ADVERTISEMENT

ಮನುಷ್ಯ ಟ್ರಿಗರ್‌ ಆಗಬೇಕು ಕಣ್ರೀ...: ವಿಕ್ಕಿ ವರುಣ್‌ ಸಂದರ್ಶನ

ಶರತ್‌ ಹೆಗ್ಡೆ
Published 28 ಏಪ್ರಿಲ್ 2022, 19:30 IST
Last Updated 28 ಏಪ್ರಿಲ್ 2022, 19:30 IST
ವಿಕ್ಕಿ ವರುಣ್‌
ವಿಕ್ಕಿ ವರುಣ್‌   

ಸಿನಿಮಾ ಹಿನ್ನೆಲೆ ಏನು?

ನಮ್ಮದು ರೈತಾಪಿ ಕುಟುಂಬ. ಮನೆಯಲ್ಲಿ ಎಲ್ಲರೂ ಸಿನಿಮಾ ‘ಭಕ್ತರು’. ಯಾವುದೇ ಹೊಸ ಸಿನಿಮಾ ಬಂದರೂ ಅಪ್ಪ, ಅಮ್ಮನ ಜೊತೆ ನಾವೆಲ್ಲರೂ ಸಿನಿಮಾಕ್ಕೆ ಹೋಗುತ್ತಿದ್ದೆವು. ನನಗೆ ಗೊತ್ತಿಲ್ಲದ ಹಾಗೆ ಸಿನಿಮಾ ಕ್ರೇಜ್‌ ಬೆಳೆದುಬಿಟ್ಟಿತು. ಯಾವುದೇ ಹೊಸ ಕ್ಯಾಸೆಟ್‌ ಬಂದರೂ ಅದನ್ನು ಕೊಳ್ಳುವವರೆಗೆ ಬಿಡುತ್ತಿರಲಿಲ್ಲ. ಪದವಿ ಶಿಕ್ಷಣ ಮುಗಿದ ಬಳಿಕ ಸಿನಿಮಾಕ್ಕೆ ಹೋಗಲು ಪ್ರಯತ್ನಿಸಿದೆ. ಯೋಗರಾಜ್‌ ಭಟ್‌, ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿ ಈಗ ನಿರ್ದೇಶನದ ಹಂತಕ್ಕೆ ಬಂದಿದ್ದೇನೆ ನೋಡಿ.

ನಿರ್ದೇಶನವೇ ಆಸಕ್ತಿ ಯಾಕೆ?

ADVERTISEMENT

ಅದಕ್ಕೂ ಮೊದಲು ಒಂದು ಸಂಗತಿ ಹೇಳಬೇಕು. ಇವನೇನಾಗುತ್ತಾನೋ ಎಂದೆಲ್ಲಾ ಛೇಡಿಸುವವರು, ಆಡಿಕೊಳ್ಳುವವರೂ ಇದ್ದರು. ಇದನ್ನೆಲ್ಲವನ್ನೂ ಮೀರಿ ಬೆಳೆಯಬೇಕು ಎಂಬ ಹಟ ಬಂತು. ಅದುವರೆಗೆ ಸಿನಿಮಾ ನೋಡಿ ಕಥೆ ಹೇಳುತ್ತಿದ್ದೆ. ಆದರೆ, ಈಗ ಸಿನಿಮಾ ಜಗತ್ತಿನೊಳಗೆ ಪ್ರವೇಶಿಸಬೇಕು. ಒಂದಿಷ್ಟು ಓದಿಕೊಂಡೆ. ಇಲ್ಲಿ ಮೇಕಿಂಗ್‌ ಅನ್ನುವುದು ನಮ್ಮ ಕಲ್ಪ‍ನೆಯನ್ನು ಸಾಕಾರಗೊಳಿಸುವ ಕ್ರಿಯೆ. ಅಂದರೆ ನಾನೇ ಆ ಚಿತ್ತಾರ ಬಿಡಿಸಬೇಕು. ಅದು ನಿರ್ದೇಶಕನಿಂದ ಸಾಧ್ಯ. ಯೋಗರಾಜ್‌ ಭಟ್ಟರ ಪ್ರಭಾವ, ಸೂರಿ ಅವರು ಕಲಿಸಿದ ಬದುಕಿನ ಪಾಠಗಳೂ ಜೊತೆಗಿದ್ದವು. ನಟನೆಯ ಅವಕಾಶವೇನೋ ಬಂದಿತು. ಆದರೆ, ನಿರ್ದೇಶನವೇ ನನ್ನ ಗುರಿ ಆಗಿತ್ತು.

‘ಕಾಲಾಪತ್ಥರ್‌’ನಲ್ಲಿ ಏನಿದೆ?

ಇದು ಪೂರ್ಣ ಹೊಸದು. ಪ್ರಯೋಗಾತ್ಮಕ ಕಮರ್ಷಿಯಲ್‌ ಚಿತ್ರ. ಹಾಗೆಂದು ಭೂಗತ ಜಗತ್ತಿನ ಕಥೆ ಅಲ್ಲ. ಒಬ್ಬ ನಿರೂಪಕನಿಂದ ಆರಂಭವಾಗಿ ಅವರಿಂದಲೇ ಕೊನೆಗೊಳ್ಳುತ್ತದೆ. ನಮ್ಮ ನಾಡಿನದೇ ಕಥೆ ಇದು. ಕಥೆಯೊಳಗೆ ಇಳಿದಂತೆ ಈ ಸಿನಿಮಾ ಪ್ರೇಕ್ಷಕನಿಗೆ ತುಂಬಾ ಮಜಾ ಕೊಡುತ್ತದೆ.

ನಿಮ್ಮ ಮತ್ತು ಧನ್ಯಾ ರಾಜ್‌ಕುಮಾರ್‌ ಕಾಂಬಿನೇಷನ್‌ ಹೇಗಿದೆ?

ಧನ್ಯಾ ಅವರದ್ದು ತುಂಬಾ ಪ್ರಬುದ್ಧ ಪಾತ್ರ. ಲಂಗ ದಾವಣಿ ಹಾಕಿಕೊಂಡ ಹಳ್ಳಿ ಹೆಣ್ಣು ಮಗಳು ಗಂಗಾ. ನಾಯಕ (ವಿಕ್ಕಿ) ಶಂಕರ. ಶಂಕರ ಗಂಗಾಳನ್ನು ತಲೆಯ ಮೇಲೆ ಹೊತ್ತಿರುತ್ತಾನಲ್ಲಾ, ಅಂಥದ್ದೇ ಕಲ್ಪನೆಯನ್ನು ಇಲ್ಲಿ ಹೇಳಲು ಹೊರಟಿದ್ದೇವೆ.

ಈಗ ಚಿತ್ರದ ಟಾಕಿ ಭಾಗ ಮತ್ತು ಒಂದೆರಡು ಸಾಹಸ ದೃಶ್ಯಗಳು ಬಾಕಿ ಇವೆ. ಬಹುಶಃ ಜೂನ್‌ ವೇಳೆ ಚಿತ್ರ ತೆರೆಗೆ ಬರಲಿದೆ.

ಸಿನಿಮಾ ಅಂದರೆ ನಿಮ್ಮ ಪ್ರಕಾರ?

ನೋಡಿ ಚಿತ್ರೋದ್ಯಮದಲ್ಲಿ ನನ್ನನ್ನು ಇನ್ನೂ ಹೊಸಬ ಎಂದೇ ಗುರುತಿಸುತ್ತಾರೆ. ಅದೇನೇ ಇರಲಿ, ಕಥೆಯನ್ನು ಕನಿಷ್ಠಮಟ್ಟದಲ್ಲಿ ಪ್ರಸ್ತುತಪಡಿಸಿ. ಅದು ಪ್ರೇಕ್ಷಕನಿಗೆ ಅರ್ಥವಾದರೆ ಸಾಕು. ಚಿತ್ರ ಗೆಲ್ಲುತ್ತದೆ. ಕಥೆಯೇ ಪ್ರಧಾನ ವಿಷಯ. ಹಾಗಾಗಿ ಎಷ್ಟು ಅದ್ದೂರಿಯಾಗಿ ಮಾಡುತ್ತೀರಿ ಅನ್ನುವುದಕ್ಕಿಂತಲೂ ಎಷ್ಟು ಅರ್ಥಮಾಡಿಸುತ್ತೀರಿ ಎನ್ನುವುದು ಮುಖ್ಯ.

ಮುಂದಿನ ಯೋಜನೆಗಳು?

ನಾನು ಈವರೆಗೂ ಹೀಗೇ ಎಂದು ಯೋಜನೆ ಹಾಕಿದವನಲ್ಲ. ಅವಕಾಶಗಳು ಬಂದವು. ಹಾಗೇ ಬಂದಿದ್ದೇನೆ. ಕಾಲ ಹೇಗೆ ದಾರಿ ತೋರುತ್ತದೆಯೋ ಅದರ ಪ್ರಕಾರ ಹೋಗುತ್ತೇನೆ. ಒಳ್ಳೆಯ ಕತೆ ಇರುವ ಚಿತ್ರಗಳನ್ನು ಮಾಡಬೇಕು. ಮನುಷ್ಯನನ್ನು ಟ್ರಿಗರ್‌ ಮಾಡುತ್ತಲೇ ಇರಬೇಕು. ಬೆಳೆಯುತ್ತಲೇ ಹೋಗುತ್ತೇವೆ.

ಶೂಟಿಂಗ್‌ ಸಂದರ್ಭದ ಅನುಭವಗಳು?

ಖಂಡಿತಾ ಅವುಗಳನ್ನು ಮರೆಯಲಾಗದು. ವಿಜಯಪುರ ಜಿಲ್ಲೆಯ ಜೈನಾಪುರ ಎಂಬ ಹಳ್ಳಿಯಲ್ಲಿ ನಮ್ಮ ಶೂಟಿಂಗ್‌ ಇತ್ತು. ಆ ಊರಿನ ಜನ ಇಡೀ ಊರನ್ನೇ ಸೆಟ್‌ ರೂಪದಲ್ಲಿ ಬಿಟ್ಟುಕೊಟ್ಟರು. ಪ್ರತಿ ಮನೆಯಲ್ಲೂ ನಾನು ಊಟ ಮಾಡಿದ್ದೇನೆ. ಜನರೂ ನಮ್ಮನ್ನು ಮನೆಗೆ ಕರೆಯುತ್ತಿದ್ದರು. ಮನೆಯ ಮಕ್ಕಳ ಹಾಗೆ ನೋಡಿಕೊಂಡಿದ್ದಾರೆ. ಶೂಟಿಂಗ್‌ ಮುಗಿದಾಗ ಊರಿನ ಜನರೇ ಅತ್ತುಬಿಟ್ಟರು. ನಾವೂ ಭಾವುಕರಾದೆವು. ಈ ಕಾಲದಲ್ಲೂ ಇಂಥ ಜನ ಇರುತ್ತಾರಾ? ಒಳ್ಳೆಯತನ ಇನ್ನೂ ಇಷ್ಟು ಇದೆಯಾ ಎಂದು ಅಚ್ಚರಿಪಟ್ಟಿದ್ದೇನೆ. ಹಾಗಾಗಿಯೇ ಮಳೆ– ಬೆಳೆ ಸಕಾಲದಲ್ಲಿ ಆಗುತ್ತಿದೆ. ನಮ್ಮ ಶೂಟಿಂಗ್‌ ಸ್ಥಳಕ್ಕೆ ದಿನಾ ಬರುತ್ತಿದ್ದ ನಾಯಿಯೊಂದು ನಾವು ವಾಪಸಾದ ಬಳಿಕ ಎರಡು ದಿನ ಆಹಾರ ಸೇವಿಸಲಿಲ್ಲ ಎಂದೂ ಕೇಳಿದ್ದೇನೆ. ಅಷ್ಟೊಂದು ಗಾಢ ಪ್ರೀತಿಯನ್ನು ಸಂಪಾದಿಸಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.