ADVERTISEMENT

ವರ್ಷಕ್ಕೆರಡು ಸಿನಿಮಾ ಧ್ರುವ ಸರ್ಜಾ ಅಭಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 0:07 IST
Last Updated 20 ಡಿಸೆಂಬರ್ 2024, 0:07 IST
ಧ್ರುವ ಸರ್ಜಾ, ಪ್ರೇಮ್‌, ಸುಪ್ರೀತ್‌ 
ಧ್ರುವ ಸರ್ಜಾ, ಪ್ರೇಮ್‌, ಸುಪ್ರೀತ್‌    

ಧ್ರುವ ಸರ್ಜಾ ನಟನೆಯ K.D ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ತಮ್ಮದೇ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾದ ಸಿದ್ಧತೆ ನಡೆಸಿರುವ ಅವರು ತಮ್ಮ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು... 

‘ನಟನಾಗಿ ‘ಮಾರ್ಟಿನ್‌’ ಚಿತ್ರದ ಬಳಿಕ ನನ್ನ ವೃತ್ತಿಯಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಪ್ರತಿ ಸಿನಿಮಾದಲ್ಲಿಯೂ ಒಂದಷ್ಟು ಕಲಿಯುತ್ತೇವೆ. ಜನ ಏನು ಇಷ್ಟವಾಯಿತು, ಏನು ಇಷ್ಟವಾಗಿಲ್ಲ ಎಂದು ತಿಳಿಸುತ್ತಾರೆ. ಪ್ರೇಕ್ಷಕರಿಗೆ ಇಷ್ಟವಾಗಿದ್ದನ್ನು ನೀಡುವುದು ನನ್ನ ಕರ್ತವ್ಯ. ಅದನ್ನು ನೀಡಲು ಪ್ರಯತ್ನಿಸುತ್ತೇನೆ. ನಾನು ಸ್ಕ್ರಿಪ್ಟ್‌ ಆಯ್ಕೆ ಮಾಡಿಕೊಳ್ಳುವಾಗ ಅಭಿಮಾನಿಗಳು ಇಷ್ಟಪಡುತ್ತಾರೆ ಎಂದು ಆಯ್ದುಕೊಳ್ಳುವುದಿಲ್ಲ. ನನ್ನನ್ನು ಇಷ್ಟಪಡದವರು ಇಷ್ಟಪಡುವಂತೆ ಮಾಡಬೇಕು ಎಂದು ಯತ್ನಿಸುತ್ತೇನೆ. ಹೀಗಾಗಿ ವಿಭಿನ್ನ ಪಾತ್ರಗಳನ್ನು ಯತ್ನಿಸುತ್ತೇನೆ’ ಎಂದು ತಮ್ಮ ಹಿಂದಿನ ಸಿನಿಮಾಗಳ ಕಲಿಕೆ ಕುರಿತು ವಿವರಿಸಿದರು.

‘ನನ್ನ ಚಿತ್ರದಲ್ಲಿ ಡೈಲಾಗ್‌ಗಳನ್ನು ನಿರೀಕ್ಷೆ ಮಾಡುತ್ತಾರೆ. ಫ್ಯಾಮಿಲಿ ಕೇಂದ್ರಿತ ವಿಷಯಗಳನ್ನು ಬಯಸುತ್ತಾರೆ. ಅಂಥ ಸ್ಕ್ರಿಪ್ಟ್‌ಗಳನ್ನು ಆಯ್ದುಕೊಳ್ಳುವೆ. ‘ಮಾರ್ಟಿನ್‌’ ತಂಡದ ಜೊತೆಗೆ ‘ರೈನೋ’ ಚಿತ್ರ ಮಾಡುವುದು ಖಚಿತ. ಆದರೆ ಸ್ವಲ್ಪ ತಡವಾಗಲಿದೆ. ಒಂದೆರಡು ಸಿನಿಮಾಗಳನ್ನು ಮುಗಿಸಿ ಆ ಸಿನಿಮಾ ಕೈಗೆತ್ತಿಕೊಳ್ಳುವೆ’ ಎಂದರು. ‘ಮಾರ್ಟಿನ್‌ ನಿರ್ದೇಶಕರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಾರಾ’ ಎಂಬ ಪ‍್ರಶ್ನೆಗೆ ಅವರು ಸ್ಪಷ್ಟವಾಗಿ ಉತ್ತರಿಸಲಿಲ್ಲ. 

ADVERTISEMENT

‘ಸುಮಾರು 50–60 ಕಥೆ ಕೇಳಿರುವೆ. ಅದರಲ್ಲಿ ಉತ್ತಮವಾಗಿದ್ದನ್ನು ಮಾಡುವೆ. ನಿರ್ದೇಶಕರು ಹೊಸಬರಾಗಿರಲಿ, ಹಳೆಬರಾಗಿರಲಿ. ಕಥೆ ಮನರಂಜಿಸುವಂತಿರಬೇಕು. ಮುಂದಿನ ವರ್ಷ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತವೆ. ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ಖಂಡಿತವಾಗಿ ಮಾಡುತ್ತೇನೆ. ನಮ್ಮದೇ ನಿರ್ಮಾಣ ಸಂಸ್ಥೆಯಿಂದ ಅರ್ಜುನ್‌ ಸರ್ಜಾ ಜೊತೆ ಒಂದು ಸಿನಿಮಾದ ಮಾತುಕತೆ ನಡೆಯುತ್ತಿದೆ. ಅದನ್ನು ಶೀಘ್ರದಲ್ಲಿ ಘೋಷಿಸುತ್ತೇವೆ. K.D ಬಿಡುಗಡೆಯಾಗುತ್ತಿದ್ದಂತೆ ಇನ್ನೊಂದು ಸಿನಿಮಾ ಸೆಟ್ಟೇರಿರುತ್ತದೆ ಎಂಬ ಭರವಸೆ ನೀಡುತ್ತೇನೆ. ಖಂಡಿತವಾಗಿ ನನ್ನಿಂದ ಒಳ್ಳೆ ಸಿನಿಮಾಗಳನ್ನು ನಿರೀಕ್ಷಿಸಬಹುದು’ ಎಂದು ತಮ್ಮ ಮುಂದಿನ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡರು. 

ಮುಂದಿನ ವರ್ಷ ಬಿಡುಗಡೆ

ಕಾಳಿದಾಸ (K.D) ಚಿತ್ರ ಕುರಿತು ಮಾಹಿತಿ ನೀಡಿದ ನಿರ್ದೇಶಕ ಪ್ರೇಮ್‌ ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು. ಮಾತಿನ ಭಾಗ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಡಿ.24ರಂದು ಚಿತ್ರದ ‘ಶಿವ ಶಿವ’ ಹಾಡು ಬಿಡುಗಡೆಯಾಗುತ್ತಿದೆ.

ತಾಂತ್ರಿಕವಾಗಿ ಅದ್ದೂರಿಯಾಗಿರುವ ಜನಪದ ಶೈಲಿಯ ಹಾಡಿದು. ಈ ಹಾಡಿನಲ್ಲಿ 300ಕ್ಕೂ ಅಧಿಕ ಟ್ರ್ಯಾಕ್‌ಗಳಿದ್ದು ವಿವಿಧ ದೇಶಗಳ ವಾದ್ಯಗಳನ್ನು ಬಳಸಿಕೊಂಡಿದ್ದೇವೆ. ಕಾಳಿದಾಸ ನಾಯಕನ ಹೆಸರಷ್ಟೆ. ಇದು ಯಾವ ವ್ಯಕ್ತಿಗೂ ಸಂಬಂಧಿಸಿದ ಕಥೆಯಲ್ಲ. 1970ರ ದಶಕದ ರೌಡಿಸಂ ಹಿನ್ನೆಲೆಯ ಕಥೆ. ಗ್ರಾಫಿಕ್ಸ್‌ ಕೆಲಸದಿಂದ ಚಿತ್ರ ವಿಳಂಬವಾಗಿದೆ. ದರ್ಶನ್‌ ಈಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರು ಒಪ್ಪಿಕೊಂಡು ಸಿನಿಮಾಗಳಿವೆ. ಜೊತೆಗೆ ‘K.D’ ಕೆಲಸಗಳು ಸಾಕಷ್ಟಿವೆ. ಹೀಗಾಗಿ ಸದ್ಯಕ್ಕೆ ಅವರ ಜೊತೆಗೆ ಚಿತ್ರ ಪ್ರಾರಂಭಿಸುವುದಿಲ್ಲ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.