ADVERTISEMENT

ಮೋಹನಲಾಲ್ ಅಭಿನಯದ ‘ಎಂಪುರಾನ್’ ಚಿತ್ರದಲ್ಲಿ 24 ಕಡೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 20:27 IST
Last Updated 1 ಏಪ್ರಿಲ್ 2025, 20:27 IST
Empuraan
Empuraan   

ತಿರುವನಂತಪುರ: ವಿವಾದಿತ ಪಾತ್ರದ ಹೆಸರು ಬದಲಾವಣೆ, ಕೇಂದ್ರ ಸಚಿವರೊಬ್ಬರಿಗೆ ಧನ್ಯವಾದ ಹೇಳಿರುವುದನ್ನು ಕೈಬಿಟ್ಟಿರುವುದು ಸೇರಿದಂತೆ ಮೋಹನಲಾಲ್ ಅಭಿನಯದ ‘ಎಲ್‌2: ಎಂಪುರಾನ್’ ಚಿತ್ರದಲ್ಲಿ 24 ಕಡೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಈ ಸಿನಿಮಾ ವಿರುದ್ಧ ಪ್ರಬಲವಾದ ಅಭಿಯಾನ ನಡೆಸಿದ್ದಾರೆ. ಈ ನಡುವೆ ಚಿತ್ರದ ನಿರ್ಮಾಪಕ ಆ್ಯಂಟನಿ ಪೆರುಂಬವೂರ್ ಅವರು, ಕತ್ತರಿ ಪ್ರಯೋಗವನ್ನು ಯಾರ ಒತ್ತಡವೂ ಇಲ್ಲದೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದ್ದಾರೆ.

ಕತ್ತರಿ ಪ್ರಯೋಗದ ನಂತರದ ಸಿನಿಮಾಕ್ಕೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ, ಚಿತ್ರವು ಯಾವುದೇ ಕ್ಷಣದಲ್ಲಿ ಮರುಬಿಡುಗಡೆ ಆಗುವ ನಿರೀಕ್ಷೆ ಇದೆ.

ADVERTISEMENT

ಸಿನಿಮಾದ ಖಳನಾಯಕ ಬಾಲರಾಜ್‌ ಅಲಿಯಾಸ್ ‘ಬಾಬಾ ಬಜರಂಗಿ’ಯ ಹೆಸರನ್ನು ‘ಬಲದೇವ್’ ಎಂದು ಬದಲಾವಣೆ ಮಾಡಲಾಗಿದೆ. ಮೊದಲಿನ ಹೆಸರು ಬಜರಂಗದಳದ ನಾಯಕ ಬಾಬು ಬಜರಂಗಿ ಅವರಿಗೆ ಹೋಲುವಂತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಮಹಿಳೆಯರ ಮೇಲಿನ ಹಿಂಸಾಚಾರದ ಕೆಲವು ದೃಶ್ಯಗಳನ್ನು, ಪೂಜಾ ಕೇಂದ್ರಗಳನ್ನು ತೋರಿಸುವ ಕೆಲವು ದೃಶ್ಯಗಳನ್ನು ತೆಗೆಯಲಾಗಿದೆ. ಎನ್‌ಐಎ ಕುರಿತ ಉಲ್ಲೇಖವನ್ನು ಅಳಿಸಲಾಗಿದೆ. 2002ನೆಯ ಇಸವಿ ಕುರಿತ ಉಲ್ಲೇಖವನ್ನು ‘ಕೆಲವು ವರ್ಷಗಳ ಹಿಂದೆ’ ಎಂದು ಬದಲಾಯಿಸಲಾಗಿದೆ.

ಚಿತ್ರದಲ್ಲಿ ಒಟ್ಟು 2.08 ನಿಮಿಷಗಳಿಗೆ ಕತ್ತರಿ ಹಾಕಲಾಗಿದೆ. ಸೋಮವಾರದವರೆಗೆ ಈ ಸಿನಿಮಾ ಒಟ್ಟು ₹200 ಕೋಟಿಗೂ ಹೆಚ್ಚು ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.