ADVERTISEMENT

ದರ್ಶನ್‌ ಜೊತೆಗಿದ್ದರೆ ನನಗೆ ಆನೆಬಲ: ಡೆವಿಲ್ ನಿರ್ದೇಶಕ ಪ್ರಕಾಶ್‌ ವೀರ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
   

ಪ್ರಕಾಶ್‌ ವೀರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ದರ್ಶನ್‌ ನಟನೆಯ ‘ದಿ ಡೆವಿಲ್’ ಚಿತ್ರ ಡಿ.11ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ಪ್ರಕಾಶ್‌ ವೀರ್‌ ಮಾತನಾಡಿ, ‘ಬಿಡುಗಡೆ ಹತ್ತಿರವಿರುವಾಗ ಮೊದಲ ಸುದ್ದಿಗೋಷ್ಠಿ ಮಾಡುತ್ತಿದ್ದೇವೆ. ಈ ಹಿಂದೆ ಸುದ್ದಿಗೋಷ್ಠಿ ಮಾಡಬೇಕು ಎನ್ನುವಾಗ ಕೊಂಚ ಗೊಂದಲಗಳು ಇದ್ದವು. ದರ್ಶನ್‌ ಬರುತ್ತಾರೆ, ಸುದ್ದಿಗೋಷ್ಠಿಯಲ್ಲಿ ಜೊತೆಗಿರುತ್ತಾರೆ ಎನ್ನುವ ಒಂದು ಆಸೆ ಇಟ್ಟುಕೊಂಡೇ ಇಷ್ಟು ದಿನ ಮುಂದಕ್ಕೆ ತಳ್ಳಿದ್ದೆ. ದರ್ಶನ್‌ ಜೊತೆಗಿದ್ದರೆ ನನಗೆ ಆನೆಬಲ. ದರ್ಶನ್‌ ಇಲ್ಲದೇ ಈ ಸಿನಿಮಾದ ಪ್ರಚಾರ ಮಾಡುವುದು ಕಷ್ಟ. ಅವರು ಸುದ್ದಿಗೋಷ್ಠಿಯಲ್ಲಿ ಜೊತೆಗಿರದೇ ಇರುವ ನೋವು ಖಂಡಿತಾ ಇದೆ. ವಿಜಯಲಕ್ಷ್ಮಿ, ದಿನಕರ್‌ ಅವರು ತಂಡದ ಜೊತೆಗೆ ನಿಂತಿದ್ದಾರೆ. ದರ್ಶನ್‌ ಅವರ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. 2018ರಲ್ಲಿ ಈ ಸಿನಿಮಾದ ಕಥೆಯನ್ನು ದರ್ಶನ್‌ಗೆ ಹೇಳಿದ್ದೆ. ಚಿತ್ರಕಥೆ ಸಿದ್ಧಪಡಿಸಿಕೊಂಡು ಬಂದ ತಕ್ಷಣದಲ್ಲೇ ಶೂಟಿಂಗ್‌ ಮಾಡೋಣವೆಂದಿದ್ದರು. ಬಳಿಕ ಕೋವಿಡ್‌ ಬಂತು, ನನ್ನ ತಂದೆ ತೀರಿಕೊಂಡರು. ಹೀಗಾಗಿ ವಿಳಂಬವಾಯಿತು. ‘ಕಾಟೇರ’ ಮುಗಿಸಿದ ತಕ್ಷಣವೆ ಈ ಸಿನಿಮಾ ಕೈಗೆತ್ತಿಕೊಂಡೆವು’ ಎಂದರು.

‘ಸತತವಾಗಿ ಎರಡು ವರ್ಷ ಕಲಾವಿದರೆಲ್ಲರೂ ನನ್ನ ಜೊತೆ ಪಯಣ ಮಾಡಿದ್ದಾರೆ. ಡೆವಿಲ್‌ ಸಿನಿಮಾ ನನಗೊಂದು ದೊಡ್ಡ ಸವಾಲಾಗಿತ್ತು. ‘ಡೆವಿಲ್‌’ ಎನ್ನುವ ಶೀರ್ಷಿಕೆ ಬೇರೆಯವರ ಬಳಿ ಇತ್ತು. ಅದನ್ನು ಪಡೆದುಕೊಂಡೆವು. ಕಥೆಗೆ ಸೂಕ್ತವಾಗಿತ್ತು ಎನ್ನುವ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ದರ್ಶನ್‌ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಹೀಗೆಂದು ಅವರಿಗೆ ಬೇರೆ ಅಭಿಮಾನಿಗಳು ಇಲ್ಲವೆಂದಲ್ಲ. ಇದು ಅಭಿಮಾನಿಗಳಿಗಾಗಿಯೇ ಮಾಡಿದ ಸಿನಿಮಾವಲ್ಲ, ಆದರೆ ಅಭಿಮಾನಿಗಳಿಗೆ ಬೇಕಾಗಿರುವ ಸನ್ನಿವೇಶಗಳು ಇವೆ. ಮಾಸ್‌ ಎಂಟರ್‌ಟೇನರ್‌ ಸಿನಿಮಾ ಇದಾಗಿದೆ. ಇದು ‘ಮಿಲನ’ ರೀತಿಯ ಕಥೆಯಲ್ಲ. ಅಂಥ ಕಥೆಯನ್ನೇ ಮಾಡಿಕೊಂಡಿರಲು ಸಾಧ್ಯವಿಲ್ಲ. ನನಗೆ ನಟನನ್ನು ನೋಡಿ ಕಥೆ ಮಾಡಲು ಬರುವುದಿಲ್ಲ. ಕುಟುಂಬ ಸಹಿತ ಕುಳಿತು ನೋಡಬಹುದಾದ ಸಿನಿಮಾ ‘ಡೆವಿಲ್‌’. ನಾನೂ ಹೊಸದನ್ನು ಪ್ರಯತ್ನಿಸಬೇಕು ಅಲ್ಲವೇ’ ಎನ್ನುತ್ತಾರೆ ಪ್ರಕಾಶ್‌.

ADVERTISEMENT

‘ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದ ಬಗ್ಗೆಯಷ್ಟೇ ದರ್ಶನ್‌ ಜೊತೆ ಚರ್ಚೆಯಾಗುತ್ತಿತ್ತು. ಅವರು ತಮ್ಮ ವೈಯಕ್ತಿಕ ಜೀವನವನ್ನು ಸೆಟ್‌ಗೆ ತರಲಿಲ್ಲ. ಈಗಾಗಲೇ ತಡವಾಗಿದೆ, ಬೇಗನೇ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆ ಮಾಡೋಣ ಎನ್ನುತ್ತಿದ್ದರು. ಬೆನ್ನುನೋವಿಗೆ ಎಷ್ಟು ಔಷಧ ಹಾಗೂ ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದರು ಎನ್ನುವುದನ್ನು ಸೆಟ್‌ನಲ್ಲಿರುವ ನಾವೆಲ್ಲರೂ ನೋಡಿದ್ದೇವೆ. ಅವರಿಗೆ ಬೆನ್ನುನೋವು ಖಂಡಿತಾ ಇತ್ತು, ಅದರ ನಡುವೆ ಚಿತ್ರೀಕರಣ ಪೂರ್ಣಗೊಳಿಸಿಕೊಟ್ಟಿದ್ದರು. ಇತ್ತೀಚೆಗೆ ದರ್ಶನ್‌ ಅವರನ್ನು ಭೇಟಿಯಾಗಿದ್ದೇನೆ. ಭೇಟಿಯಾದಾಗ ಸಿನಿಮಾ ಬಗ್ಗೆಯಷ್ಟೆ ಮಾತನಾಡಿದ್ದಾರೆ. ಅಕ್ಟೋಬರ್‌
ನಲ್ಲೇ ರಿಲೀಸ್‌ ಮಾಡಬೇಕು ಎಂದು ಹೇಳಿದ್ದರು. ಆದರೆ ವಿಎಫ್‌ಎಕ್ಸ್‌ ಕೆಲಸ, ಪೋಸ್ಟ್‌ ಪ್ರೊಡಕ್ಷನ್‌ಗೆ ಸಮಯ ಹಿಡಿಯಿತು’ ಎಂದರು.

ಹಿಂದಿನ ಕಥೆ ಗೊತ್ತಿರಲಿಲ್ಲ..

‘‘ಇದ್ರೆ ನೆಮ್ದಿಯಾಗ್‌ ಇರ್ಬೇಕು..’ ಎನ್ನುವುದರ ಹಿಂದೆ ಒಂದು ಕಥೆ ಇದೆ ಎನ್ನುವುದೇ ಗೊತ್ತಿರಲಿಲ್ಲ. ಅನಿರುದ್ಧ್‌ ಅವರು ಅದನ್ನು ಬರೆದು ಕಳುಹಿಸಿದ ಮೇಲೆ, ಚಿತ್ರೀಕರಣದ ಸಂದರ್ಭದಲ್ಲೇ ಅದು ನನಗೆ ತಿಳಿದಿದ್ದು. ಪಾತ್ರಕ್ಕೆ, ಹಾಡಿಗೆ ಚೆನ್ನಾಗಿದ್ದ ಕಾರಣ ಅದನ್ನು ಬಳಸಿದೆವು. ‘ಎಲ್ಲಾ ಶಿವನಾಟ..’ ಎಂಬ ಸಾಲು ಇತ್ತು. ಈಗಾಗಲೇ ‘KD’ ಸಿನಿಮಾದಲ್ಲಿ ಈ ಸಾಲು ಬಳಸಿದ್ದ ಕಾರಣ ನಾವು ‘ಇದ್ರೆ ನೆಮ್ದಿಯಾಗ್‌ ಇರ್ಬೇಕು..’ ಎನ್ನುವುದನ್ನು ಬಳಸಿಕೊಂಡೆವು’ ಎಂದರು ಪ್ರಕಾಶ್‌.

‘ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. 11ರಂದು ಬೆಳಿಗ್ಗೆ 6.30ಕ್ಕೆ ಪ್ರದರ್ಶನ ಆರಂಭವಾಗಲಿದೆ’ ಎಂದು ಕಾರ್ಯನಿರ್ವಾಹಕ ನಿರ್ಮಾಪಕಿ ತಶ್ವಿನಿ ವೀರ್‌ ತಿಳಿಸಿದರು.

ಈ ಹಿಂದೆ ‘ಸಿದ್ಧಾರ್ಥ’ ಸಿನಿಮಾದಲ್ಲಿ ಪ್ರಕಾಶ್‌ ಅವರ ಜೊತೆ ಕೆಲಸ ಮಾಡಿದ್ದೆ. ದರ್ಶನ್‌ ಜೊತೆ ನಾಲ್ಕು ಸಿನಿಮಾದಲ್ಲಿ ನಟಿಸಿದ್ದೇನೆ. ಅವರು ಕೂಲ್‌ ಆಗಿ ಕೆಲಸ ಮಾಡುವವರು. ಜೊತೆಯಲ್ಲಿರುವ ಕಲಾವಿದರ ಜೊತೆಯಲ್ಲಿ ಸನ್ನಿವೇಶ ಕಟ್ಟುವುದರ ಬಗ್ಗೆಯಷ್ಟೇ ಅವರ ಗಮನವಿರುತ್ತದೆ. ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿರುವ ಮಹತ್ವದ ನಟ ದರ್ಶನ್‌.  
ಅಚ್ಯುತ್‌ ಕುಮಾರ್‌, ನಟ
ಸಿನಿಮಾದಲ್ಲಿನ ನನ್ನ ಪಾತ್ರದ ಅವಧಿ ಕಡಿಮೆ ಇದ್ದರೂ, ಪರಿಣಾಮಕಾರಿಯಾಗಿದೆ. ದರ್ಶನ್‌ ಅವರ ಜೊತೆ ಎರಡನೇ ಸಿನಿಮಾ ಇದಾಗಿದೆ. ‘ನವಗ್ರಹ’ ತೆರೆಕಂಡು 18 ವರ್ಷ ಕಳೆದಿದೆ.
ಶರ್ಮಿಳಾ ಮಾಂಡ್ರೆ, ನಟಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.