ಚಿತ್ರ:ಡಬಲ್ ಇಂಜನ್
ನಿರ್ಮಾಣ: ಅರುಣ್ ಕುಮಾರ್ ಎನ್., ಶ್ರೀಕಾಂತ್ ಮಠಪತಿ, ಮಂದಾರಾ ಎ., ಮಧು
ನಿರ್ದೇಶನ: ಚಂದ್ರ ಮೋಹನ್
ತಾರಾಗಣ: ಚಿಕ್ಕಣ್ಣ, ಸುಮನ್ ರಂಗನಾಥ್, ಅಶೋಕ್, ಪ್ರಭು, ಪ್ರಿಯಾಂಕಾ ಮಲ್ನಾಡ್, ಸಾಧುಕೋಕಿಲ, ಅಚ್ಯುತ್ ಕುಮಾರ್, ಸುಚೀಂದ್ರ ಪ್ರಸಾದ್
‘ಡಬಲ್ ಇಂಜನ್’ ಚಿತ್ರದಲ್ಲಿ ನಿರ್ದೇಶಕರು, ಸ್ಟಾರ್ ಪಾತ್ರವೊಂದನ್ನು ಸೃಷ್ಟಿಸಿ ಗಾಂಧಿನಗರದ ಸೂಪರ್ ಸ್ಟಾರ್‌ಗಳ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಸ್ಟಾರ್ ನಟರ ಪೊಳ್ಳುತನ, ಅದರಿಂದಾಗಿ ನಿರ್ದೇಶಕ ಪಡುವ ಪಡಿಪಾಟಲುಗಳನ್ನು ಲೇವಡಿ ಮಾಡಿದ್ದಾರೆ. ಹಾಗೆ ಮಾಡಲಿಕ್ಕೆ ಎಂದೇ ಹಲವು ದೃಶ್ಯಗಳನ್ನು ಮೀಸಲಿರಿಸಿದ್ದಾರೆ. ಅಷ್ಟೆಲ್ಲ ಮಾಡಿದ ಅವರು ತಮ್ಮ ಸಿನಿಮಾದ ಮೂಲಕ ಏನು ಹೇಳಹೊರಟಿದ್ದಾರೆ? ಸ್ಟಾರ್ ನಟರು ಇಲ್ಲದೆಯೂ ನಿರ್ದೇಶಕ ಕೆಟ್ಟ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರಷ್ಟೆ.
‘ಡಬಲ್ ಇಂಜನ್’ ಸಿನಿಮಾ ಸಿಡಿಲು ಬಡಿದ ಒಂದು ಚೊಂಬಿನ ಸುತ್ತ ಸುತ್ತುತ್ತದೆ. ಆದರೆ ಒಂದು ಗಟ್ಟಿಯಾದ ಹೆಣಿಗೆ ಇಲ್ಲದೆ, ಎತ್ತೆತ್ತಲೋ ಹಾರಾಡುತ್ತ, ಅಸಂಬದ್ಧ ದೃಶ್ಯಗಳನ್ನು ಪೇರಿಸಿಕೊಳ್ಳುತ್ತ, ಬೀಸಿ ಒಗೆದ ಹಾಳು ಚೊಂಬಿನ ಹಾಗೆ ಎಲ್ಲೆಲ್ಲೋ ಹೋಗಿ ಬೀಳುತ್ತದೆ. ಚೊಂಬಿನೊಳಗೆ ಆರೋಗ್ಯಕರವಾದ ಧಾನ್ಯವನ್ನು ಆಯ್ದು ಇರಿಸುವ ಕಷ್ಟ ತೆಗೆದುಕೊಳ್ಳದ ನಿರ್ದೇಶಕರು ದ್ವಂದ್ವಾರ್ಥದ ಸಂಭಾಷಣೆಗಳಿಂದ ತುಂಬಿದ್ದಾರೆ. ಅವು ಸಾಕಷ್ಟು ಕೆಟ್ಟದಾಗಿ ಶಬ್ದ ಮಾಡುತ್ತವೆ. ಕಾಮವೊಂದೇ ಕಾಮಿಡಿಗೆ ವಸ್ತು ಎಂಬ ಹಳಸಲು ಮೌಢ್ಯಕ್ಕೇ ನಿರ್ದೇಶಕರು ನೇತುಬಿದ್ದಿದ್ದಾರೆ. ಹಾಗಾಗಿಯೇ ಸುಮನ್ ರಂಗನಾಥ್ ಎಂಬ ಕಲಾವಿದೆಗಿಂತ ಅವರ ಅಂಗಗಳ ಸುತ್ತ ಹುಟ್ಟಿಸಬಹುದಾದ ಕಳಪೆ ಹಾಸ್ಯವೇ ಅವರಿಗೆ ಮುಖ್ಯವೆನಿಸಿದೆ. ಇದೊಂದು ಬಗೆಯಲ್ಲಿ ಕಮಲವನ್ನು ಬಿಟ್ಟು ಕೆಸರನ್ನು ಬಾಚುವ ಮನಃಸ್ಥಿತಿ.
ಚಿತ್ರದುದ್ದಕ್ಕೂ ಇಂಥ ಅಪಸವ್ಯಗಳನ್ನೇ ತೋರಿಸಿಕೊಂಡು ಕೊನೆಯಲ್ಲಿ ಅವಸರವಸರದಲ್ಲಿ ‘ಹಳ್ಳಿಯೇ ಮೇಲು’ ‘ದಿಢೀರ್ ಹಣ ಮಾಡುವುದಕ್ಕಿಂತ ಶ್ರಮವಹಿಸಿ ದುಡಿಯುವುದು ಮುಖ್ಯ’ ಎಂಬ ಸಂದೇಶಗಳನ್ನು ಕೊಡಹೊರಟಿರುವುದು ನಿಜದ ಕಾಳಜಿಯನ್ನು ಅಪಹಾಸ್ಯ ಮಾಡಿದಂತಿದೆ. ಅಭಿರುಚಿಯ ಹಂಗಿಲ್ಲದೇ ನೋಡಬಲ್ಲವರಿಗೆ ಅಲ್ಲಲ್ಲಿ ಒಂದಿಷ್ಟು ನಗಿಗುವುಕ್ಕಿಸುವ ಸನ್ನಿವೇಶಗಳಂತೂ ಸಿಗುತ್ತವೆ.
ಸಿನಿಮಾದ ಕೊನೆಯಲ್ಲಿ ಬರುವ ‘ಬರಿ ಮೂರೇ ದಿನದ ಬಾಳು’ ಎಂಬ ಹಾಡು ಸಾಹಿತ್ಯದ ಕಾರಣಕ್ಕೆ ಗಮನಸೆಳೆಯುತ್ತದೆ. ಆದರೆ ಕೊಳದ ಕೆಸರೇ ಕಮಲವನ್ನು ನುಂಗಿದ ಹಾಗೆ ಆ ಹಾಡನ್ನು ಸಿನಿಮಾದಲ್ಲಿನ ಕೆಟ್ಟ ಗದ್ದಲ ನುಂಗಿಬಿಡುತ್ತದೆ.
ಚಿತ್ರದಲ್ಲಿನ ಪಾತ್ರವೊಂದು ‘‘ತುಂಬ ಓದಿರೋರನ್ನೆಲ್ಲ ಕನ್ನಡ ಇಂಡಸ್ಟ್ರಿಯೊಳಗೆ ಬಿಟ್ಕೋಬೇಡಿ. ನಮ್ ಇಂಡಸ್ಟ್ರೀನ ಆಲ್‌ರೆಡಿ ‘ತಿಥಿ’ ಮಾಡ್ಬಿಟ್ಟೋರೆ’’ ಎಂದು ಹೇಳುತ್ತದೆ. ಇದು ಕೇವಲ ವ್ಯಂಗ್ಯವಷ್ಟೇ ಅಲ್ಲ, ಈ ಚಿತ್ರದ ನಿರ್ದೇಶಕರ ನಿಜವಾದ ಆತಂಕವೂ ಹೌದು ಎಂಬುದು ಸಿನಿಮಾ ಮುಗಿದ ಮೇಲೆ ಮನದಟ್ಟಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.