ADVERTISEMENT

ದರ್ಶನ್‌ ಕರೆಗೆ ಮೃಗಾಲಯಗಳಿಗೆ ಆರು ಪಟ್ಟು ಹೆಚ್ಚು ದೇಣಿಗೆ

ದೇಣಿಗೆ ಹಾಗೂ ದತ್ತು ರೂಪದಲ್ಲಿ ಕೇವಲ ಐದು ದಿನದಲ್ಲಿ ₹1 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:07 IST
Last Updated 10 ಜೂನ್ 2021, 14:07 IST
ದರ್ಶನ್‌
ದರ್ಶನ್‌   

ಬೆಂಗಳೂರು: ಮೃಗಾಲಯದಲ್ಲಿರುವ ಪ್ರಾಣಿ,ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಅವರು ನೀಡಿರುವ ಕರೆಗೆ ರಾಜ್ಯದ ಒಂಬತ್ತು ಮೃಗಾಲಯಗಳಿಗೆ ಕೇವಲ ಐದು ದಿನಗಳಲ್ಲಿ ₹1 ಕೋಟಿಗೂ ಅಧಿಕ ದೇಣಿಗೆ ಹರಿದುಬಂದಿದೆ. ಇದು ಕಳೆದ ಒಂದು ವರ್ಷದಲ್ಲಿ ಸಂಗ್ರಹವಾದ ಒಟ್ಟು ದತ್ತು ಹಾಗೂ ದೇಣಿಗೆಗಿಂತ ಸುಮಾರು ಆರು ಪಟ್ಟು ಹೆಚ್ಚು.

2020 ಜುಲೈ 20ರಿಂದ 2021 ಜೂನ್‌ 4ರವರೆಗೆ ಮೈಸೂರು, ಬನ್ನೇರುಘಟ್ಟ, ಬೆಳಗಾವಿ ಸೇರಿದಂತೆ 9 ಮೃಗಾಲಯಗಳಿಗೆ ದತ್ತು ಹಾಗೂ ದೇಣಿಗೆ ರೂಪದಲ್ಲಿ ₹17.96 ಲಕ್ಷ ಸಂಗ್ರಹವಾಗಿತ್ತು. ಜೂನ್‌ 5ರಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಸಸಿ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದ ನಟ ದರ್ಶನ್‌, ‘ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಹೀಗಾಗಿ ಪ್ರಾಣಿ,ಪಕ್ಷಿಗಳನ್ನು ದತ್ತುಪಡೆದು ಪ್ರಾಣಿಸಂಕುಲ ಉಳಿಸಿ, ಮೃಗಾಲಯ ಬೆಳೆಸಿ’ ಎಂದು ಕರೆ ನೀಡಿದ್ದರು.

ಜೂನ್‌ 5ರಿಂದ ಜೂನ್‌ 10ರವರೆಗೆ ಕೇವಲ 5 ದಿನದಲ್ಲಿ 9 ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ಸಾವಿರಾರು ಜನರು ದತ್ತು ಪಡೆದಿದ್ದು, ₹1 ಕೋಟಿಗೂ ಅಧಿಕ ಹಣ ದತ್ತು ಹಾಗೂ ದೇಣಿಗೆ ರೂಪದಲ್ಲಿ ಬಂದಿದೆ. ಇದರಲ್ಲಿ ಮೈಸೂರು ಮೃಗಾಲಯಕ್ಕೆ ಅತಿ ಹೆಚ್ಚು(₹51.75 ಲಕ್ಷ) ದೇಣಿಗೆ ಬಂದಿದೆ. ಬನ್ನೇರುಘಟ್ಟ ಮೃಗಾಲಯಕ್ಕೆ ₹29.83 ಲಕ್ಷ ಹಾಗೂ ಶಿವಮೊಗ್ಗ ಮೃಗಾಲಯಕ್ಕೆ ₹7.24 ಲಕ್ಷ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.