2022ರಲ್ಲಿ ಸೆಟ್ಟೇರಿದ ನಟ ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ನಡೆದ ಎಡಗೈ ಬಳಕೆದಾರರ ದಿನದಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
‘ಎಡಗೈ ಬಳಸುವವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಜೀವನಶೈಲಿ ಕುರಿತು ಈ ಚಿತ್ರ ಕಟ್ಟಿಕೊಡಲಾಗಿದೆ. ದಿಗಂತ್ ಅವರು ಇಲ್ಲಿಯವರೆಗೂ ಚಾಕೋಲೇಟ್ ಬಾಯ್ ರೀತಿ ಇದ್ದರು. ರೊಮ್ಯಾಂಟಿಕ್ ಹೀರೊ ದಿಗಂತ್ ಈ ಸಿನಿಮಾದಲ್ಲಿ ಸಂಪೂರ್ಣವಾಗಿ ವಿಭಿನ್ನ ಪಾತ್ರದಲ್ಲಿ ಕಾಣಸಿಗಲಿದ್ದಾರೆ. ಎಡಗೈ ಬಳಸುವವರು ಅನುಭವಿಸುವ ಸಮಸ್ಯೆ, ಸಂಕಷ್ಟದ ಸರಮಾಲೆಯೇ ಚಿತ್ರದಲ್ಲಿದೆ’ ಎಂದಿದೆ ಚಿತ್ರತಂಡ.
ಸಿನಿಮಾಗೆ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿದ್ದು ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನಲ್ಲಿರುವ ಈ ಸಿನಿಮಾದಲ್ಲಿ ದಿಗಂತ್‌ಗೆ ಜೋಡಿಯಾಗಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್‌ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.