ADVERTISEMENT

ಒಂಬತ್ತನೇ ದಿಕ್ಕಿನ ಥ್ರಿಲ್ಲರ್ ಕಥೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 4:09 IST
Last Updated 8 ಏಪ್ರಿಲ್ 2020, 4:09 IST
ದಯಾಳ್‌ ಪದ್ಮನಾಭನ್
ದಯಾಳ್‌ ಪದ್ಮನಾಭನ್   

‘ಆ ಕರಾಳ ರಾತ್ರಿ’, ‘ತ್ರಯಂಬಕಂ’ ಸಿನಿಮಾಗಳಲ್ಲಿ ಥ್ರಿಲ್ಲರ್‌ ಕಥೆ ಹೇಳಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್‌ ಅವರದ್ದು ‘ಒಂಬತ್ತನೇ ದಿಕ್ಕು’ ಚಿತ್ರದಲ್ಲೂ ಅದೇ ವರಸೆ. ಅದಕ್ಕೆ ಅವರು ನೀಡುವ ಕಾರಣವೂ ಕುತೂಹಲಕಾರಿಯಾಗಿದೆ.

‘ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು ಮಿನಿಮಮ್‌ ಗ್ಯಾರಂಟಿ ಎಂದೇ ಹೇಳಬಹುದು. ನಿರ್ಮಾಪಕರು ನಷ್ಟದ ಸುಳಿಗೆ ಸಿಲುಕುವುದಿಲ್ಲ. ಸಿನಿಮಾದ ಎಲ್ಲಾ ಜಾನರ್‌ಗಳನ್ನು ಅವಲೋಕಿಸಿದರೆ ಬಹಳಷ್ಟು ಜನರಿಗೆ ಥ್ರಿಲ್ಲರ್‌ ಅಚ್ಚುಮೆಚ್ಚು. ನಮಗೆ ಇಷ್ಟವಾಗುವುದಿಲ್ಲ ಎಂದು ಹೇಳುವವರ ಸಂಖ್ಯೆ ತೀರಾ ಕಡಿಮೆ. ಆದರೆ, ಲವ್‌ಸ್ಟೋರಿ ಚಿತ್ರಗಳ ಬಗ್ಗೆ ಈ ಮಾತು ಹೇಳಲು ಸಾಧ್ಯವಿಲ್ಲ. ಅಂತಹ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಇಷ್ಟವಿಲ್ಲವೆಂದು ನೇರವಾಗಿಯೇ ಪ್ರತಿಕ್ರಿಯಿಸುತ್ತಾರೆ’ ಎನ್ನುತ್ತಾರೆ ದಯಾಳ್‌.

ಇತ್ತೀಚೆಗೆ ಅವರಿಗೆ ಥ್ರಿಲ್ಲರ್‌ ಜಾನರ್‌ ಸ್ಕ್ರಿಪ್ಟ್‌ಗಳೇ ಹೆಚ್ಚಾಗಿ ಬರುತ್ತಿವೆಯಂತೆ. ‘ಹಾಗಾಗಿಯೇ ಈ ಜಾಡಿನಲ್ಲಿಯೇ ಸಾಗಲು ನನಗೆ ಸುಲಭವಾಗಿದೆ’ ಎಂಬುದು ಅವರ ಸ್ಪಷ್ಟನೆ.

ADVERTISEMENT

‘ಒಂಬತ್ತನೇ ದಿಕ್ಕು’ ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರ. ತಂದೆ ಮತ್ತು ಮಗನ ನಡುವೆ ನಡೆಯುವ ಹುಡುಕಾಟ ಕಥಾನಕ ಇದು. ಆ ಹುಡುಕಾಟ ಏನು ಎಂಬುದೇ ಚಿತ್ರದ ಕಥಾವಸ್ತು. ಈಗಾಗಲೇ, ಇದರ ಶೂಟಿಂಗ್‌ ಪೂರ್ಣಗೊಂಡಿದ್ದು, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಿದೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಭೀತಿ ಕಡಿಮೆಯಾದ ಬಳಿಕ ಬಿಡುಗಡೆಗೆ ಸಿದ್ಧತೆ ನಡೆಸುವ ಯೋಜನೆ ಅವರದು.

ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿರುವುದು ಬೆಂಗಳೂರಿನಲ್ಲಿಯೇ. ಶ್ರೀರಂಗಪಟ್ಟಣದಲ್ಲಿ ಕ್ಲೈಮ್ಯಾಕ್ಸ್‌ ಅನ್ನು ಚಿತ್ರೀಕರಿಸಲಾಗಿದೆಯಂತೆ.

‘ಆ ಕರಾಳ ರಾತ್ರಿ’ ಸಿನಿಮಾದ್ದು ಒಂದು ದಿನದಲ್ಲಿ ನಡೆಯುವ ಕಥೆ. ಅದರಲ್ಲಿ ರಾತ್ರಿಯ ಕಥನವೇ ಹೆಚ್ಚಿತ್ತು. ಜೊತೆಗೆ, ಅದರ ಚಿತ್ರೀಕರಣ ನಡೆದಿರುವುದೂ ಒಂದೇ ಲೊಕೇಶನ್‌ನಲ್ಲಿ. ‘ಒಂಬತ್ತನೇ ದಿಕ್ಕು’ ಚಿತ್ರವನ್ನು ವಿವಿಧ ಲೊಕೇಶನ್‌ನಲ್ಲಿ ಚಿತ್ರೀಕರಿಸಲಾಗಿದೆ’ ಎಂದು ವಿವರಿಸುತ್ತಾರೆ.

ಯೋಗಿ ಈ ಚಿತ್ರದ ನಾಯಕ. ಅವರಿಗೆಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಅದಿತಿ ಅವರದ್ದು ಶಿವಮೊಗ್ಗದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಬರುವ ಹುಡುಗಿ ಪಾತ್ರ. ಥ್ರಿಲ್ಲರ್‌ ವಿಷಯವೊಂದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತಿರುತ್ತದೆ. ಅದು ಅವಳ ಬದುಕಿಗೆ ಪ್ರವೇಶಿಸಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಹೂರಣ.

ದಯಾಳ್‌ ನಿರ್ದೇಶಿಸಿದ್ದ ‘ರಂಗನಾಯಕಿ ವ್ಯಾಲ್ಯೂಮ್‌ 1’ ಚಿತ್ರ ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಸಿನಿಮೋತ್ಸವದ ಪನೋರಮ ವಿಭಾಗಕ್ಕೆ ಆಯ್ಕೆಯಾಗಿತ್ತು. ರಂಗನಾಯಕಿ ಸರಣಿ ಸಿನಿಮಾಗಳಿಗೆ ಅವರು ಸಿದ್ಧತೆ ನಡೆಸಿದ್ದಾರೆ. ‘ವ್ಯಾಲ್ಯೂಮ್‌ 2 ಸಿನಿಮಾದ ಕಥೆ ಬರೆಯುತ್ತಿದ್ದೇನೆ. ಸದ್ಯಕ್ಕೆ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿರುವೆ. ಅವುಗಳಿಂದ ಹೊರಬಂದ ಬಳಿಕ ಎರಡನೇ ಅಧ್ಯಾಯಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತೇನೆ’ ಎಂದು ‘ಪ್ರಜಾ ಪ್ಲಸ್‌’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.