ADVERTISEMENT

ನೆಪೊಟಿಸಂ: ಪ್ರವೇಶ ಸುಲಭ, ಆದರೆ ಇಲ್ಲೇ ನೆಲೆಸುವುದು ಕಷ್ಟ -ಶೃತಿ ಹಾಸನ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 7:14 IST
Last Updated 29 ಜುಲೈ 2020, 7:14 IST
ಶೃತಿ ಹಾಸನ್‌
ಶೃತಿ ಹಾಸನ್‌   

ಬಾಲಿವುಡ್‌ ಅಂಗಳದಲ್ಲಿ ಆರಂಭವಾದ ಸ್ವಜನಪಕ್ಷಪಾತದ ಚರ್ಚೆ ಈಗ ಇಡೀ ಭಾರತೀಯ ಸಿನಿಮಾರಂಗದಲ್ಲಿ ಹರಡಿದೆ. ಈ ಚರ್ಚೆ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಈಗ ದಕ್ಷಿಣದ ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕೂಡ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.

‘ನನಗೆ ಸಿನಿಮಾರಂಗಕ್ಕೆ ಪ್ರವೇಶ ಮಾಡುವ ಅವಕಾಶ ಸುಲಭವಾಗಿ ಸಿಕ್ಕರೂ ಸಿನಿರಂಗದಲ್ಲಿ ನೆಲೆಯೂರುವುದು ಕಷ್ಟವಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶೃತಿ ‘ನಾನು ಸಿನಿಮಾ ಹಿನ್ನೆಲೆಯುಳ್ಳವರ ಮಗಳು ಹಾಗೂ ನಾನು ಬೆಳೆದು ಬಂದ ವಾತಾವರಣದ ಕಾರಣದಿಂದ ಸಿನಿಮಾರಂಗಕ್ಕೆ ಪ್ರವೇಶ ಮಾಡುವುದು ಸುಲಭದ ಮಾತಾಗಿತ್ತು. ನನ್ನ ಹೆಸರಿನ ಮುಂದೆ ಹಾಸನ್ ಎಂದು ಇರುವ ಕಾರಣಕ್ಕೆ ನನಗೆ ಸುಲಭವಾಗಿ ಅವಕಾಶ ಸಿಕ್ಕಿತ್ತು. ಅದನ್ನು ನಾನು ಅಲ್ಲಗೆಳೆಯುವುದಿಲ್ಲ. ಆದರೆ ಸಾಮಾನ್ಯವಾಗಿ ನಾನು ಜೀವನದಲ್ಲಿ ನಿಧಾನವಾಗಿ ಕಲಿಯುವವಳು. ನನಗೆ ಸರಿಯಾದ ರೀತಿಯಲ್ಲಿ ಇನ್ನೊಬ್ಬರೊಂದಿಗೆ ಮಾತನಾಡುವುದೂ ತಿಳಿದಿಲ್ಲ. ಯಾರೂ ಉತ್ತಮರು ಎಂಬುದನ್ನು ಆಯ್ಕೆ ಮಾಡಲು ನನಗೆ ಬರುವುದಿಲ್ಲ.

ADVERTISEMENT

ವಾಸ್ತವ ಏನೆಂದರೆ ಈಗಲೂ ನಾನು ಸಾಮಾಜಿಕವಾಗಿ ವಿಚಿತ್ರವಾಗಿಯೇ ಇದ್ದೇನೆ ಎನ್ನಿಸುತ್ತದೆ. ಹಾಗಾಗಿ ಇಲ್ಲಿ ನನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ನನಗೆ ಸಿನಿಮಾ ಹಿನ್ನೆಲೆ ಇದ್ದರೂ ನಾನು ಸಿನಿಮಾರಂಗದಲ್ಲಿ ಪಯಣ ಮಾಡಲು ತುಂಬಾನೇ ಕಷ್ಟ ಪಟ್ಟಿದ್ದೇನೆ. ಅದು ಸುಲಭದ ಪಯಣ ಆಗಿರಲಿಲ್ಲ. ಆ ಕಾರಣಕ್ಕೆ ನಾನು ಹೇಳುವುದೇನೆಂದರೆ ಸಿನಿಮಾ ಹಿನ್ನೆಲೆ ಇದ್ದರೆ ಸಿನಿರಂಗಕ್ಕೆ ಪ್ರವೇಶ ಪಡೆಯುವುದು ಸುಲಭ. ಆದರೆ ಅಲ್ಲೇ ನೆಲೆಯೂರುವುದು ಕಷ್ಟ’ ಎಂದಿದ್ದಾರೆ. ಆ ಮೂಲಕ ನೆಪೊಟಿಸಂ ಕಾಟ ಸ್ಟಾರ್‌ಗಳ ಮಕ್ಕಳನ್ನೂ ಬಿಟ್ಟಿಲ್ಲ ಎಂದಿದ್ದಾರೆ.

ಸದ್ಯ ಶೃತಿ ಅಭಿನಯದ ‘ಯಾರಾ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಜುಲೈ 30ರಂದು ಈ ಸಿನಿಮಾ ಜೀ5 ನಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ತಿಗ್ಮಾಂಶು ಧುಲಿಯಾ ಅವರ ನಿರ್ದೇಶನವಿದೆ. ಚಿತ್ರದಲ್ಲಿ ಅಮಿತ್ ಸದ್‌, ವಿಜಯ್ ವರ್ಮಾ ಹಾಗೂ ವಿದ್ಯುತ್‌ ಜಮ್ಮಲ್ ಶೃತಿ ಜೊತೆ ತೆರೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.