ADVERTISEMENT

ಮನೆಯಲ್ಲೇ ಇರಿ, ಮನರಂಜನೆ ತಗೋತಿರಿ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 19:30 IST
Last Updated 19 ಏಪ್ರಿಲ್ 2020, 19:30 IST
ಬಾಲಿವುಡ್ ನಟಿ ಸನ್ನಿ ಲಿಯೋನ್
ಬಾಲಿವುಡ್ ನಟಿ ಸನ್ನಿ ಲಿಯೋನ್   

ಬಾಲಿವುಡ್ ನಿರ್ದೇಶಕ ಒನಿರ್, ನಟಿ ಸನ್ನಿ ಲಿಯೋನಿ, ಲೇಖಕಿ ತಾಹಿರಾ ಕಶ್ಯಪ್ ಅವರು ಈಗಿನ ಲಾಕ್‌ಡೌನ್‌ ಅವಧಿಯಲ್ಲಿ ತಮ್ಮ ಸೃಜನಶೀಲತೆ ಬತ್ತದಂತೆ ನೋಡಿಕೊಳ್ಳಲು ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲೇ ಕುಳಿತು ಕಿರುಚಿತ್ರ ಮಾಡುವುದು, ವೆಬ್ ಕಾರ್ಯಕ್ರಮ ಸಿದ್ಧಪಡಿಸುವುದು, ಕಥೆಗಳನ್ನು ಹೇಳುವುದು... ಇಂತಹ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ.

ಸಿನಿಮಾ ಮಂದಿರಗಳ ಬಾಗಿಲು ಮುಚ್ಚಿರುವ ಕಾರಣ, ಆನ್‌ಲೈನ್‌ ಮೂಲಕ ಮನರಂಜನಾ ಕಾರ್ಯಕ್ರಮ ಬಿತ್ತರಿಸುವುದು ಹೆಚ್ಚಾಗಿದೆ. ನಟ–ನಟಿಯರು ತಮ್ಮ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ನೇರವಾಗಿ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಸಂಗೀತ ನಿರ್ದೇಶಕರು ಆನ್‌ಲೈನ್‌ ಮೂಲಕವೇ ಸಂಗೀತ ಕಾರ್ಯಕ್ರಮ ನಡೆಸಿದ್ದೂ ಇದೆ. ಸನ್ನಿ ಅವರಂತಹ ಕೆಲವರು ಆನ್‌ಲೈನ್‌ ಮೂಲಕವೇ ಹರಟೆ ಕಾರ್ಯಕ್ರಮ ಕೂಡ ಆಯೋಜಿಸಿದ್ದಾರೆ.

ಆನ್‌ಲೈನ್‌ ಮೂಲಕ ವಿಡಿಯೊ ಕಾರ್ಯಕ್ರಮ ಶುರು ಮಾಡಿದ ಮೊದಲಿಗರ ಸಾಲಿನಲ್ಲಿ ತಾಹಿರಾ ಅವರೂ ಒಬ್ಬರು. ‘ದಿ ಲಾಕ್‌ಡೌನ್‌ ಟೇಲ್ಸ್‌’ ಹೆಸರಿನಲ್ಲಿ ಅವರು ಒಂದು ಕಾರ್ಯಕ್ರಮವನ್ನು ಇನ್‌ಸ್ಟಾಗ್ರಾಂ ಮೂಲಕ ಶುರು ಮಾಡಿದರು. ಇದರಲ್ಲಿ ಅವರು ಸಣ್ಣ ಸಣ್ಣ ಕಥೆಗಳನ್ನು ಹೇಳುತ್ತಿದ್ದರು. ಲಾಕ್‌ಡೌನ್‌ನ ಬಿಸಿ ಅನುಭವಿಸಿದ ಜನರ ಕಾಲ್ಪನಿಕ ಕಥೆಗಳನ್ನು, ಕಾಲ್ಪನಿಕ ಪಾತ್ರಗಳ ಮೂಲಕ ತಾಹಿರಾ ಅವರು ಹೇಳಿದ್ದಾರೆ.

ADVERTISEMENT

ಡಿಜಿಟಲ್ ಮಾಧ್ಯಮದ ಮೂಲಕ ಕಥೆಗಳನ್ನು ಹೇಳುವ ಆಲೋಚನೆ ಬಂದಿದ್ದು ಅತ್ಯಂತ ಸಹಜವಾಗಿತ್ತು ಎನ್ನುತ್ತಾರೆ ತಾಹಿರಾ. ‘ನಾನು ನನ್ನಲ್ಲಿನ ಸೃಜನಶೀಲತೆಯನ್ನು ಹೊರಗೆ ತರಬೇಕಿತ್ತು’ ಎಂದು ತಾಹಿರಾ ಹೇಳುತ್ತಾರೆ.

‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಖ್ಯಾತಿಯ ನಟಿ ಶ್ರೇಯಾ ಧನ್ವಂತರಿ ಅವರು ‘ಅ ವೈರಲ್ ವೆಡ್ಡಿಂಗ್: ಮೇಡ್ ಇನ್ ಲಾಕ್‌ಡೌನ್‌’ ಎನ್ನುವ ಮಿನಿ ಸರಣಿ ನಿರ್ದೇಶಿಸುತ್ತಿದ್ದಾರೆ. ಈ ಸರಣಿಯನ್ನು ಅವರು ಮನೆಯಿಂದಲೇ ಸಿದ್ಧಪಡಿಸಿದ್ದಾರೆ ಎಂಬುದು ವಿಶೇಷ! ಲಾಕ್‌ಡೌನ್‌ ಕಾರಣಕ್ಕೆ ತನ್ನ ಮದುವೆಯನ್ನು ರದ್ದು ಮಾಡಲು ನಿರಾಕರಿಸುವ ವ್ಯಕ್ತಿಯ ಕಥೆ ಇದರಲ್ಲಿ ಇದೆ.

‘ಈಗ ಪರಿಸ್ಥಿತಿಯ ಬಗ್ಗೆಯೇ ಏನಾದರೂ ಮಾಡಬೇಕು ಎಂದು ನನಗೆ ಅನಿಸಿತು. ಇಡೀ ವಿಶ್ವ ಹೀಗೆ ನಿಲುಗಡೆಯ ಹಂತಕ್ಕೆ ಬರುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಈಗಿನ ಪರಿಸ್ಥಿತಿಯ ಬಗ್ಗೆ ಮನರಂಜನೆಯ ಧಾಟಿಯಲ್ಲಿ ಅವಲೋಕನ ನಡೆಸುವ ಪ್ರಯತ್ನ ಈ ಮಿನಿ ಸರಣಿ’ ಎಂದು ಶ್ರೇಯಾ ಹೇಳಿದ್ದಾರೆ.

ಮನೆಯಲ್ಲೇ ಚಿತ್ರೀಕರಿಸುವ ಮಿನಿ ಸರಣಿಗಳು ಮುಂದಿನ ದಿನಗಳಲ್ಲಿ ಜನಪ್ರಿಯ ಆಗಬಹುದು ಎನ್ನುವ ಭಾವನೆ ಅವರದ್ದು.

ಒನಿರ್ ಅವರು ‘ಮನೆಯಿಂದಲೇ ಕಿರುಚಿತ್ರ ಸಿದ್ಧಪಡಿಸಿ ಕಳುಹಿಸಿ’ ಎಂದು ಉತ್ಸಾಹಿ ನಿರ್ದೇಶಕರಿಗೆ ಆಹ್ವಾನ ನೀಡಿದ್ದಾರೆ. ಅವರು ಕಳುಹಿಸುವ ಕಿರುಚಿತ್ರಗಳ ಗುಣಮಟ್ಟ ಹೇಗಿದೆ ಎಂಬುದನ್ನು ಒನಿರ್ ಮತ್ತು ಸಂಜಯ್ ಸೂರಿ ಪರೀಕ್ಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.