ಮೂಲ ಗೊಂಬೆಯ ಜೊತೆ ಡಾನ್ ರಿವೇರಾ, ಮೂಲ ಅನ್ನಾಬೆಲ್ಲೆ ಗೊಂಬೆ, ಅನ್ನಾಬೆಲ್ಲೆ ಗೊಂಬೆಯ ಸಿನಿಮಾ ಪ್ರತಿರೂಪ
ಬೆಂಗಳೂರು: ಹಾಲಿವುಡ್‌ನ ಜನಪ್ರಿಯ ಹಾರರ್ ಚಿತ್ರವಾದ ‘ಅನ್ನಾಬೆಲ್ಲೆ’ಯಲ್ಲಿ (Annabelle–2014) ‘ಅನ್ನಾಬೆಲ್ಲೆ’ ಎಂಬ ಹಾಂಟೆಡ್ ಗೊಂಬೆಯ ಬಗ್ಗೆ ಭಯಾನಕ ಚಿತ್ರಗಳನ್ನು ಇಷ್ಟಪಡುವ ಹಲವರಿಗೆ ಗೊತ್ತು.
ಈ ಗೊಂಬೆ ಇದೀಗ ಮತ್ತೆ ಜಾಗತಿಕವಾಗಿ ಸುದ್ದಿಯಾಗಿದೆ.
‘ಅನ್ನಾಬೆಲ್ಲೆ’ ಗೊಂಬೆಯನ್ನು ಇಟ್ಟುಕೊಂಡು ಅಮೆರಿಕದ ತುಂಬ 'Devils on the Run' ಎಂಬ ಅಭಿಯಾನವನ್ನು ಕೈಗೊಂಡಿದ್ದ ‘ಪ್ಯಾರಾನಾರ್ಮಲ್ ಇನ್‌ವೆಸ್ಟಿಗೇಟರ್’ ಡಾನ್ ರಿವೇರಾ (54) ಅವರು ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಪ್ರವಾಸದಲ್ಲಿದ್ದಾಗ ಗೇಟ್ಟಿಸ್‌ಬರ್ಗ್‌ನ ಹೋಟೆಲ್ ಒಂದರ ಕೋಣೆಯಲ್ಲಿ ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟಿದ್ದಾರೆ.
ಸೇನೆಯ ನಿವೃತ್ತ ಸಿಬ್ಬಂದಿಯಾಗಿದ್ದ ಡಾನ್ ರಿವೇರಾ ಅವರು ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.
ಹೋಟೆಲ್ ಕೋಣೆಯಲ್ಲಿ ರಿವೇರಾ ಮೃತದೇಹ ಪತ್ತೆಯಾದಾಗ ಸ್ಥಳೀಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘‘ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಪರಿಶೀಲನೆ ವೇಳೆ ಅವರ ಕೋಣೆಯಲ್ಲಿ ಯಾವುದೇ ಅಪರಾಧ ಹಿನ್ನಲೆಯ ಅಥವಾ ಅನಾರೋಗ್ಯ ಹಿನ್ನೆಲೆಯ ಶಂಕಾಸ್ಪದ ಸಂಗತಿಗಳು ಕಂಡು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆಯೇ ಸತ್ಯಾಂಶ ತಿಳಿಯುವುದು’’ ಎಂದು ಪೊಲೀಸರು ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವೆಬ್‌ಸೈಟ್ ವರದಿ ಮಾಡಿದೆ.
ಡಾನ್ ರಿವೇರಾ ನಿಗೂಢ ಸಾವಿನ ಬಗ್ಗೆ ಹಲವು ಊಹಾಪೋಹಗಳು ಎದ್ದಿವೆ. ಹಾಂಟೆಡ್ (ದೆವ್ವ ಪೀಡಿತ) ಅನ್ನಾಬೆಲ್ಲೆ ಗೊಂಬೆಯಿಂದಲೇ ರಿವೇರಾ ಸತ್ತಿದ್ದಾರೆ ಎಂದು ಅನೇಕರು ಚರ್ಚಿಸುತ್ತಿದ್ದಾರೆ.
ಸೇನೆಯಿಂದ ನಿವೃತ್ತಿಯಾದ ನಂತರ ಪ್ಯಾರಾನಾರ್ಮಲ್ ಆ್ಯಕ್ಟಿವೀಟಿಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ರಿವೇರಾ ‘New England Society for Psychic Research‘ (NESPR) ಎಂಬ ಸಂಘಟನೆಯ ಜೊತೆ ಸೇರಿ ಭೂತ–ಪಿಶಾಚಿಗಳ ಇರುವಿಕೆ ಬಗ್ಗೆ, ಪ್ಯಾರಾನಾರ್ಮಲ್ ಚಟುವಟಿಕೆಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಸುತ್ತಾ ತಂಡದ ಸದಸ್ಯರ ಜೊತೆ ಅಲೆದಾಡುತ್ತಿದ್ದರು.
ಗಮನಿಸಬೇಕಾದ ಸಂಗತಿ ಎಂದರೆ NESPR ಸಂಘಟನೆ ಅಮೆರಿಕದ ಪ್ರಸಿದ್ಧ ‘ಪ್ಯಾರಾನಾರ್ಮಲ್ ಇನ್‌ವೆಸ್ಟಿಗೇಟರ್’ಗಳಾದ ‘ಎಡ್ ಮತ್ತು ಲೋರೈನ್ ವಾರೆನ್’ ದಂಪತಿ ಸ್ಥಾಪಿಸಿದ ಸಂಸ್ಥೆಯಾಗಿದೆ.
ಈ ಸಂಸ್ಥೆಯ ಬಳಿಯೇ ಮೂಲ ಶಾಪಗ್ರಸ್ಥ ಎಂದು ಹೇಳಲಾದ ‘ಅನ್ನಾಬೆಲ್ಲೆ’ ಗೊಂಬೆ ಇತ್ತು. ಇತ್ತೀಚೆಗೆ 'Devils on the Run' ಅಭಿಯಾನಕ್ಕೆಂದೇ ಸಿದ್ದಪಡಿಸಿದ್ದ ದೊಡ್ಡ ವಾಹನದಲ್ಲಿ ಗೊಂಬೆಯನ್ನು ಇರಿಸಲಾಗಿತ್ತು. ಡಾನ್ ರಿವೇರಾ ಆ ಗೊಂಬೆಯನ್ನು ನೋಡಿಕೊಳ್ಳುತ್ತಿದ್ದರು.
ಜುಲೈ 14 ರಂದು ಗೇಟ್ಟಿಸ್‌ಬರ್ಗ್‌ನ ಹೋಟೆಲ್ ಕೋಣೆಗೆ ‘ಅನ್ನಾಬೆಲ್ಲೆ’ ಗೊಂಬೆಯನ್ನು ಸ್ಥಳಾಂತರಿಸಲಾಗಿತ್ತು. ಅದಾದ ಒಂದು ದಿನದ ಬಳಿಕ ಡಾನ್ ರಿವೇರಾ ಅವರ ಮೃತದೇಹ ಅದೇ ಕೋಣೆಯಲ್ಲಿ ಪತ್ತೆಯಾಗಿತ್ತು. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾಗಿದ್ದರಿಂದ ಅನ್ನಾಬೆಲ್ಲೆ ಗೊಂಬೆಯೇ ರಿವೇರಾ ಸಾವಿಗೆ ಕಾರಣವಾಯಿತೇ? ಎಂದು ಅನ್ನಾಬೆಲ್ಲೆ ಕಥೆಗಳನ್ನು ನಂಬುವ ಅನೇಕರು ಹೇಳುತ್ತಿದ್ದಾರೆ.
ಇನ್ನೊಂದೆಡೆ ಡಾನ್ ರಿವೇರಾ ಸತ್ತ ಮೇಲೆ ಅನ್ನಾಬೆಲ್ಲೆ ಗೊಂಬೆ ಕಾಣುತ್ತಿಲ್ಲ ಎಂದೂ ಕೆಲ ವರದಿಗಳು ಹೇಳಿವೆ.
ಡಾನ್ ರಿವೇರಾ ಅವರು ನೆಟ್‌ಫ್ಲಿಕ್ಸ್‌ಗಾಗಿ ‘28 days haunted’ ಹಾಗೂ ‘Most Haunted Places’ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದರು.
ಆದರೆ, ಈ ಊಹಾಪೋಹಗಳಿಗೆ ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ ‘ಘೋಸ್ಟ್ ಹಂಟರ್ಸ್’ ಸರಣಿಯ ನಟ ಜೊಸನ್ ಹಾವೆಸ್ ಅವರು, ‘ಈ ರೀತಿಯ ಭೀತಿಗಳನ್ನು ಹರಡಬೇಡಿ, ರಿವೇರಾ ಜನರ ಬಗ್ಗೆ ಪ್ರೀತಿ, ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಅಜ್ಞಾನವನ್ನು ಹರಡುವುದರಿಂದ ಅವರ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ. ತನಿಖೆ ನಡೆದು ಸತ್ಯಾಂಶ ತಿಳಿಯಲಿ. ಸದ್ಯ ಅವರ ಒಳ್ಳೆಯ ಕೆಲಸಗಳನ್ನು ಸ್ಮರಿಸೋಣ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೂ ಕೆಲವರು, ಇದು ‘ಅನ್ನಾಬೆಲ್ಲೆ ಡಾಲ್‘ ಬಗ್ಗೆ ಪ್ರಚಾರದ ಗಿಮಿಕ್ ಆಗಿರಲೂಬಹುದು ಎಂದು ಕುಹಕವಾಡಿದ್ದಾರೆ.
‘ಪ್ಯಾರಾನಾರ್ಮಲ್ ಇನ್‌ವೆಸ್ಟಿಗೇಟರ್’ಗಳಾದ ‘ಎಡ್ ಮತ್ತು ಲೋರೈನ್ ವಾರೆನ್’ ದಂಪತಿ 1950 ರಿಂದ 2005ರವರೆಗೂ ಅಮೆರಿಕ ಸೇರಿದಂತೆ ಅನೇಕ ಕಡೆ ಅತಿಮಾನುಷ ಶಕ್ತಿಗಳ ಬಗ್ಗೆ ಸಂಶೋಧನೆ ನಡೆಸಿದ್ದರು.
ತಮ್ಮ ಸಂಶೋಧನೆ ವೇಳೆ 1970ರಲ್ಲಿ ಕಂಡುಕೊಂಡಿದ್ದ ‘ಅನ್ನಾಬೆಲ್ಲೆ ಡಾಲ್’ ಪ್ರಕರಣದ ಬಗ್ಗೆ ಅವರು ಸಾಕಷ್ಟು ಗಮನ ಹರಿಸಿದ್ದರು. ಇದಲ್ಲದೇ ಅವರು ಇನ್ನೂ ಅನೇಕ ಅತಿಮಾನುಷ ಶಕ್ತಿಗಳ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದರು. ಅನೇಕ ಪುಸ್ತಕಗಳನ್ನು ಬರೆದಿದ್ದರು.
ಇವರ ಪುಸ್ತಕಗಳ ಆಧಾರದ ಮೇಲೆ ಹಾಲಿವುಡ್‌ನಲ್ಲಿ ’ಕಾಂಜುರಿಂಗ್ ಯುನಿವರ್ಸ್’ ಎಂಬ ಹಾರರ್ ಸಿನಿಮಾಗಳ ಫ್ರಾಂಚೈಸಿ ಹುಟ್ಟುಕೊಂಡಿದ್ದು ವಾರ್ನರ್ ಬ್ರದರ್ ಫಿಕ್ಚರ್ಸ್ ನಿರ್ಮಾಣ ಸಂಸ್ಥೆ ಇದರ ಹೊಣೆ ಹೊತ್ತುಕೊಂಡಿದೆ.
2013ರಿಂದ ಇಲ್ಲಿವರೆಗೆ ’ಕಾಂಜುರಿಂಗ್ ಯುನಿವರ್ಸ್’ ನಲ್ಲಿ ಒಟ್ಟು 9 ಸಿನಿಮಾಗಳು ಬಂದಿವೆ. (The Conjuring–2013, Annabelle–2014, The Conjuring 2– 2016, Annabelle: Creation–2017, The Nun–2018, Annabelle Comes Home–2019, The Conjuring: The Devil Made Me Do It–2021, The Nun 2–2023, The conjuring last rites-2025 ) ಬೇರೆ ಬೇರೆ ನಿರ್ದೇಶಕರು ಈ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. The conjuring last rites ಇದೇ ವರ್ಷ ಸೆಪ್ಟೆಂಬರ್ 5ಕ್ಕೆ ಬಿಡುಗಡೆಯಾಗಲಿದೆ.
‘ಅನ್ನಾಬೆಲ್ಲೆ’ ಎಂಬುದು ಒಂದು ಬಗೆಯ ಗೊಂಬೆಯ ಹೆಸರಾಗಿದ್ದು ಅಮೆರಿಕದಲ್ಲಿ 1900–1950ರ ದಶಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.