‘ಕಾಟೇರ’ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
‘ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ನಟ ರಾಣಾ, ‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಯಾವಾಗ..’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೊ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲಿಯೂ ಗೀತೆ ಅನಾವರಣಗೊಂಡಿದೆ. ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಸಿದ್ ಶ್ರೀರಾಮ್ ದನಿಯಾಗಿದ್ದಾರೆ. ಡಿ.ಇ ಮ್ಮನ್ ಸಂಗೀತ ಹಾಡಿಗಿದೆ.
ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆಯಾಗಿರುವ ‘ಏಳುಮಲೆ’ ಸಿನಿಮಾದಲ್ಲಿ ರಾಣಾ ಕನ್ನಡದ ಹುಡುಗ ‘ಹರೀಶ’ನಾಗಿ ಹಾಗೂ ಪ್ರಿಯಾಂಕಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜಗಪತಿ ಬಾಬು, ಟಿ.ಎಸ್.ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ತಾರಾಬಳಗದಲ್ಲಿದ್ದಾರೆ.
ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾ ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ ಎಂದಿದೆ ಚಿತ್ರತಂಡ. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಅದ್ವೈತ್ ಗುರುಮೂರ್ತಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ್ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ ಚಿತ್ರಕ್ಕಿದೆ. ಈ ಸಿನಿಮಾ ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲಿ ಬಿಡುಗಡೆ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.