ADVERTISEMENT

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರಾ ನಯನತಾರಾ? ನಿಯಮ ಪಾಲನೆ ಬಗ್ಗೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 16:53 IST
Last Updated 10 ಅಕ್ಟೋಬರ್ 2022, 16:53 IST
   

ತಮಿಳು ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಮಧ್ಯೆ ಉಯಿರ್ (ಜೀವನ) ಮತ್ತು ಉಲಗಮ್ (ಜಗತ್ತು) ಎಂಬ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವುದಾಗಿ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.

ನವಜಾತ ಶಿಶುಗಳ ಚಿತ್ರದೊಂದಿಗೆ ಶಿವನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಮದುವೆಯಾಗಿ ನಾಲ್ಕೇ ತಿಂಗಳಾಗಿರುವುದರಿಂದ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆಯೇ ಎಂಬ ಬಗ್ಗೆ ತೀವ್ರ ಊಹಾಪೋಹಗಳು ಎದ್ದಿವೆ. ಅಲ್ಲದೆ, ದಂಪತಿ ಕಾನೂನಿನ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ.

ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ ಅವರು ನಿಗದಿತ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ತಿಳಿಯಲು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು (ಡಿಎಂಎಸ್) ನಯನತಾರಾ ಮತ್ತು ಶಿವನ್ ಅವರಿಂದ ವಿವರಣೆಯನ್ನು ಪಡೆಯಲಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.

ADVERTISEMENT

ಡಿಸೆಂಬರ್ 2021ರಿಂದ ಭಾರತದಲ್ಲಿ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿರುವುದರಿಂದ ದಂಪತಿ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ನಯನತಾರಾ ಮತ್ತು ಶಿವನ್ ದಂಪತಿ ಈ ಬಗ್ಗೆ ಇನ್ನೂ ಹೇಳಿಕೆ ನೀಡಿಲ್ಲ.

ಡಿಸೆಂಬರ್ 2021ರಲ್ಲಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ, 2021 ಅನ್ನು ಸಂಸತ್ತು ಅಂಗೀಕರಿಸಿದ ನಂತರ ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಯಿತು. ಈ ಕಾಯಿದೆ ಜನವರಿ 25, 2022 ರಂದು ಜಾರಿಗೆ ಬಂದಿದೆ. ಈಗ ಕೇವಲ 'ಪರಹಿತಚಿಂತನೆಯ ಬಾಡಿಗೆ ತಾಯ್ತನ'ವನ್ನು ಅನುಮತಿಸಲಾಗಿದೆ. ಮಗುವನ್ನು ಹೆತ್ತು ಕೊಡುವ ತಾಯಿಯು ವೈದ್ಯಕೀಯ ವೆಚ್ಚವನ್ನು ಹೊರತುಪಡಿಸಿ ಯಾವುದೇ ಹಣವನ್ನು ಪಡೆಯುವಂತಿಲ್ಲ.

ಸೋಮವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುಬ್ರಮಣಿಯನ್, ನಿಯಮಗಳ ಪ್ರಕಾರ, 21 ರಿಂದ 35ವರ್ಷದೊಳಗಿನ ವಿವಾಹಿತ ಮಹಿಳೆ ಪೋಷಕರು ಅಥವಾ ಗಂಡನ ಅನುಮತಿಯೊಂದಿಗೆ ಅಂಡಾಣುವನ್ನು ದಾನ ಮಾಡಬಹುದು. ನಯನತಾರಾ ದಂಪತಿ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಡಿಎಂಎಸ್‌ಗೆ ಸೂಚಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.