಲವು ದೃಶ್ಯಗಳಿಗೆ ಮೆರುಗು ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.