
‘ಆರ್.ಸಿ. ಸ್ಟುಡಿಯೊಸ್’ನಡಿ ನಿರ್ದೇಶಕ ಆರ್.ಚಂದ್ರು ನಿರ್ಮಾಣ ಮಾಡುತ್ತಿರುವ, ರಾಜ್‌ಮೋಹನ್ ನಿರ್ದೇಶನದ ‘ಫಾದರ್’ ಸಿನಿಮಾದ ‘ಫಾದರ್ ಥೀಮ್ ವಿಡಿಯೊ’ ಇತ್ತೀಚೆಗೆ ಬಿಡುಗಡೆಯಾಯಿತು.
ಸಿನಿಮಾವನ್ನು 2026ರ ಮೊದಲಾರ್ಧದಲ್ಲೇ ಬಿಡುಗಡೆ ಮಾಡಲು ಆರ್.ಚಂದ್ರು ನಿರ್ಧರಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ. ಅವರ ನಿರ್ದೇಶನದ ‘ಲವ್ ಮಾಕ್ಟೇಲ್–3’ ಕೂಡಾ ಬಿಡುಗಡೆಗೆ ಸಿದ್ಧವಿರುವ ಹಿನ್ನೆಲೆಯಲ್ಲಿ ಚರ್ಚಿಸಿ ದಿನಾಂಕ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ ಆರ್.ಚಂದ್ರು. ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
‘ಇಂಥ ಕಥೆಯ ಎಳೆ ಕೇಳಸಿಗುವುದೇ ಅಪರೂಪ. ಈ ಸಿನಿಮಾ ಮಾಡಲೇಬೇಕು ಎಂದು ಕಥೆ ಕೇಳಿದಾಗಲೇ ನಿರ್ಧರಿಸಿದ್ದೆ. ತಂದೆ–ಮಗನ ಕಥೆಗಳು ಹಲವು ಬಂದಿವೆ. ಆದರೆ ಈ ಸಿನಿಮಾದಲ್ಲಿ ನಡೆಯುವ ಘಟನೆ ಎಲ್ಲೂ ನೋಡಿರಲು ಸಾಧ್ಯವಿಲ್ಲ. ಕೌಟುಂಬಿಕ, ಸದಭಿರುಚಿಯ ಸಿನಿಮಾ ಮಾಡಬೇಕು ಮಾಡಬೇಕು ಎನ್ನುವುದು ನನ್ನ ಆಸೆ. ಬಹಳ ವರ್ಷಗಳ ಕಾಲ ಈ ಸಿನಿಮಾ ಮನಸ್ಸಿನಲ್ಲಿ ಉಳಿಯಲಿದೆ’ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.
ತಂದೆ–ಮಗನ ಬಾಂಧವ್ಯದ ಕಥೆ ಹೊತ್ತ ಈ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್, ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ. ಅಮೃತಾ ಅಯ್ಯಂಗಾರ್, ‘ಟಗರುಪಲ್ಯ’ ಖ್ಯಾತಿಯ ನಾಗಭೂಷಣ್ ತಾರಾಬಳಗದಲ್ಲಿದ್ದಾರೆ. ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಹಾಗೂ ವಾರಾಣಸಿಯಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾಗೆ ಸುಜ್ಞಾನ್ ಛಾಯಾಚಿತ್ರಗ್ರಹಣ, ನಕುಲ್ ಅಭಯಂಕರ್ ಸಂಗೀತ ನಿರ್ದೇಶನವಿದೆ.
ಪ್ರತಿ ಸಿನಿಮಾವೂ ಕಲಿಕೆಯೇ. ನನ್ನ ಕನಸಿಕ ಪೌರಾಣಿಕ ಕಥೆಯೊಂದಿದೆ. ಇದಕ್ಕೆ ಸಾಕಷ್ಟು ಪೂರ್ವಸಿದ್ಧತೆ ಬೇಕಾಗಿದೆ. ‘ಫಾದರ್’ ಸಿನಿಮಾದ ಕಥೆ ಎಲ್ಲರಿಗೂ ಬಹಳ ಕನೆಕ್ಟ್ ಆಗಲಿದೆ. ಇದೊಂದು ಕಾಂಟೆಂಟ್ ಚಿತ್ರ. ಸಿನಿಮಾ ಬಿಡುಗಡೆಗೆ ಸಮಯ ಸಂದರ್ಭ ಮುಖ್ಯ. 2026ರ ಮೊದಲಾರ್ಧದಲ್ಲಿ ಬರುವ ಯೋಜನೆ ಹಾಕಿಕೊಂಡಿದ್ದೇವೆ.ಆರ್.ಚಂದ್ರು ನಿರ್ಮಾಪಕ
ಈ ಸಿನಿಮಾ ನೋಡುವಾಗ ನಿಮಗೆ ನಿಮ್ಮ ಅಪ್ಪ ನೆನಪಾಗಲಿದ್ದಾರೆ. ನಿಮ್ಮ ಮಕ್ಕಳು ನೋಡುವಾಗ ನಿಮ್ಮ ನೆನಪು ಅವರಿಗಾಗಲಿದೆ. ನನಗೆ 15 ವರ್ಷವಿರುವಾಗ ಅಪ್ಪ ತೀರಿಕೊಂಡರು. ಅಪ್ಪ ಇದ್ದಿದ್ದರೆ ಏನಾಗುತ್ತಿತ್ತು ಎನ್ನುವುದೇ ಕಥೆ. ಇದೊಂದು ನೈಜ ಕಥೆ.ರಾಜ್‌ಮೋಹನ್‌ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.