
ನಟ ಧರ್ಮೇಂದ್ರ
ಮುಂಬೈ: ಹಿಂದಿ ಚಿತ್ರರಂಗದ ಜನಪ್ರಿಯ ನಟ, ‘ಹೀ ಮ್ಯಾನ್’ ಎಂದೇ ಖ್ಯಾತಿಯಾಗಿದ್ದ ಧರ್ಮೇಂದ್ರ (89) ಸೋಮವಾರ ದೀರ್ಘ ಕಾಲದ ಅಸ್ವಸ್ಥತೆಯ ನಂತರ ನಿಧನರಾದರು.
ಆರು ದಶಕಗಳಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಸಾಹಸಪ್ರಧಾನ ಚಿತ್ರಗಳಿಂದ ಜನಮನ ಗೆದ್ದಿದ್ದರು.
ಪಂಜಾಬ್‌ನಲ್ಲಿ 1935ರಲ್ಲಿ ಜನಿಸಿದ್ದ ಅವರು, ಬಿಜೆಪಿಯಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದು, ಬೀಕಾನೇರ್‌ನ ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು.
‘ದಿಲ್ ಭಿ ತೇರಾ ಹಮ್ ಭಿ ತೇರೆ’ ಸಿನಿಮಾ ಮೂಲಕ ಅಭಿನಯ ಲೋಕಕ್ಕೆ ಕಾಲಿಟ್ಟ ಅವರು, ನೂತನ್, ಮೀನಾ ಕುಮಾರಿ, ಶರ್ಮಿಳಾ ಟ್ಯಾಗೋರ್ ಅವರಂತಹ ನುರಿತ ನಟಿಯರೊಂದಿಗೆ ತೆರೆ ಹಂಚಿಕೊಂಡರು. ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಜೋಡಿ ಅತಿ ಹೆಚ್ಚು ಜನಪ್ರಿಯವಾಗಿತ್ತು. ಮೊದಲೇ ವಿವಾಹ ಬಂಧನದಲ್ಲಿದ್ದರೂ ಅವರು ಹೇಮಾ ಅವರನ್ನು ಮದುವೆಯಾದರು.
‘ಬಂದಿನಿ’, ‘ಅನುಪಮಾ’, ‘ಚುಪ್ಕೆ ಚುಪ್ಕೆ’, ‘ಶೋಲೆ’, ‘ಸೀತಾ ಔರ್ ಗೀತಾ’ ಅವರ ಜನಪ್ರಿಯ ಸಿನಿಮಾಗಳ ಸಾಲಿನಲ್ಲಿವೆ. ತಮ್ಮ ಮಕ್ಕಳೊಟ್ಟಿಗೆ ‘ಯಮ್ಲಾ ಪಗ್ಲಾ ದೀವಾನಾ’ ಎಂಬ ಸರಣಿ ಸಿನಿಮಾಗಳಲ್ಲಿಯೂ ಅವರು ನಟಿಸಿದರು.
ನಿರ್ಮಾಣ ಸಂಸ್ಥೆಯನ್ನೂ ಕಟ್ಟಿದ್ದ ಅವರಿಗೆ ಪದ್ಮಭೂಷಣ ಪ್ರಶಸ್ತಿಯೂ ಸಂದಿತ್ತು. ಮುಂದಿನ ತಿಂಗಳು ಅವರ ಅಭಿನಯದ ‘ಇಕ್ಕೀಸ್’ ಚಿತ್ರ ತೆರೆಕಾಣಲಿದೆ.
ಕಳೆದ ಕೆಲವು ದಿನಗಳಲ್ಲಿ ಅವರು ಪದೇಪದೇ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಪವನ್ ಹೌಸ್ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.