ADVERTISEMENT

‘ವಿಂಗ್‌ ಕಮಾಂಡರ್‌ ಅಭಿನಂದನ್‌’ ಪಾತ್ರದಲ್ಲಿ ದರ್ಶನ್‌ ನಟನೆ?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:58 IST
Last Updated 22 ಫೆಬ್ರುವರಿ 2020, 10:58 IST
ಅಭಿನಂದನ್‌ ಮತ್ತು ದರ್ಶನ್‌
ಅಭಿನಂದನ್‌ ಮತ್ತು ದರ್ಶನ್‌   

ಅಭಿಮಾನಿಗಳ ಸಮ್ಮುಖದಲ್ಲಿ ಒಂದು ವಾರದ ಹಿಂದೆ ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಅಭಿಮಾನಿಗಳು ನೀಡಿದ್ದ ಧವಸ ಧಾನ್ಯವನ್ನು ಅನಾಥಾಶ್ರಮಗಳು, ವೃದ್ಧಾಶ್ರಮಗಳಿಗೆ ತಲುಪಿಸಿದ ತೃಪ್ತಿ ಅವರಲ್ಲಿದೆ. ಈ ನಡುವೆಯೇ ಅವರು ಎಸ್‌.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ರಾಜವೀರ ಮದಕರಿ ನಾಯಕ’ ಚಿತ್ರದ ಮೊದಲ ಹಂತದ ಶೂಟಿಂಗ್‌ ಅನ್ನೂ ಮುಗಿಸಿದ್ದಾರೆ.

ದರ್ಶನ್‌ ನಟನೆಯ 50ನೇ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಶತದಿನಗಳನ್ನು ಪೂರೈಸಿದೆ. ಇದರ ಅಂಗವಾಗಿ ಬೆಂಗಳೂರಿನ ಮತ್ತಿಕೆರೆಯ ಜೆ.ಪಿ. ಉದ್ಯಾನದಲ್ಲಿ ಶಿವರಾತ್ರಿಯಂದು ಶತದಿನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದರ್ಶನ್‌, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ಮುನಿರತ್ನ ‘ದರ್ಶನ್‌ ಅವರನ್ನು ತೆರೆಯ ಮೇಲಿನ ಯುದ್ಧಭೂಮಿಯಲ್ಲಿ ನೋಡುವ ಆಸೆಯಿದೆ. ನನ್ನ ಮುಂದಿನ ಚಿತ್ರದ ಹೆಸರು ‘ವಿಂಗ್‌ ಕಮಾಂಡರ್‌ ಅಭಿನಂದನ್‌’. ಇದರಲ್ಲಿ ದರ್ಶನ್‌ ಅವರು ಅಭಿನಂದನ್‌ ಪಾತ್ರದಲ್ಲಿ ನಟಿಸಲಿದ್ದಾರೆ. ನಟ ಅಭಿಷೇಕ್‌ ಅಂಬರೀಷ್‌ ಕೂಡ ಮುಖ್ಯಪಾತ್ರದಲ್ಲಿ ಅಭಿನಯಿಸಲಿದ್ದಾರೆ’ ಎಂದು ದಚ್ಚು ಸಮ್ಮುಖದಲ್ಲಿಯೇ ಘೋಷಿಸಿದರು.

ADVERTISEMENT

ಅಂದಹಾಗೆ ಅವರು ಇದೇ ವರ್ಷ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರಂತೆ. ಅಂತೂ ಕನ್ನಡದಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಜೀವನಾಧಾರಿತ ಚಿತ್ರ ನಿರ್ಮಾಣವಾಗುವುದು ಖಾತ್ರಿಯಾಗಿದೆ. ಪ್ಯಾನ್‌ ಇಂಡಿಯಾ ಕಾನ್ಸೆಫ್ಟ್‌ನಡಿ ಈ ಸಿನಿಮಾ ನಿರ್ಮಾಣವಾಗಲಿದೆಯೇ ಎಂಬುದು ಅಧಿಕೃತಗೊಂಡಿಲ್ಲ.

ತರುಣ್‌ ಸುಧೀರ್‌ ನಿರ್ದೇಶನದ ದಚ್ಚು ನಟನೆಯ ‘ರಾಬರ್ಟ್‌’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಏಪ್ರಿಲ್‌ 9ರಂದು ಈ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ.

ಮದಕರಿ ನಾಯಕ ಚಿತ್ರ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ದರ್ಶನ್‌ ಅವರೇ ಹೇಳಿದ್ದಾರೆ. ಅಲ್ಲದೇ, ‘ಮಿಲನ’ ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಕಾಶ್‌ ಅವರ ನಿರ್ದೇಶನದ ಸಿನಿಮಾದಲ್ಲೂ ದಚ್ಚು ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಮತ್ತೊಂದೆಡೆ ಬಿ. ಸುರೇಶ್ ಮತ್ತು ಶೈಲಜಾ ನಾಗ್‌ ನಿರ್ಮಾಣದ ಹೊಸ ಚಿತ್ರದಲ್ಲೂ ದರ್ಶನ್‌ ನಟಿಸಲಿದ್ದಾರಂತೆ. ದಚ್ಚುಗೆ ಅವರು ಮುಂಗಡ ಹಣವನ್ನೂ ನೀಡಿದ್ದಾರೆ. ಹಾಗಾಗಿ, ವಿಂಗ್‌ ಕಮಾಂಡರ್‌ ಅಭಿನಂದನ್‌ ಕುರಿತ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.