ADVERTISEMENT

ಏಕ್ ಲವ್ ಯಾ ಹೀರೊ ಸಂದರ್ಶನ: ರಾಣಾಗೆ ಅನುಭವವೇ ಅಮೃತ

ಶರತ್‌ ಹೆಗ್ಡೆ
Published 24 ಫೆಬ್ರುವರಿ 2022, 20:00 IST
Last Updated 24 ಫೆಬ್ರುವರಿ 2022, 20:00 IST
ರಾಣಾ
ರಾಣಾ   

7 ವರ್ಷಗಳ ಸತತ ಪರಿಶ್ರಮ, ಮೂರು ವರ್ಷಗಳ ದುಡಿಮೆಯ ಅನುಭವ... ಕೊನೆಗೂ ಸಿಕ್ಕಿತು ಒಂದು ದೊಡ್ಡ ಬ್ಯಾನರ್‌ನ ಸಿನಿಮಾ ಅವಕಾಶ!. ಹೀಗೆ ಪಕ್ವವಾದ ಬಳಿಕವೇ ‘ಏಕ್‌ ಲವ್‌ ಯಾ’ ಮೂಲಕ ಬೆಳ್ಳಿ ತೆರೆ ಮೇಲೆ ಭರ್ಜರಿಯಾಗಿ ಪ್ರವೇಶಿಸಿದವರು ರಾಣಾ. ನಟಿ ರಕ್ಷಿತಾ ಅವರ ಸಹೋದರ ರಾಣಾ ಅವರ ಸಿನಿ ಕನಸುಗಳು ತೆರೆದಿದ್ದು ಹೀಗೆ...

ಅಭಿಷೇಕ್‌ ಅವರು ರಾಣಾ ಆಗಿ ಬದಲಾದದ್ದು ಹೇಗೆ?

ಹೌದು, ನನ್ನ ಮೂಲ ಹೆಸರು ಅಭಿಷೇಕ್‌. ಸಿನಿ ಬದುಕಿನಲ್ಲಿ ಹಲವು ನಂಬಿಕೆಗಳ ಕಾರಣಕ್ಕೆ ಹೆಸರು ಬದಲಾಯಿತು. ಆರ್‌ದಿಂದ ಆರಂಭವಾಗುವ ಹೆಸರು ಒಳ್ಳೆಯದು ಎಂದು ಹಿರಿಯರು ಸಲಹೆ ಮಾಡಿದರು. ಹಾಗಾಗಿ ತೆರೆಯ ಮೇಲಷ್ಟೇ ರಾಣಾ ಹೆಸರು ಇದೆ.

ADVERTISEMENT

ಎಂಜಿನಿಯರ್‌ ಆಗಬೇಕಾದವರು ನಟನೆಯ ಹಾದಿ ಹಿಡಿದದ್ದು?

ಕುಟುಂಬದವರೂ ಕಲಾವಿದರೇ. ನನ್ನ ಅಮ್ಮ ಮಮತಾ ರಾವ್‌ ಕೂಡಾ ಅಭಿನೇತ್ರಿ. ಹಾಗಾಗಿ ಈ ಆಸಕ್ತಿಯೆಲ್ಲಾ ರಕ್ತಗತವಾಗಿಯೇ ಬಂದಿತ್ತು. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮುಗಿಸುವಷ್ಟರಲ್ಲೇ ನನ್ನ ನಟನೆಯ ಹಾದಿ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದೆ. ಪದವಿ ಓದುತ್ತಲೇ ನಟನೆ, ಫೈಟಿಂಗ್‌, ನೃತ್ಯ ಕಲಿತದ್ದು ಆಯಿತು. ಎಂಜಿನಿಯರಿಂಗ್‌ ಪದವಿ ಮುಗಿಯುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುವಂತೆ ಮನೆಯಲ್ಲಿ ಒತ್ತಾಯಿಸಿದರು. ನನಗ್ಯಾಕೋ ಈ ಓದು ಸಾಕು ಅನಿಸಿತು. ನಟನೆಯ ಹಾದಿ ಹಿಡಿಯುವುದಾಗಿ ಹೇಳಿದೆ. ಕೆಲಕಾಲ ನ್ಯೂಯಾರ್ಕ್‌ನಲೀ ಸ್ಟ್ರಾಸ್‌ಬರ್ಗ್‌ ಥಿಯೇಟರ್‌ ಆ್ಯಂಡ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತೆ. ಮುಂದೆ ಕರ್ನಾಟಕದಲ್ಲಿ ಕೃಷ್ಣಮೂರ್ತಿ ಕವತ್ತಾರು ರಂಗಭೂಮಿಯ ಗುರುಗಳಾದರು. ಹೀಗೆ ಕಲಾಪ್ರಯಾಣ ಮುಂದುವರಿದಿತ್ತು.

ಸಿನಿ ಕ್ಷೇತ್ರದ ಅನುಭವ?

ಎಲ್ಲಾ ಸಿನಿಮಾಗಳನ್ನು ನೋಡುತ್ತಿದ್ದೆ. ಪ್ರತಿಯೊಂದರಲ್ಲೂ ಕಲಿಯುವುದಿದೆ.‘ದಿ ವಿಲನ್‌’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆಗ ಶಿವರಾಜ್‌ಕುಮಾರ್‌, ಸುದೀಪ್‌ ಅವರ ಕೆಲಸವನ್ನು ಹತ್ತಿರದಿಂದ ನೋಡಿದೆ. ಅವರಿಬ್ಬರಿಂದಲೂ ಕಲಿಯುವುದು ತುಂಬಾ ಇದೆ.ಗಡ್ಡ ಬಿಡಲು ಹೇಳಿದ್ದೂ ಸುದೀಪ್‌ ಅವರೇ. ಸುದೀಪ್‌ ಅವರ ನಟನೆಯ ಚಿತ್ರೀಕರಣವನ್ನು ಮಾನಿಟರ್‌ ಮಾಡಿದ್ದೆ. ಕೆಲವು ಭಾಗಗಳನ್ನು ಅಭಿನಯಿಸು ಎನ್ನುತ್ತಿದ್ದರು. ಅದೇ ಅಭಿನಯವನ್ನು ಸುದೀಪ್‌ ಅವರು ಒಂದೇ ಟೇಕ್‌ನಲ್ಲಿ ಮಾಡಿ ತೋರಿಸುತ್ತಿದ್ದರು. ಈ ಅಂಶವನ್ನು ನಾನು ಗಮನಿಸಿದೆ. ಶಿವಣ್ಣ ಬೆರೆಯುವ ರೀತಿ... ಇಂಥದ್ದು ಅವೆಷ್ಟೋ ಇವೆ.

ಪ್ರಾಯೋಗಿಕವಾಗಿ ಕೆಲಸ ಮಾಡಿದ್ದು ಒಂದು ದೊಡ್ಡ ಪಾಠಶಾಲೆಯ ಅನುಭವ. ಆದರೆ, ನನ್ನ ಗುರಿ ನಟನೆಯತ್ತಲೇ ಇತ್ತು. ಅದನ್ನು ಶಿವಣ್ಣ ಮತ್ತು ಸುದೀಪ್‌ ಗುರುತಿಸಿ ಪ್ರೋತ್ಸಾಹಿಸಿದರು.

ಮುಂದಿನ ಕನಸುಗಳು?

ಮಾಸ್‌ ಚಿತ್ರಗಳಲ್ಲಿ ನಂಬಿಕೆ ಇಲ್ಲ. ಒಳ್ಳೆಯ ಚಿತ್ರ ಕೊಡಬೇಕು ಅಷ್ಟೆ. ತುಂಬಾ ಕಥೆಗಳನ್ನು ಕೇಳುತ್ತಿದ್ದೇನೆ. ಆಸಕ್ತಿದಾಯಕವೆನಿಸಿದ್ದು ಇನ್ನೂ ಸಿಕ್ಕಿಲ್ಲ. ಸದ್ಯ ‘ಏಕ್‌ ಲವ್‌ ಯಾ’ ಬಿಡುಗಡೆ ಆಗಿದೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡೋಣ. ಬಳಿಕ ಹೊಸ ಯೋಜನೆಗಳ ಬಗ್ಗೆ ಮಾತನಾಡೋಣ.

ರಕ್ಷಿತಾ ಅವರ ತಮ್ಮ ಎಂಬ ಕಾರಣಕ್ಕೆ ‘ಏಕ್‌ ಲವ್‌ ಯಾ’ ಅವಕಾಶ ಬಂತೇ?

ಅದೊಂದು ಪ್ಲಸ್‌ ಪಾಯಿಂಟ್‌ ಅಷ್ಟೆ. ನನ್ನ ಪರಿಶ್ರಮವನ್ನೂ ಅಕ್ಕ ಹಾಗೂ ನಿರ್ದೇಶಕರು (ಪ್ರೇಮ್‌) ನೋಡಿದ್ದಾರೆ. ಈ ಕ್ಷೇತ್ರ ಪ್ರವೇಶಿಸಲು ಸಿದ್ಧತೆಗೇ ಮೂರುವರ್ಷ ತಗುಲಿತು ನೋಡಿ. ಊಹೆಯೂ ಮಾಡದ ರೀತಿಯಲ್ಲಿ ‘ಏಕ್‌ ಲವ್‌ ಯಾ’ ಚಿತ್ರದ ಅವಕಾಶ ಬಂತು. ಅಕ್ಕ, ಭಾವನ ಬೆಂಬಲ, ಮಾರ್ಗದರ್ಶನ ಸಿಕ್ಕಿತು. ಈಗಾಗಲೇ ಅವರೆಲ್ಲಾ ಈ ಕ್ಷೇತ್ರದಲ್ಲಿ ಪಳಗಿದವರಾಗಿದ್ದರಿಂದ ನನಗೆ ಒಳ್ಳೆಯ ಅವಕಾಶ ಸಿಕ್ಕವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.