ADVERTISEMENT

ಸಂದರ್ಶನ: ದೂರ ತೀರ ಯಾನ.. ಮಂಸೋರೆ ಹೊಸ ಯಾನ

ಪ್ರಜಾವಾಣಿಯೊಂದಿಗೆ ನಿರ್ದೇಶಕ ಮಂಸೋರೆ ಅವರ ಸಂದರ್ಶನ ದೂರ ತೀರ ಯಾನ ಸಿನಿಮಾ ಕುರಿತು

ಅಭಿಲಾಷ್ ಪಿ.ಎಸ್‌.
Published 11 ಜುಲೈ 2025, 0:05 IST
Last Updated 11 ಜುಲೈ 2025, 0:05 IST
<div class="paragraphs"><p>ಮಂಸೋರೆ, ವಿಜಯ್, ಪ್ರಿಯಾಂಕ್</p></div>

ಮಂಸೋರೆ, ವಿಜಯ್, ಪ್ರಿಯಾಂಕ್

   

‘19.20.21’ ಸಿನಿಮಾ ಬಳಿಕ ನಿರ್ದೇಶಕ ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಇಂದು(ಜುಲೈ 11) ತೆರೆಕಂಡಿದೆ. ಹರಿವು, ನಾತಿಚರಾಮಿ, ಆ್ಯಕ್ಟ್‌ 1978 ಹೀಗೆ ಭಿನ್ನ ಭಿನ್ನ ಮಾದರಿಯ ಸಿನಿಮಾಗಳಿಂದಲೇ ಗುರುತಿಸಿಕೊಂಡಿರುವ ಮಂಸೋರೆ ಹೊಸ ಪ್ರಯತ್ನವಿದು. ತಮ್ಮ ಸಿಗ್ನೇಚರ್‌ ಅಂಶಗಳ ಜೊತೆಗೆ ನವಪೀಳಿಗೆಯ ಪ್ರೇಮಕಥೆಯೊಂದನ್ನು ಹೇಳುತ್ತಿರುವ ಮಂಸೋರೆ ಹೊಸ ಹೆಜ್ಜೆ ಹಿಂದಿರುವ ಕಾರಣಗಳು ಇಲ್ಲಿವೆ..

* ಸಿನಿಮಾ ಮಾದರಿ ಬದಲಾವಣೆಯ ಆಲೋಚನೆ ಬಂದಿದ್ದು ಏತಕ್ಕಾಗಿ?

ADVERTISEMENT

ನಾನು ಇಲ್ಲಿಯವರೆಗೆ ಮಾಡಿದ ಸಿನಿಮಾಗಳಲ್ಲಿ ಬೇರೆ ಬೇರೆ ಜಾನರ್‌ಗಳಿತ್ತು. ಈ ಸಿನಿಮಾಗಳಲ್ಲಿ ಕಥೆಗಳು ಬದಲಾದರೂ, ಕಥೆ ಹೇಳುವ ರೀತಿ ಭಿನ್ನವಾಗಿದ್ದರೂ ಪ್ರಸ್ತುತಿಯಲ್ಲಿ ಕೆಲವು ಸಾಮ್ಯತೆಗಳು ಇದ್ದವು. ಈ ಮಾದರಿಯ ಸಿನಿಮಾಗಳೂ ಒಟಿಟಿ, ಚಿತ್ರೋತ್ಸವಗಳ ಪ್ರೇಕ್ಷಕರಿಗೆ ಬಹುಬೇಗನೆ ಕನೆಕ್ಟ್‌ ಆಯಿತು. ಚಿತ್ರಮಂದಿರಗಳಲ್ಲಿ ಇಂತಹ ಸಿನಿಮಾಗಳನ್ನು ನೋಡಲು ಜನರು ಇನ್ನೂ ಮನಸ್ಸು ಮಾಡುತ್ತಿಲ್ಲ. ಅವರನ್ನು ನಾವಿನ್ನೂ ಈ ಮಾದರಿಯ ಸಿನಿಮಾ ನೋಡಿಸಲು ತಯಾರು ಮಾಡಿಲ್ಲ.

ಕಳೆದ ಕೆಲವು ವರ್ಷಗಳಲ್ಲಿ ಚಿತ್ರಮಂದಿರಗಳಲ್ಲಿ ನೋಡಬೇಕಾದ ಸಿನಿಮಾ, ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ ಎಂಬ ವಿಭಾಗ ಪ್ರಾರಂಭವಾಯಿತು. ಇದು ಬೆಳೆದು ಒಟಿಟಿ–ಚಿತ್ರಮಂದಿರಗಳ ಅಂತರ ಹೆಚ್ಚಿಸಿದೆ. ಹೆಚ್ಚಿನ ಸಿನಿಮಾಗಳನ್ನು ಒಟಿಟಿಗೆಂದೇ ತಯಾರು ಮಾಡಿದ ಕಾರಣ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಇಳಿಯಿತು. ಒಟಿಟಿಯವರು ಸಿನಿಮಾಗಳನ್ನು ಹಲವು ಷರತ್ತುಗಳ ಮೂಲಕ ನಿಯಂತ್ರಣ ಮಾಡಲು ಪ್ರಾರಂಭಿಸಿದರು.

ಈಗ ಸಿನಿಮಾ ಎಂದರೆ ಮೊದಲು ವಹಿವಾಟು. ನಂತರ ಕಲೆ, ಸಿದ್ಧಾಂತ ಎಲ್ಲವೂ ಬರುತ್ತದೆ. ಕ್ಯಾಮೆರಾ ಎತ್ತಿದ ತಕ್ಷಣ ಹಣ ಬೇಕೇ ಬೇಕು. ಆ ಹಣ ವಾಪಸ್‌ ಪಡೆಯಲು ಈ ಹಿಂದೆ ಹಲವು ಮಾರ್ಗಗಳಿದ್ದವು. ಚಿತ್ರೋತ್ಸವಗಳಿಗೆ ಸಿನಿಮಾ ಹೋದರೆ ಸಬ್ಸಿಡಿ ಬರುತ್ತಿತ್ತು, ಪ್ರಶಸ್ತಿಗಳಲ್ಲಿ ಹಣ ಬರುತ್ತಿತ್ತು. ಚಿತ್ರಮಂದಿರಗಳ ಮೇಲೆಯೇ ಅವಲಂಬಿತವಾಗುವ ಪ್ರಮೇಯವಿರುತ್ತಿರಲಿಲ್ಲ. ಈಗ ಸಬ್ಸಿಡಿ ವಿಳಂಬವಾಗುತ್ತಿದೆ. ಈಗ ಸರ್ಕಾರ ನೀಡುತ್ತಿರುವ ಸಬ್ಸಿಡಿಯಲ್ಲಿ ಸಿನಿಮಾ ಮಾಡುವುದೇ ಕಷ್ಟವಿದೆ. ಈ ಸಮಯದಲ್ಲಿ ಸಿನಿಮಾ ಮಾಡಲೇಬೇಕು, ಆದರೆ ಬೇರೆ ರೀತಿಯಲ್ಲಿ ಹಣ ಮರುಪಡೆಯುವ ಆಯ್ಕೆ ಇಲ್ಲವೆಂದಾಗ ನಾನು ಮಾಡಿದ ತಪ್ಪಿನ ಅರಿವಾಯಿತು. ಚಿತ್ರಮಂದಿರಗಳಲ್ಲಿ ಜನರನ್ನು ಕೂರಿಸುವ ಮಾದರಿಗಿಂತ ಅವರಿಗೆ ನನ್ನ ಸಿಗ್ನೇಚರ್‌ ಸ್ಟೈಲ್‌ ತೋರಿಸುತ್ತಿದ್ದೆ. ‘ಇದು ನೋಡಿ’ ಎಂದು ಹೇಳಿದಂತಿತ್ತು. ‘19.20.21’ ಬಳಿಕ ಆದ ಅನುಭವಗಳಿವು. ಆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಒಗ್ಗಿರುವ ಮಾದರಿಯಲ್ಲಿ ನನ್ನ ಕಥೆಗಳನ್ನು ಹೇಳಿದರೆ ಪ್ರೇಕ್ಷಕರನ್ನೇ ಹಣ ಮರುಪಡೆಯುವ ಮೊದಲ ಆಯ್ಕೆಯಾಗಿಸಬಹುದು ಎಂದು ಅರಿತೆ. ಹಾಡುಗಳು, ಕಲರ್‌ಫುಲ್‌ ಆಗಿರುವ ಛಾಯಾಚಿತ್ರಗ್ರಹಣ ಮುಂತಾದ ಅಂಶಗಳನ್ನು ಸೇರಿಸಿಕೊಂಡು ಹೇಳಿದರೆ ಅವರು ಬೇಗ ಕನೆಕ್ಟ್‌ ಆಗುತ್ತಾರೆ ಎಂದರಿತೆ. 

*ಈ ಆಲೋಚನೆ ಹಿಂದಿರುವ ಸೂತ್ರವೇನು?

ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪೋಣ ಎಂದು ಈ ಕಥೆ ಆರಿಸಿಕೊಂಡಿದ್ದೆ. ಕಥೆ ಹೇಳುವ ರೀತಿಯಲ್ಲಿ ಹೊಸತನ ರೂಢಿಸಿಕೊಳ್ಳಬೇಕು ಎಂದು ಒಂದು ವರ್ಷ ಅವಧಿ ತೆಗೆದುಕೊಂಡೆ.

ಈ ಮಾದರಿಯಲ್ಲಿ ನನ್ನ ಕಥೆಗಳನ್ನು ಹೇಳಿ ಪ್ರೇಕ್ಷಕರ ಬ್ಯಾಂಕಿಂಗ್‌ ಮಾಡಿಕೊಂಡರೆ ದೀರ್ಘಾವಧಿಯವರೆಗೆ ಸಿನಿಮಾ ಮಾಡಬಹುದು. ಒಟಿಟಿಯ ಕಾರ್ಪೊರೇಟ್‌ ನಿಯಮಗಳು ಯಾವಾಗ ಬೇಕಾದರೂ ಬದಲಾಗಬಹುದು, ಸರ್ಕಾರ ಬದಲಾದ ಸಂದರ್ಭದಲ್ಲಿ ಸಬ್ಸಿಡಿ ಏನಾಗುತ್ತದೋ ತಿಳಿದಿಲ್ಲ.

ಚಿತ್ರಮಂದಿರಗಳನ್ನು, ಪ್ರೇಕ್ಷಕರನ್ನೇ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಿದಾಗ ಅವರು ಬ್ಯಾಂಕ್‌ ರೀತಿ ಇರುತ್ತಾರೆ. ಸ್ಟಾರ್‌ ಸಿನಿಮಾಗಳು ನಡೆಯುವುದೇ ಈ ಬ್ರ್ಯಾಂಡಿಂಗ್‌ ಮೇಲೆ. ಸ್ಟಾರ್‌ ಸಿನಿಮಾ ರಿಲೀಸ್‌ ಆಗುತ್ತಿದೆ ಎಂದಾಗ ಕಥೆ ನೋಡಿ ಪ್ರೇಕ್ಷಕರು ಬರುವುದಿಲ್ಲ. ನಿರ್ದೇಶಕ, ಹೀರೊ, ನಿರ್ಮಾಣ ಸಂಸ್ಥೆಗಳನ್ನು ನೋಡಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಮೊದಲರೆಡು ದಿನಗಳಲ್ಲೇ ಇಂತಹ ಚಿತ್ರಗಳ ಹೂಡಿಕೆ ಮರಳಿಬರುತ್ತದೆ. ಸಿನಿಮಾ ಚೆನ್ನಾಗಿದ್ದರೆ ಮುಂದೆ ಬರುವುದೆಲ್ಲವೂ ಲಾಭ. ಈ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ನನ್ನ ಮಾದರಿಯನ್ನು ಬದಲಾಯಿಸಿಕೊಂಡಿದ್ದೇನೆ. ಇಲ್ಲಿ ಪೂರ್ತಿಯಾಗಿ ಮಂಸೋರೆ ಬದಲಾಗಿಲ್ಲ. ನನ್ನ ಸಿಗ್ನೇಚರ್‌ ಬಿಟ್ಟುಕೊಡುತ್ತಿಲ್ಲ. ನನ್ನ ಆಲೋಚನೆಗಳನ್ನು ಇಟ್ಟುಕೊಂಡು ಈಗಿನ ಹರಿವಿನಲ್ಲಿ ಸಾಗಲಿದ್ದೇನೆ. 

*‘ದೂರ ತೀರ ಯಾನ’ದ ವಿಶೇಷವೇನು?

ಮೊದಲು ಸಿನಿಮಾ ನೋಡಲು ಬರುತ್ತಿದ್ದರು. ‘ಥಿಯೇಟ್ರಿಕಲ್‌ ಎಕ್ಸ್‌ಪೀರಿಯನ್ಸ್‌’ ಎಂಬ ಪದವಿರಲಿಲ್ಲ. ಮೊಬೈಲ್‌, ಟಿವಿ, ಹೋಂಥಿಯೇಟರ್‌ ಬಂದ ಮೇಲೆ ಈ ಪದ ಚಾಲ್ತಿಗೆ ಬಂದಿದೆ. ಇದು ಬಂದ ಬಳಿಕ ಸಿನಿಮಾಗಳೆಂದರೆ ಅದ್ಧೂರಿಯಾಗಿರಬೇಕು, ಸೆಟ್‌ ಹಾಕಬೇಕು, ಎಲಿವೇಷನ್ಸ್‌ ಬೇಕು ಎಂಬಿತ್ಯಾದಿ ಮಾತುಗಳಿವೆ. ಆದರೆ ನಾನು ಈ ಹಾದಿ ಹಿಡಿಯದೆ ಪ್ರೇಕ್ಷಕರಿಗೆ ಬೇರೆ ಮಾದರಿಯ ‘ಥಿಯೇಟ್ರಿಕಲ್‌ ಎಕ್ಸ್‌ಪೀರಿಯನ್ಸ್‌’ ನೀಡುತ್ತಿದ್ದೇನೆ. ಇದೊಂದು ಪ್ರಯೋಗ. ಈ ಸಿನಿಮಾದಲ್ಲಿರುವ ಪಯಣವೇ ಪ್ರೇಕ್ಷಕರಿಗೆ ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ. ಪ್ರಕೃತಿ ಎನ್ನುವುದು ಪ್ರತಿಯೊಬ್ಬನನ್ನು ಪ್ರತಿ ಬಾರಿಯೂ ಸೆಳೆಯುತ್ತದೆ. ಮುಂಗಾರು ಮಳೆ ಹಿಟ್‌ ಆಗಿರುವುದಕ್ಕೆ ಇದೂ ಒಂದು ಕಾರಣ. ಜೋಗಕ್ಕೆ ನೂರು ಬಾರಿ ಹೋದರೂ ಅದು ಅದ್ಭುತವಾಗಿಯೇ ಕಾಣುತ್ತದೆ. ಈ ಪ್ರಕೃತಿಯನ್ನೇ ವೇದಿಕೆಯಾಗಿಟ್ಟುಕೊಂಡು ಹುಡುಗ–ಹುಡುಗಿಯ ಪಯಣವನ್ನು ಕಟ್ಟಿಕೊಡುತ್ತಾ, ಮನಸ್ಸಿನ ಒಳಗೆ ಕುಳಿತುಕೊಳ್ಳುವ ಸಂಗೀತವನ್ನು ಬಳಸಿಕೊಂಡು ಈ ಸಿನಿಮಾ ಹೆಣೆದಿದ್ದೇನೆ. ಪ್ರಕೃತಿಯನ್ನು ಸಂಗೀತದ ಜೊತೆ ಸಮ್ಮಿಲನಗೊಳಿಸಿ ಮ್ಯಾಜಿಕ್‌ಗಾಗಿ ಕಾಯುತ್ತಿದ್ದೇನೆ. 

*ಹೊಸ ಮಾದರಿಯಲ್ಲಿ ಮಂಸೋರೆ ಎದುರಿಸಿದ ಸವಾಲುಗಳು?

ಇವತ್ತಿನ ಪೀಳಿಗೆಯ ಕಲಾವಿದರ ಜೊತೆ ಕೆಲಸ ಮಾಡುವುದೇ ನನ್ನ ಸವಾಲಾಗಿತ್ತು. ನನ್ನ ಜೀವನಾನುಭವ ಬೇರೆ, ಅವರ ಜೀವನಾನುಭವ ಬೇರೆ. ಅವರನ್ನು ನನ್ನ ಹಾದಿಯಲ್ಲಿ ಹೆಜ್ಜೆ ಹಾಕುವಂತೆ ಮಾಡಿದರೆ ಮತ್ತೆ ನನ್ನ ಹಳೆಯ ಸಿನಿಮಾಗಳ ಛಾಪು ಇರುತ್ತದೆ. ಬದಲಾಗಿ ನಾನು ಅವರ ಹಾದಿಯಲ್ಲಿ ಹೆಜ್ಜೆ ಹಾಕಬೇಕಿತ್ತು. ನನ್ನತನವನ್ನು ಕಳೆದುಕೊಳ್ಳುತ್ತಾ ನವಪೀಳಿಗೆಯ ಪ್ರೇಮಕಥೆ ಹೇಳಿದ್ದೇನೆ. ಈಗಿನ ಪೀಳಿಗೆಗೆ ಈ ಸಿನಿಮಾ ನಮ್ಮದು ಎನ್ನಿಸಬೇಕು. ಇದರ ಜೊತೆಗೆ ಬರವಣಿಗೆಯೂ ಸವಾಲಿನಿಂದಿತ್ತು. ಕತೆಯಲ್ಲಿ ಖಳನಾಯಕನಿಲ್ಲ. ನಾಯಕ–ಖಳನಾಯಕನಿದ್ದರೆ ಬರವಣಿಗೆ ಬಹಳ ಸುಲಭ. ಖಳನಾಯಕನಿಗೂ ಮೀರಿದ ಸಮಸ್ಯೆಗಳು ಇವೆ. ಈ ಸಮಸ್ಯೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುತ್ತಿರುತ್ತದೆ. ಈ ರೀತಿಯ ಕ್ಲಿಷ್ಟವಾದ ಸೂಕ್ಷ್ಮ ಆಲೋಚನೆಗಳನ್ನು ಬರವಣಿಗೆಯಲ್ಲಿ ತಂದು ದೃಶ್ಯವಾಗಿ ರೂಪಿಸುವುದು ಬಹು ದೊಡ್ಡ ಸವಾಲಾಗಿತ್ತು. ಇದರಲ್ಲಿ ಸ್ವಲ್ಪ ಎಡವಿದರೂ ಬಹಳ ಗಂಭೀರ ಸಿನಿಮಾವಾಗುತ್ತಿತ್ತು. ನನಗೆ ಇನ್ನೊಂದು ಗಂಭೀರ ಸಿನಿಮಾ ಆಗಬಾರದು ಎನ್ನುವುದಿತ್ತು. ಮನಸ್ಸಿಗೆ ಮುದ ಕೊಡುವ ಸಿನಿಮಾವಾಗಬೇಕು ಎನ್ನುವುದು ನನ್ನ ನಿರ್ಧಾರವಾಗಿತ್ತು. 

*ಟ್ರಾವೆಲ್‌ ಸಿನಿಮಾಗಳಲ್ಲಿ ಛಾಯಾಚಿತ್ರಗ್ರಹಣ, ಸಂಗೀತ ಪ್ರಮುಖ. ಇದರ ಬಗ್ಗೆ...

ನಾನು ಮೊದಲು ಹಿರಿಯ ಛಾಯಾಚಿತ್ರಗ್ರಾಹಕರಾದ ಶೇಖರ್‌ಚಂದ್ರ ಅವರನ್ನು ಆಯ್ಕೆ ಮಾಡಿದೆ. ಇದರಿಂದ ನಾನು ಧೈರ್ಯವಾಗಿ ಕೆಲಸ ಮಾಡಿದೆ, ನನ್ನ ಕೆಲಸವೂ ಹಗುರವಾಯಿತು. ಬೆಂಗಳೂರಿನಿಂದ ಗೋವಾದವರೆಗಿನ ಪಯಣವನ್ನು ನಾವು ಸೆರೆಹಿಡಿದಿದ್ದೇವೆ. ಈ ಸಂದರ್ಭದಲ್ಲಿ ಸಮಸ್ಯೆಗಳು ನೂರಾರು. ಊಹಿಸಲಸಾಧ್ಯವಾದ ವಾತಾವರಣಗಳನ್ನು ನಾವು ಅನುಭವಿಸಿದೆವು. ಸುಮಾರು 65 ಜನ ಸುಮಾರು 22 ದಿನ ಸಂಚಾರಿ ಜೀವನದಲ್ಲಿದ್ದೆವು. ಏಕಾಏಕಿ ಮಳೆ ಬರುತ್ತಿತ್ತು, ಮಳೆ ಜೊತೆಗೆ ಬಿಸಿಲು. ಹೀಗಿರುವಾಗ ತಾಂತ್ರಿಕವಾಗಿಯೂ ಬಹಳಷ್ಟು ಸಮಸ್ಯೆಗಳು ಎದುರಾದವು. ಇನ್ನೇನು ರೋಲಿಂಗ್‌ ಎನ್ನುವಾಗ ಏಕಾಏಕಿ ಮೋಡಬರುತ್ತಿತ್ತು. ಮತ್ತೆ ಲೈಟಿಂಗ್‌ ಸರಿಪಡಿಸಿಕೊಳ್ಳುವಾಗ ಬಿಸಿಲು. ಇವುಗಳೆಲ್ಲವನ್ನೂ ಶೇಖರ್‌ಚಂದ್ರ ಅವರು ನಿಭಾಯಿಸಿ ಕಥೆಯನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ.

ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಈ ದೃಶ್ಯಕಾವ್ಯಕ್ಕೆ ಮ್ಯಾಜಿಕ್‌ನಂತೆ ಕೆಲಸ ಮಾಡಲಿದೆ. ಸಿನಿಮಾದ ಹಾಡುಗಳನ್ನು ಕೇಳಿದರೇ ಸಿನಿಮಾ ಏನನ್ನುವುದು ತಿಳಿಯುತ್ತದೆ. 

*ಇದೇ ಹರಿವಿನಲ್ಲಿರುತ್ತೀರೋ ಅಥವಾ ಆಗಾಗ ತೀರಕ್ಕೆ ಬರುತ್ತೀರೊ?

ನನಗೆ ಒಂದೇ ಮಾದರಿಯ ಸಿನಿಮಾ ಮಾಡಲು ಇಷ್ಟವಿಲ್ಲ. ನನಗೀಗ ಇರುವ ಪ್ರೇಕ್ಷಕರ ಬ್ಯಾಂಕ್‌ ಅನ್ನು ಸದಾ ಕುತೂಹಲದಲ್ಲಿ ಇರಿಸಿದ್ದೇನೆ. ‘ಹರಿವು’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದ ನಂತರ, ಈ ಮಾದರಿಯ ಸಿನಿಮಾ ಮಾಡಿದರೆ ಪ್ರಶಸ್ತಿ ಬರುತ್ತದೆ ಎಂದು ನಾನು ಅದನ್ನೇ ಅನುಸರಿಸಿಲ್ಲ. ಬೇರೆ ಮಾದರಿಯ ಸಿನಿಮಾ(ನಾತಿಚರಾಮಿ) ಮಾಡಿದೆ. ಅದಕ್ಕೂ ಪ್ರಶಸ್ತಿಗಳು ಬಂದವು. ಜೀವನ ಎನ್ನುವುದೇ ಅನಿರೀಕ್ಷಿತ. ಈ ಜೀವನದ ರೀತಿಯೇ ಸಿನಿಮಾವಿರಬೇಕು. ಮಂಸೋರೆ ಗಂಭೀರವಾದ ಸಿನಿಮಾಗಳನ್ನೇ ಮಾಡುತ್ತಾರೆ ಎನ್ನುವ ಸಂದರ್ಭದಲ್ಲಿ ‘ದೂರ ತೀರ ಯಾನ’ ಘೋಷಿಸಿದ್ದೆ. ಈ ಸಿನಿಮಾ ಬಿಡುಗಡೆಯಾಗಿ ಒಂದೆರಡು ವಾರ ಪ್ರಚಾರದ ಬಳಿಕ ನಾನು ಮತ್ತೆ ಶೂನ್ಯ. ಮುಂದೆ ಏನು ಎಂದು ನನಗೆ ತಿಳಿದಿಲ್ಲ. ಸಿನಿಮಾ ಗೆಲ್ಲಲಿ ಅಥವಾ ಸೋಲಲಿ ಇದೇ ಮಾದರಿಯನ್ನು ಪುನರಾವರ್ತಿಸುವುದಿಲ್ಲ. ಕಥೆಗಳ ಗುಚ್ಛ ನನ್ನಲ್ಲಿದೆ. ಆದರೆ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಹೇಗೆ ಹೇಳಬೇಕು ಎನ್ನುವುದನ್ನು ಯೋಚನೆ ಮಾಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.