ADVERTISEMENT

‘ಡಾಟರ್‌ ಆಫ್‌ ಪಾರ್ವತಮ್ಮ’ ಸೆಕೆಂಡ್‌ ಲುಕ್‌ ರಿಲೀಸ್

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 7:29 IST
Last Updated 29 ಅಕ್ಟೋಬರ್ 2018, 7:29 IST
‘d/o ಪಾರ್ವತಮ್ಮ’ ಸಿನಿಮಾದಲ್ಲಿ ಹರಿಪ್ರಿಯಾ
‘d/o ಪಾರ್ವತಮ್ಮ’ ಸಿನಿಮಾದಲ್ಲಿ ಹರಿಪ್ರಿಯಾ   

ಬೆಂಗಳೂರು: ‘d/o ಪಾರ್ವತಮ್ಮ’ ಸಿನಿಮಾದ ಸೆಕೆಂಡ್‌ ಲುಕ್‌ ಅನ್ನುಭಾನುವಾರ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಗೊಳಿಸಲಾಗಿದೆ. ಈ ಸಿನಿಮಾದಲ್ಲಿ ಪಾರ್ವತಮ್ಮನ ಮಗಳಾಗಿ ಕಾಣಿಸಿಕೊಂಡಿರುವಹರಿಪ್ರಿಯಾ ಹುಟ್ಟುಹಬ್ಬಕ್ಕೆಚಿತ್ರತಂಡ ಪೋಸ್ಟರ್‌ ಬಿಡುಗಡೆಯ ಗಿಫ್ಟ್‌ ನೀಡಿದೆ.

ಶಂಕರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿಪಾರ್ವತಮ್ಮನಾಗಿ ಸುಮಲತಾ ಅಂಬರೀಶ್‌ ನಟಿಸುತ್ತಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಇದು ಹರಿಪ್ರಿಯಾ ಅವರ 25ನೇ ಕನ್ನಡ ಸಿನಿಮಾ.

ಏಪ್ರಿಲ್‌ 29ರಂದು ಈ ಸಿನಿಮಾದ ಶೀರ್ಷಿಕೆ ಬಿಡುಗಡೆಯಾಗಿತ್ತು. ಅದಾದ ಒಂದು ತಿಂಗಳಲ್ಲಿ (ಮೇ 29) ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿತ್ತು. ಹಿಂದೆಂದೂ ಕಾಣದ ರಗಡ್‌ ಪೊಲೀಸ್‌ ಲುಕ್‌ನಲ್ಲಿ ಹರಿಪ್ರಿಯಾಮಿಂಚಿದ್ದರು.ಅಕ್ಟೋಬರ್‌ 6ರಂದು‘d/o ಪಾರ್ವತಮ್ಮ’ ಟೀಸರ್‌ ತೆರೆಕಂಡಿತ್ತು.

ADVERTISEMENT

ಶೀರ್ಷಿಕೆಯೇ ಸೂಚಿಸುವಂತೆ ಇದು ನಾಯಕಿ ಪ್ರಧಾನ ಚಿತ್ರ. ಅಮ್ಮ ಮಗಳ ಸಂಬಂಧವೇ ಇಲ್ಲಿ ಮುಖ್ಯವಾದ ಕಥಾವಸ್ತು.ಕಥೆಗೂ ಈ ಶೀರ್ಷಿಕೆ ಸೂಕ್ತ ಅನಿಸಿದ್ದರಿಂದ ನಿರ್ದೇಶಕರು ಈ ಶೀರ್ಷಿಕೆ ಇಟ್ಟಿದ್ದಾರೆ.

‘d/o ಪಾರ್ವತಮ್ಮ’ ಸಿನಿಮಾದ ಫಸ್ಟ್‌ ಲುಕ್‌

ಈ ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ತನಿಖಾಧಿಕಾರಿಯ ಪಾತ್ರ. ಈ ಸಿನಿಮಾದ ಟೈಟಲ್‌ ಕೇಳಿದ ತಕ್ಷಣ ಅವರಿಗೆ ಶಾಕ್‌ ಆಯಿತಂತೆ. ‘ಚಿತ್ರದ ಟೈಟಲ್‌ನಲ್ಲಿ ಪಾರ್ವತಮ್ಮ ಅವರ ಹೆಸರು ಇರುವುದನ್ನು ಕೇಳಿ ನನಗೆ ಕುತೂಹಲವಾಯಿತು. ಪಾರ್ವತಮ್ಮ ರಾಜ್‌ಕುಮಾರ್‌ ದೊಡ್ಡ ಶಕ್ತಿ. ಆದರೆ, ಅವರ ಬದುಕಿಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

‘ರಣ ವಿಕ್ರಮ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಶಂಕರ್‌ ಜೆ. ಈ ಚಿತ್ರದ ನಿರ್ದೇಶಕ. ನಟರಾದ ಪ್ರಭು ಮತ್ತು ಸೂರಜ್‌ ಗೌಡ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಶಶಿಧರ, ವಿಜಯಲಕ್ಷ್ಮಿ ಕೃಷ್ಣೇಗೌಡ, ಸಂದೀಪ್‌ ಶಿವಮೊಗ್ಗ, ಶ್ವೇತಾ ಮಧುಸೂದನ್ ಬಂಡವಾಳ ಹೂಡಿದ್ದಾರೆ. ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜಿಸಿದ್ದಾರೆ. ಅರುಳ್‌ ಕೆ. ಸೋಮಸುಂದರಂ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.